ಬಿಜೆಪಿ ನಾಯಕರಿಂದ ಪ್ರತಿ ಧರ್ಮಕ್ಕೂ ಮೋಸ: ಸುರ್ಜೇವಾಲಾ

By Kannadaprabha NewsFirst Published Apr 12, 2021, 3:06 PM IST
Highlights

ರಾಜ್ಯದ ಬಿಜೆಪಿ ಸರ್ಕಾರ ಜನರು ಒಪ್ಪಿಗೆ ನೀಡಿದ ಸರ್ಕಾರ ಅಲ್ಲ. ಅನೈತಿಕ ಸಂಬಂಧದ ಸರ್ಕಾರ| ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂದರೆ ಬಿಎಸ್‌ವೈ ಸರ್ಕಾರ ಪತನ| ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಖರ್ಗೆ| 

ಬಸವಕಲ್ಯಾಣ(ಏ.12):  ಜೆಡಿಎಸ್‌ ಅಭ್ಯರ್ಥಿ ಹಾಕಿದ್ದು ಕಾಂಗ್ರೆಸ್‌ ಮತ ವಿಭಜಿಸಲು ಹೊರತು ಸ್ಪರ್ಧಾಸ್ಪೂರ್ತಿಯಿಂದಲ್ಲ. ಯಾರು ಯಾವ ಅಭ್ಯರ್ಥಿನ್ನು ಕಣಕ್ಕಿಳಿಸಿದರೂ ಕ್ಷೇತ್ರದಲ್ಲಿ ದಿ. ನಾರಾಯಣರಾವ್‌ ಅವರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಕಾಂಗ್ರೆಸ್‌ ಮತ ಹಾಕುತ್ತಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್‌ ಸುರ್ಜೇವಾಲಾ ಭರವಸೆ ವ್ಯಕ್ತಪಡಿಸಿದ್ದಾರೆ.

ನಗರದ ಅಕ್ಕಮಹಾದೇವಿ ಕಾಲೇಜಿನ ಆವರಣದಲ್ಲಿ ಉಪಚುನಾವಣೆ ನಿಮಿತ್ತ ಭಾನುವಾರ ನಡೆದ ಬೃಹತ್‌ ಸಮಾವೇಶದಲ್ಲಿ, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯತ್ತಿವೆ, ಕಾಂಗ್ರೆಸ್‌ಗೆ ಬರುವ ಮತಗಳನ್ನು ವಿಭಜಿಸುವ ಕುತಂತ್ರವನ್ನು ಜೆಡಿಎಸ್‌ ಮಾಡಿದ್ದು ಜನ ಅದನ್ನು ವಿಫಲಗೊಳಿಸ್ತಾರೆ ಎಂದರು.

ಬಿಜೆಪಿ ಪಕ್ಷದ ನಾಯಕರು ಎಲ್ಲಾ ಧರ್ಮಕ್ಕೂ ಮೋಸ ಮಾಡಿದ್ದಾರೆ, ಚುನಾವಣೆ ಸಂದರ್ಭದಲ್ಲಿ ಮರಾಠಾ ಸಮಾಜಕ್ಕೆ 2 (ಎ), ವಾಲ್ಮೀಕಿ ಸಮಾಜಕ್ಕೆ ಮತ್ತು ಪಂಚಮಸಾಲಿ ಜನಾಂಗದವರನ್ನು (ಎಸ್‌ಟಿ) ವರ್ಗಕ್ಕೆ ಸೇರ್ಪಡೆ ಹಾಗೂ ಸಾರಿಗೆ ಸಿಬ್ಬಂದಿಗೆ 6ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಈವರೆಗೂ ಒಂದೂ ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.

ಸಾರಿಗೆ ನೌಕರರು ಎಷ್ಟು ದಿನ ಮುಷ್ಕರ ಮಾಡುತ್ತಾರೋ ನೋಡೋಣ ಎಂದ್ರ ಸಚಿವ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಲಂ 371 (ಜೆ) ಕಾಯ್ದೆಯನ್ನು ಬಿಜೆಪಿಯವರು ಕಸದ ಬುಟ್ಟಿಗೆ ಹಾಕಿದ್ದರು. ಕಾಂಗ್ರೆಸ್‌ ನಾಯಕರು ಈ ಕಾಯ್ದೆಯನ್ನು ಜಾರಿಗೆ ತಂದು ಈ ಭಾಗದ 6 ಜಿಲ್ಲೆಯವರಿಗೆ ಸಹಾಯವಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಕೇವಲ 80 ಜನರಿಗೆ ಮಾತ್ರ ಅವಕಾಶ ಸಿಗುತ್ತಿತ್ತು, ಆದರೆ ಇಂದು ಒಂದು ಸಾವಿರ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜನಿಯರಿಂಗ್‌ ಪ್ರವೇಶ ಪಡೆಯಲಾಗುತ್ತಿದೆ.

ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂದರೆ ಬಿಎಸ್‌ವೈ ಸರ್ಕಾರ ಪತನ:

ರಾಜ್ಯದ ಬಿಜೆಪಿ ಸರ್ಕಾರ ಜನರು ಒಪ್ಪಿಗೆ ನೀಡಿದ ಸರ್ಕಾರ ಅಲ್ಲ. ಅನೈತಿಕ ಸಂಬಂಧದ ಸರ್ಕಾರವಾಗಿದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂದರೆ ಬಿಎಸ್‌ವೈ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯನುಡಿದು ಇದಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಮಾತನಾಡಿ, ರಾಜ್ಯದಲ್ಲಿ ಅನೈತಿಕ ಸರ್ಕಾರ ಮಾಡುವಾಗ ಬಿಜೆಪಿಯವರು ನಮ್ಮ ಪಕ್ಷದ ಶಾಸಕರಾದ ರಹೀಮ್‌ಖಾನ್‌ ಮತ್ತು ಬಿ.ನಾರಾಯಣರಾವ್‌ ಅವರಿಗೆ ಹಣದ ಆಮೀಶವೊಡ್ಡಿದ್ದರು ಆದರೆ ಬಿ.ನಾರಾಯಣರಾವ್‌ ಬಸವಕಲ್ಯಾಣದ ಸ್ವಾಭಿಮಾನ ಮಾರಿಕೊಳ್ಳಲಿಲ್ಲ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಅವರ ಕಾರ್ಯಗಳು ಮುಂದುವರೆಯಲಿ ಎಂದು ಮಾಲಾ ಅವರಿಗೆ ಟಿಕೆಟ್‌ ನೀಡಲಾಗಿದೆ ಆದ್ದರಿಂದ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮವನಿ ಮಾಡಿದರು. ಇದಕ್ಕೂ ಮುನ್ನ ಕೆಎಚ್‌ ಮುನಿಯಪ್ಪ, ಮಾಜಿ ಸಚಿವ ಪಿಜಿಆರ್‌ ಸಿಂಧೆ, ಶಾಸಕರಾದ ರಾಜಶೇಖರ ಪಾಟೀಲ್‌, ವಿಜಯಸಿಂಗ್‌ ಮಾತನಾಡಿದರು.
 

click me!