ಬಿಜೆಪಿಯ ಹಿರಿಯ ನಾಯಕ ಎಂ ಬಿ ಭಾನುಪ್ರಕಾಶ್ ಅವರು ನಿಧನರಾಗಿದ್ದಾರೆ. ಮಾಜಿ ಎಂಎಲ್ಸಿ ಎಂಬಿ ಭಾನುಪ್ರಕಾಶ್, ಹೃದಯಾಘಾತದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶಿವಮೊಗ್ಗ (ಜೂ.17): ಬಿಜೆಪಿಯ ಹಿರಿಯ ನಾಯಕ ಎಂ ಬಿ ಭಾನುಪ್ರಕಾಶ್ (68) ಅವರು ನಿಧನರಾಗಿದ್ದಾರೆ. ಮಾಜಿ ಎಂಎಲ್ಸಿ ಎಂಬಿ ಭಾನುಪ್ರಕಾಶ್, ಹೃದಯಾಘಾತದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುಸ್ತಾಗುತ್ತಿದೆ ಎಂದು ಹೇಳಿ ಕಾರಿನಲ್ಲಿ ಕುಳಿತುಕೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು ಆದರೆ ಅಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಎಂ ಬಿ ಭಾನುಪ್ರಕಾಶ್ ಬಿಜೆಪಿ ಸಂಘಟನೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಸಮಯದಲ್ಲಿ 2019ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದರು. ಭಾನುಪ್ರಕಾಶ್ ಬಿಜೆಪಿಯ ಹಿರಿಯ ಮುಖಂಡ. ಸರಳ, ಸಜ್ಜನ ಎಂಬ ಹೆಗ್ಗಳಿಕೆ. ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿ. ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಗಾಜನೂರು ಜಿ.ಪಂ. ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ 2013-19 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಕಟ್ಟಾ ಅನುಯಾಯಿಯಾಗಿದ್ದ ಭಾನುಪ್ರಕಾಶ್, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಬಂಗಾರಪ್ಪ ಎದುರು ನಿಂತಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದವರು.
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾನೂ ಪೊಲೀಸ್ ಆಗಿದ್ದವನು ಯಾರೂ ಕಾನೂನಿಗಿಂತ ದೊಡ್ಡರಲ್ಲ: ಬಿಸಿ ಪಾಟೀಲ್
ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಿದ್ದಾಗ ಕೂಡ ಇವರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಬಿಎಸ್ವೈ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಭಾನುಪ್ರಕಾಶ್ ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ ಎಂದಿದ್ದರು. ಪ್ರಸ್ತುತ ಉಡುಪಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡ ಲೋಕಸಭಾ ಕ್ಲಸ್ಟರ್ ಸಂಯೋಜಕ ರಾಗಿದ್ದರು.
ಎಂ.ಬಿ.ಭಾನುಪ್ರಕಾಶ್ ಅವರ ನಿಧನ ಅತ್ಯಂತ ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ನಮ್ಮೆಲ್ಲ ಹಿರಿಯರು, ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು, ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಹಾಗೂ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು ಎಂದು ತಿಳಿಸಿದ್ದಾರೆ. ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.