ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಲಿ: ಸಿದ್ದರಾಮಯ್ಯ

By Kannadaprabha NewsFirst Published Jun 18, 2021, 8:59 AM IST
Highlights

* ಬಿಜೆಪಿ ಒಳ ಜಗಳದಿಂದ ಆಡಳಿತ ವಿಫಲ
* ರಾಜ್ಯದಲ್ಲಿ ಸೋಂಕಿನ ನಿಯಂತ್ರಣದ ಬಗ್ಗೆ ನಿಗಾವಹಿಸುವವರೇ ಇಲ್ಲವಾಗಿದೆ
* ಜನರ ಸಮಸ್ಯೆಗೆ ಸ್ಪಂದಿಸದೆ ಬಿಜೆಪಿ ಕಚೇರಿಯಲ್ಲಿ ಬೀಡುಬಿಟ್ಟ ಸಚಿವರು, ಶಾಸಕರು

ಬೆಂಗಳೂರು(ಜೂ.18): ರಾಜ್ಯದಲ್ಲಿ ಬಿಜೆಪಿಯ ಒಳ ಜಗಳದಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ತಿಕ್ಕಾಟ ಬಗೆಹರಿಸಬೇಕಾಗಿದ್ದ ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕರನ್ನು ಪರಸ್ಪರ ಎತ್ತಿ ಕಟ್ಟಿಕಳ್ಳಾಟ ಆಡುತ್ತಿದೆ. ಹೀಗಾಗಿ ಮಧ್ಯಪ್ರವೇಶಿಸಿ ನಿಷ್ಕ್ರೀಯ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಸಚಿವರು, ಶಾಸಕರು ಜನರ ಸಮಸ್ಯೆಗೆ ಸ್ಪಂದಿಸದೆ ಬಿಜೆಪಿ ಕಚೇರಿಯಲ್ಲಿ ಬೀಡುಬಿಟ್ಟಿದ್ದಾರೆ. ಜನರ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರು-ಸಚಿವರು, ಪಕ್ಷದ ಹೈಕಮಾಂಡ್‌ ನಾಯಕರ ಕಾಲು ಹಿಡಿದು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೇ ಇಲ್ಲದೆ ಅರಾಜಕ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ. 

'ಯಡಿಯೂರಪ್ಪನವರನ್ನುಇಟ್ಕೊಳ್ತೀರಾ..? ಕಿತ್ತು ಹಾಕ್ತೀರಾ..?'

ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನ ನಿಯಂತ್ರಣದ ಬಗ್ಗೆ ನಿಗಾವಹಿಸುವವರೇ ಇಲ್ಲವಾಗಿದೆ. ಕೊರೋನಾ ಮೂರನೇ ಅಲೆ ನಿರೀಕ್ಷೆಗಿಂತಲೂ ಬೇಗನೇ ಬಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ. 
 

click me!