* ಅರುಣ್ ಸಿಂಗ್ ಬಳಿ ಎಲ್ಲವನ್ನೂ ಹೇಳಿದ್ದೇನೆ: ಸಚಿವ ಯೋಗೇಶ್ವರ್
* ಸರ್ಕಾರ, ಪಕ್ಷದ ವರ್ಚಸ್ಸಿನ ಬಗ್ಗೆ ಖಾಸಗಿ ಸಮೀಕ್ಷೆ ನಡೆಸಲು ಸಲಹೆ
* ಬಹಿರಂಗವಾಗಿ ಮಾತನಾಡದಂತೆ ಯೋಗಿಗೆ ಅರುಣ್ ಸಿಂಗ್ ತಾಕೀತು
ಬೆಂಗಳೂರು(ಜೂ.18): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಸಚಿವ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಸರ್ಕಾರದ ಲೋಪದೋಷಗಳ ಬಗ್ಗೆಯೂ ಅರುಣ್ ಸಿಂಗ್ ಅವರಿಗೆ ವಿವರವಾದ ಮಾಹಿತಿ ನೀಡಿರುವ ಅವರು, ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಆಗುತ್ತಿದೆ. ಮುಖ್ಯಮಂತ್ರಿಗಳ ಕುಟುಂಬದ ಹಸ್ತಕ್ಷೇಪದ ಬಗ್ಗೆ ದಾಖಲೆ ಸಮೇತ ಮಾಹಿತಿ ಇದೆ. ಮುಂದಿನ ಚುನಾವಣೆಗೆ ಇದೇ ರೀತಿ ಹೋದರೆ ಪಕ್ಷಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಲಾಖೆ ಹಾಗೂ ಪ್ರದೇಶವಾರು ಅಭಿವೃದ್ಧಿ ಬಗ್ಗೆ ಮೌಲ್ಯಮಾಪನ ಮಾಡಿ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯಾ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಿ. ಖಾಸಗಿ ಏಜೆನ್ಸಿ ಮೂಲಕ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿನ ಬಗ್ಗೆ ಅಭಿಪ್ರಾಯ ಕೇಳಿ. ವರ್ಗಾವಣೆ, ಅನುದಾನ ಬಿಡುಗಡೆ ವಿಚಾರದಲ್ಲಿ ಶಾಸಕರಲ್ಲಿ ಅಸಮಾಧಾನವಿದೆ. ನಾಯಕತ್ವ ಬದಲಾವಣೆಯ ಗೊಂದಲದ ಹೇಳಿಕೆಗಳಿಂದ ಆಡಳಿತ ಹಾಗೂ ಪಕ್ಷದ ಮೇಲೆ ಭಾರಿ ಪರಿಣಾಮ ಉಂಟಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
'ಬಿಎಸ್‌ವೈ ಮುಂದುವರಿಕೆ ಯಾರು ಬೇಡ ಅಂತಾರೆ?'
ಎಲ್ಲವನ್ನೂ ತಿಳಿಸಿದ್ದೇನೆ:
ಪಕ್ಷದ ಆಂತರಿಕ ವಿಚಾರ ಮತ್ತು ನನ್ನ ವಿಚಾರ ಸೇರಿದಂತೆ ಎಲ್ಲವನ್ನೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಹೇಳಿದ್ದೇನೆ ಎಂದು ಅರುಣ್ ಸಿಂಗ್ ಅವರ ಭೇಟಿಯ ನಂತರ ಸಿ.ಪಿ.ಯೋಗೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.
ಎಲ್ಲವನ್ನೂ ಸಹ ವರಿಷ್ಠರ ಮುಂದೆ ಇಟ್ಟಿದ್ದೇನೆ. ಅವರು ತೀರ್ಮಾನ ಮಾಡುತ್ತಾರೆ. ಆದರೆ, ಅದ್ಯಾವುದೂ ಮಾಧ್ಯಮಗಳ ಮುಂದೆ ಹೇಳುವ ವಿಚಾರವಲ್ಲ ಎಂದಷ್ಟೇ ಹೇಳಿದರು.
ಅರುಣ್ ಸಿಂಗ್ ಅವರ ಭೇಟಿ ವೇಳೆ ಯೋಗೇಶ್ವರ್ ಅವರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಪಕ್ಷ, ಸರ್ಕಾರ, ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ. ಎಲ್ಲವೂ ಪಕ್ಷದ ವೇದಿಕೆಯಲ್ಲಿಯೇ ಚರ್ಚೆಯಾಗಬೇಕು. ಬಹಿರಂಗ ಹೇಳಿಕೆ ನೀಡಿದರೆ ಅಶಿಸ್ತು ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.