35,000 ಕೋಟಿ ರು. ಅಕ್ರಮ ಎಸಗಿದ ಸಿದ್ದು ಸರ್ಕಾರ, ಸಿಎಜಿ ವರದಿಯಲ್ಲೇ ಇದೆ: ಸಚಿವ ಸುಧಾಕರ್ ಆರೋಪ
ಬೆಂಗಳೂರು(ಜ.24): ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸುಮಾರು 35 ಸಾವಿರ ಕೋಟಿ ರು. ಹಣಕಾಸು ಅವ್ಯವಹಾರ ಆಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸೋಮವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ನಮ್ಮ ಸರಕಾರದ ವಿರುದ್ಧ ಸಿದ್ದರಾಮಯ್ಯ ಅವರು ಶೇ.40 ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದರ ಸತ್ಯಾಸತ್ಯತೆ ತಿಳಿಸುತ್ತೇನೆ. ಅವರ ಅವಧಿಯಲ್ಲಿ ಡಿನೋಟಿಫಿಕೇಷನ್‌ಗೆ ರೀಡೂ ಎಂಬ ಪದವನ್ನು ಅನುಕೂಲ ಸಿಂಧುವಾಗಿ ಬಳಸಲಾಗಿದೆ. ಬೆಂಗಳೂರಿನ ಹತ್ತು ಸಾವಿರ ಕುಟುಂಬಗಳಿಗೆ ಇದರಿಂದ ಅನ್ಯಾಯವಾಗಿದೆ. 900 ಎಕರೆಗೂ ಹೆಚ್ಚು ಜಾಗವನ್ನು ಡೀನೋಟಿಫಿಕೇಷನ್ ಮಾಡಿದ್ದರು. ಇದೆಲ್ಲವನ್ನೂ ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಬೀಗ ಹಾಕಿ ಎಸಿಬಿ ರಚಿಸಲಾಯಿತು ಎಂದು ಆಪಾದಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಬಲಗೈ ಬಂಟ, ಮಾಜಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ವೈಟ್ ಟಾಪಿಂಗ್‌ನಲ್ಲಿ 39.80 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ 292 ಕೋಟಿ ರು. ಅಂದಾಜು ಇದ್ದರೂ 374 ಕೋಟಿ ರು.ಗಳಿಗೆ ಕೊಟ್ಟಿದ್ದರು. ಯಾಕೆ ಶೇ.25ರಷ್ಟುಹೆಚ್ಚಾಗಿ ಕೊಟ್ಟರು? ನೀರು ಇಂಗದ ಕಾಂಕ್ರೀಟ್ ರಸ್ತೆಗಳಿವು. 9.47 ಕಿ.ಮೀ. ರಸ್ತೆಗೆ 75 ಕೋಟಿ ರು. ಅಂದಾಜು ಇದ್ದರೂ 115 ಕೋಟಿ ರು.ಗಳಿಗೆ ಮಂಜೂರಾತಿ ನೀಡಲಾಗಿತ್ತು. ಶೇ.53.86 ಹೆಚ್ಚುವರಿ ಮೊತ್ತಕ್ಕೆ ಯಾಕೆ ಕೊಟ್ಟರು? ಇದರ ದುರುದ್ದೇಶ ಏನು ಎಂದು ಪ್ರಶ್ನಿಸಿದರು.
ಎಲ್ಲರೂ ಒಂದಾಗಿ ಬದುಕಬೇಕೆಂಬ ನೀತಿ ಹೇಳುವುದೇ ಧರ್ಮ: ಸಿದ್ದರಾಮಯ್ಯ
ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರವು ಕಳೆದ ಮೇ ತಿಂಗಳಲ್ಲಿ ಎಸ್ಟಿಮೇಟ್ ಮೇಲೆ ಟೆಂಡರ್ ಪ್ರೀಮಿಯಂ ಮೊತ್ತವನ್ನು ಶೇ.5ಕ್ಕೆ ಮಿತಿಗೊಳಿಸಿದೆ. ಆದರೆ, ನಮ್ಮ ಮೇಲೇ ಆರೋಪ ಮಾಡುತ್ತೀರಲ್ಲವೇ? ಶೇ.50ಕ್ಕಿಂತ ಹಣ ಹೆಚ್ಚಿಸಿ ಮಂಜೂರಾತಿ ಕೊಟ್ಟನೀವು ಆರೋಪ ಮಾಡಿದ್ದು ಹೇಗೆ? ಇಂಥ ಅನೇಕ ಕೆಲಸಗಳು ಬಿಬಿಎಂಪಿ, ಬಿಡಿಎ ಮಿತಿಯಲ್ಲಿ ಅಂದಾಜಿಗಿಂತ ಹೆಚ್ಚಾಗಿ ನಡೆದಿವೆ ಎಂದು ಸುಧಾಕರ್ ಆರೋಪಿಸಿದರು.
ಹಾಸಿಗೆ, ದಿಂಬು, ಬಡವರಿಗೆ ಕೊಡುವ ಅನ್ನದಲ್ಲೂ ಭ್ರಷ್ಟಾಚಾರವನ್ನು ನೀವು ಬಿಟ್ಟಿಲ್ಲ. ಇಂದಿರಾ ಕ್ಯಾಂಟೀನ್‌ನಲ್ಲಿ 100 ಜನ ಊಟ ಮಾಡಿದರೆ ಸಾವಿರ ಜನಕ್ಕೆ ಬಿಲ್ ಮಾಡಲಾಗುತ್ತಿತ್ತು. 900 ಜನರ ದುಡ್ಡು ಯಾರಿಗೆ ಹೋಗುತ್ತಿತ್ತು ಎಂದು ತೀಕ್ಷ$್ಣವಾಗಿ ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಉದ್ಧಾರಕರು ನೀವೇ ಎನ್ನುತ್ತೀರಿ. ವಕ್ಫ್ ಬೋರ್ಡಿನ 29 ಸಾವಿರ ಎಕರೆ ಆಸ್ತಿಯನ್ನು ಯಾರು ಗುಳುಂ ಮಾಡಿದ್ದಾರೆ? 2.6 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಇದು. ಅಲ್ಪಸಂಖ್ಯಾತರು, ದಲಿತರಿಗೆ ನ್ಯಾಯ ಕೊಡಲಿಲ್ಲ. ಹಿಂದುಳಿದ ಜನಾಂಗ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಲ್ಯಾಪ್‌ಟಾಪ್ ಖರೀದಿಯಲ್ಲೂ ಭ್ರಷ್ಟಾಚಾರ ಆಗಿತ್ತು. ಪ್ರತಿ ಇಲಾಖೆಯ ಭ್ರಷ್ಟಾಚಾರದಲ್ಲಿ ನೀವೇ ಮುಳುಗಿ ಹೋಗಿದ್ದಿರಿ. ಇವತ್ತು ನೀವು ಯಾವ ನೈತಿಕತೆಯಿಂದ ಹೀಗೆ ಮಾತನಾಡುತ್ತೀರಿ? ಇದರ ಹಿಂದೆ ಒಂದು ನರೇಟಿವ್, ಟೂಲ್ ಕಿಟ್ ಬಳಸಲಾಗುತ್ತಿದೆ. ವಿಷಯಾಂತರ ಮಾಡಲು, ಜನರ ಮನಸ್ಸನ್ನು ನಿಮ್ಮ ಕಡೆ ವಾಲಿಸಿಕೊಳ್ಳುವ ಪ್ರಯತ್ನ ಇದು. ಇದು ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಸತ್ಯ ಹರಿಶ್ಚಂದ್ರರು ಎನ್ನುವ ಇವರು ಮತ್ತು ಹೈಕಮಾಂಡಿನವರ ಬಲಗೈ ಬಂಟನ ಮನೆ ಮೇಲೆ 2017ರಲ್ಲಿ ದಾಳಿ ಆದಾಗ ಡೈರಿ ಸಿಕ್ಕಿತ್ತು. ಒಂದು ಸಾವಿರ ಕೋಟಿಗೂ ಹೆಚ್ಚು ಹಣ ನಿಮ್ಮ ಹೈಕಮಾಂಡಿಗೆ ಹೋಗಿತ್ತಲ್ಲವೇ? ಯಾರದದು ಸಾವಿರ ಕೋಟಿ ರು.? ಹೇಗೆ ಹೋಗಿತ್ತು? ಧರ್ಮದ ಹಣವೇ? ಕರ್ನಾಟಕದ ಬಜೆಟ್‌ನಲ್ಲಿ ಸಾವಿರ ಕೋಟಿ ರು. ಹೈಕಮಾಂಡ್ ವಿಶೇಷ ನಿಧಿ ಎಂದು ಮೀಸಲಾಗಿ ಇಟ್ಟಿದ್ದರೇ? ಅದನ್ನೂ ಮಾಡುವಷ್ಟುಬುದ್ಧಿವಂತಿಕೆಯ ಜನರು ಕಾಂಗ್ರೆಸ್ಸಿಗರು ಎಂದು ಸುಧಾಕರ್ ಲೇವಡಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಹಾಜರಿದ್ದರು.
ಸಿದ್ದು ಅವಧಿಯ 14 ಹಗರಣ ಮರು ತನಿಖೆ ಮಾಡಿ: ರಮೇಶ್
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಡಳಿತಾವಧಿಯ 121 ಹಗರಣಗಳ ಪೈಕಿ ಮುಕ್ತಾಯಗೊಳಿಸಿರುವ 14 ಹಗರಣಗಳನ್ನು ಮರು ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ನಡೆದಂತಹ 121 ಹಗರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆ ಮತ್ತು ಸಾಕ್ಷ್ಯಾಧಾರಗಳ ಸಹಿತ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ದಾಖಲಿಸಲಾಗಿತ್ತು. ದಾಖಲೆ ಮತ್ತು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರೂ ಸಿದ್ದರಾಮಯ್ಯ ಮತ್ತವರ ಸಂಪುಟದಲ್ಲಿ ಸಚಿವರಾಗಿದ್ದ ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಮತ್ತು ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯ ಅಧಿಕಾರಿಗಳು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 14 ಪ್ರಕರಣಗಳನ್ನು ಮುಕ್ತಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಪ್ರಭಾವಕ್ಕೊಳಗಾಗಿ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು, ಎಸಿಬಿ ಅಧಿಕಾರಿಗಳು ದೂರುದಾರರಿಂದ ಯಾವುದೇ ಹೇಳಿಕೆಗಳನ್ನು ಪಡೆದುಕೊಳ್ಳದೆ ಏಕಾಏಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 14 ಹಗರಣಗಳನ್ನು ಮುಖ್ಯಮಂತ್ರಿಗಳು ಮರು ತನಿಖೆಗೆ ಆದೇಶಿಸಬೇಕು. ಅಲ್ಲದೇ, ಹೈಕೋರ್ಚ್‌ನಲ್ಲಿ ಈ ಎಲ್ಲಾ 14 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗುವುದು ಎಂದರು.
ಯಾವ ಯಾವ ಹಗರಣಗಳು?:
ಮಳೆ ಆಧಾರಿತ ಕೃಷಿ ಭೂಮಿ ಹೊಂದಿರುವ ರೈತರ ಜಮೀನುಗಳಿಗೆ ಉಚಿತವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವ ಹೆಸರಲ್ಲಿ 800 ಕೋಟಿ ರು.ಗಿಂತ ಹೆಚ್ಚು ಲೂಟಿ ಮಾಡಿರುವ ಕೃಷಿ ಭಾಗ್ಯ ಹಗರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಡರ್‌ಗ್ರೌಂಡ್ ಡಸ್ಟ್‌ಬಿನ್ ಅಳವಡಿಕೆ ಹೆಸರಲ್ಲಿ 200 ಕೋಟಿ ರು. ಹಗರಣ. 35 ಕೋಟಿ ರು. ಜಾಹೀರಾತು ಶುಲ್ಕ ವಂಚನೆ ಹಗರಣ. ಇಂದಿರಾ ಕ್ಯಾಂಟೀನ್ ಗ್ರಾಹಕರ ಹೆಸರಲ್ಲಿ 560 ಕೋಟಿ ರು. ಹೆಚ್ಚು ವಂಚನೆ. ಪಿಪಿಪಿ ಹೆಸರಲ್ಲಿ ಐದು ಸಾವಿರ ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು 65 ವರ್ಷಗಳ ಗುತ್ತಿಗೆ ಪಡೆಯುವ ಹೆಸರಲ್ಲಿ ಎಂಬೆಸ್ಸಿ ಮೂಲಕ ನಡೆಸಲು ಹೊರಟಿದ್ದ ಭೂ ಕಬಳಿಕೆ ಸಂಚಿನ ಹಗರಣ.
ಅಧಿಕಾರಯುಕ್ತ ಸಮಿತಿಯನ್ನು ರಚಿಸುವ ಮೂಲಕ ಸಾವಿರಾರು ಕೋಟಿ ರು. ಲೂಟಿ ಮಾಡಿರುವ ಹಗರಣ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸುವ ಹೆಸರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ಟೆಂಡರ್ ಅನುಮೋದನೆ ಮಾಡಿಕೊಟ್ಟ160 ಕೋಟಿ ರು. ಹಗರಣ. ಪಾಲಿಕೆಯ 14 ಸಾವಿರ ಜನ ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ಸೃಷ್ಟಿಸಲಾದ 934 ಕೋಟಿ ರು. ಎಸ್‌ಐ/ಪಿಎಫ್ ಹಗರಣ. ನಕಲಿ ಪೌರ ಕಾರ್ಮಿಕರ ವೇತನದ ಹೆಸರಲ್ಲಿ 934 ಕೋಟಿ ರು. ಲೂಟಿ ಹಗರಣ. ರಾಜಕಾಲುವೆಯಲ್ಲಿ ಹೂಳೆತ್ತುವ ಹೆಸರಲ್ಲಿ ನೂರಾರು ಕೋಟಿ ರು. ಮೊತ್ತದ ಹಗರಣ. ಕೆಪಿಸಿಸಿ ಕಬಳಿಕೆ ಮಾಡಿರುವ ಸರ್ಕಾರಿ ಭೂ ಕಬಳಿಕೆ ಹಗರಣ ಎಂದು ರಮೇಶ್ ತಿಳಿಸಿದರು.
ಟೆಂಡರ್ ಶ್ಯೂರ್ ರಸ್ತೇಲಿ 50% ಕಮಿಷನ್: ಲೋಕಾಗೆ ದೂರು
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿಯಲ್ಲಿ ಶೇ.50ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಸೋಮವಾರ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಂಡರ್ ಶ್ಯೂರ್ ಕಾಮಗಾರಿಯಲ್ಲಿನ ಹಗರಣದ ಬಗ್ಗೆ ದಾಖಲೆ ಸಹಿತ ದೂರು ಸಲ್ಲಿಸಲಾಗಿದೆ ಎಂದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟೆಂಡರ್ ಶ್ಯೂರ್ ಯೋಜನಾ ವೆಚ್ಚವನ್ನು ಶೇ.54ರಷ್ಟುಹೆಚ್ಚಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶೇ.50ಕ್ಕಿಂತ ಹೆಚ್ಚು ಕಮಿಷನ್ ಅನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ಪುರಾವೆ ಸಲ್ಲಿಸಿದ್ದೇವೆ. ಇದು ಕೇವಲ ಒಂದು ಪ್ರಕರಣ ಅಲ್ಲ. ಇಂಥದ್ದು 10 ಪ್ರಕರಣಗಳಿವೆ ಎಂದು ಹೇಳಿದರು.
ಕೋಲಾರದಲ್ಲಿ ಸಿದ್ದುಗಾಗಿ ಮನೆ ಹುಡುಕಾಟ: ಇತ್ತ ಟಗರು ಬೇಟೆಗೆ ಕೇಸರಿ ಖೆಡ್ಡಾ
ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಾಕತ್ತು ಇದ್ದರೆ ದೂರು ದಾಖಲಿಸಲಿ ನೋಡೋಣ. ಲೋಕಾಯುಕ್ತಕ್ಕೆ ಕಾಂಗ್ರೆಸ್ಸಿಗರು ದೂರು ನೀಡಲಿ ನೋಡೋಣ. ದಾಖಲೆ ಇಲ್ಲದೆ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಮಾಡುವ ಆರೋಪಕ್ಕೆ ದಾಖಲೆಗಳಿವೆ. ಅದಕ್ಕೇ ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಇದ್ದರೆ ಬಂದು ಎದುರಿಸಲಿ ಎಂದು ಸವಾಲು ಹಾಕಿದರು.
ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ಕೊಟ್ಟಿದ್ದೇವೆ. ಟೆಂಡರ್ ಶ್ಯೂರ್ ಯೋಜನೆಯಲ್ಲಿ 2013-14 ಅವಧಿಯಲ್ಲಿ ಶೇ.53.86ರಷ್ಟುಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಹಣ ಬಿಡುಗಡೆ ಮಾಡಿಕೊಂಡು ಅಕ್ರಮ ಮಾಡಲಾಗಿದೆ. ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. 40% ಕಮಿಷನ್ ಪೋಸ್ಟರ್ ಮಾಡಿ ದಾಖಲೆ ಇಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾವು ಇವತ್ತು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ನಮ್ಮ ಆಪಾದನೆಗಳಿಗೆ ದಾಖಲೆಗಳಿವೆ. ಬಿಜೆಪಿ ಕಾನೂನು ವಿಭಾಗದ ಯೋಗೇಂದ್ರ ಮತ್ತು ಕೆಲವು ವಕೀಲರ ಜತೆ ತೆರಳಿ ದೂರು ಕೊಟ್ಟಿದ್ದೇವೆ. ಟೆಂಡರ್ ಶ್ಯೂರ್ ಕಾಮಗಾರಿಯಲ್ಲಿ 75 ಕೋಟಿ ರು. ಮೊತ್ತದ ಟೆಂಡರ್‌ಗೆ 115 ಕೋಟಿ ರು. ಬಿಡುಗಡೆ ಮಾಡಲಾಗಿತ್ತು ಎಂದ ಛಲವಾದಿ ನಾರಾಯಣಸ್ವಾಮಿ ದೂರಿದರು.