* ತೀವ್ರ ಸ್ವರೂಪಪಡೆದುಕೊಂಡ ಮೇಕೆದಾಟು ಯೋಜನೆ ವಿವಾದ
* ತಮಿಳುನಾಡಿಲ್ಲೂ ಮೇಕೆದಾಟು ವಿರುದ್ಧ ನಿರ್ಣಯ
* ಡಿಎಂಕೆ ಮನವೊಲಿಕೆಗೆ ಕಾಂಗ್ರೆಸ್‌ನವರು ಸ್ಪೆಷಲ್ ಫ್ಲೈಟ್‌ನಲ್ಲಿ ಹೋಗಲಿ ಎಂದ ಸಿಟಿ ರವಿ
ವರದಿ: ಸುರೇಶ್ ಏಷ್ಯಾನೆಟ್ ನ್ಯೂಸ್, ಬೆಂಗಳೂರು
ಬೆಂಗಳೂರು, (ಮಾ.22): ಮೇಕೆದಾಟು ಯೋಜನೆ (Mekedatu Project) ಕರ್ನಾಟಕ ಹಾಗೂ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಯಾಗತ್ತಿದೆ. ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ (Congress And BJP) ನಾಯಕರು ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಮೇಕೆದಾಟು ಯೋಜನೆ(Mekedatu Project) ವಿರುದ್ಧ ತಮಿಳುನಾಡು ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ತಮಿಳುನಾಡು ಬಿಜೆಪಿ (Tamil Nadu BJP)ಕೂಡಾ ಬೆಂಬಲಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೇಕೆದಾಟು: ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ, ಬಿಜೆಪಿ ಬೆಂಬಲ, ಸಿದ್ದು ಕೆಂಡಾಮಂಡಲ
ಇನ್ನು ಈ ಬಗ್ಗೆ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT ravi) ಪ್ರತಿಕ್ರಿಯಿಸಿದ್ದು, ಡಿಎಂಕೆ(DMK) ಮನವೊಲಿಕೆಗೆ ಕಾಂಗ್ರೆಸ್‌ನವರು ಸ್ಪೆಷಲ್ ಫ್ಲೈಟ್‌ನಲ್ಲಿ ಹೋಗಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಕಾಂಗ್ರೆಸ್ ಪಕ್ಷ ವಿರೋಧಿಸಬಹುದಿತ್ತು. ಡಿಎಂಕೆ ಪಕ್ಷದ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ಇಲ್ಲಿ ಪಾದಯಾತ್ರೆ ಮಾಡಿ, ಅಲ್ಲಿ ವಿರೋಧ ವ್ಯಕ್ತಪಡಿಸಿದ್ದು ಯಾಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರಶ್ನಿಸಿದರು.
ಅಲ್ಲಿ ಬಿಜೆಪಿ ಕೇವಲ ನಾಲ್ಕು ಸ್ಥಾನ ಮಾತ್ರ ಇದೆ. ನಮ್ಮ ಮಾತು ಅಲ್ಲಿ ನಡೆಯಲ್ಲ. ಡಿಕೆ ಶಿವಕುಮಾರ್, ಹಾಗೂ ಸಿದ್ದರಾಮಯ್ಯ ತಮಿಳುನಾಡಿನ ಕಾಂಗ್ರೆಸ್ ನಾಯಕರ ಜೊತೆಗೂಡಿ ಡಿಎಂಕೆ ಪಕ್ಷದ ಮನವೊಲಿಕೆ ಮಾಡಬೇಕಿತ್ತು. ಗೋವಾದಲ್ಲಿ ಸರ್ಕಾರ ರಚನೆ ಮಾಡಲು ವಿಶೇಷ ವಿಮಾನ ಮಾಡಿಕೊಂಡು ಹೋಗ್ತಾರೆ. ಅದೇ ರೀತಿ ಮೇಕೆದಾಟು ವಿಚಾರದಲ್ಲಿ ಮನಪರಿವರ್ತನೆ ಮಾಡಲು ತಮಿಳುನಾಡಿಗೂ ವಿಶೇಷ ವಿಮಾನ ಮಾಡಿಕೊಂಡು ಹೋಗಬೇಕಿತ್ತು ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ಬಗ್ಗೆ ಮಾತಾಡುವವರು ಬಾವಿಯೊಳಗಿನ ಕಪ್ಪೆಗಳು
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬಳಿಕ ಗ್ಯಾಸ್ ಬೆಲೆ ಏರಿಕೆ ಆಗಿದೆ ಎಂದೆಲ್ಲಾ ಮಾತನಾಡುವರು ಬಾವಿ ಒಳಗಿನ ಕಪ್ಪೆಗಳೋ ಅಥವಾ ಪೊಟರೆ ಒಳಗಿನ ಕಪ್ಪೆಗಳೋ. ಇಡೀ ಜಗತ್ತಿನಲ್ಲಿ ಬೆಲೆ ಏರಿಕೆ ಆಗುತ್ತಿರುವಾಗ ಕೇವಲ ನಾಲ್ಕು ರಾಜ್ಯಗಳ ಚುನಾವಣಾ ಬಳಿಕ ದರ ಏರಿಕೆ ಅಂತಾ ಮಾತಾಡೋದು ತಪ್ಪು, ಹೀಗೆ ಮಾತಾಡುವವರು ಶತಮೂರ್ಖರು ಎಂದರು.
ಸದ್ಯಕ್ಕೆ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಸದ್ಯಕ್ಕೆ ಇಲ್ಲ, ಮಾದ್ಯಮದವರು ಎಲ್ಲರನ್ನೂ ಬದಲಾಯಿಸ್ತೀರಾ, ನಿಮ್ಮ ಹೇಳಿಕೆಗಳಿಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ ಎಂದ ಸಿ ಟಿ ರವಿ, ನಾನಂತೂ ಸದ್ಯಕ್ಕೆ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಬೇರೆ ಯಾವುದೇ ಆಕಾಂಕ್ಷೆ ಇಲ್ಲ. ಸುಮ್ಮನೆ ನೀವೇ ಹುಳಿ ಹಿಂಡಬೇಡಿ ಎಂದು ಮಾದ್ಯಮದವರ ಮೇಲೆ ಗರಂ ಆದರು.
ಸಿದ್ದರಾಮಯ್ಯ ಹೇಳಿದ್ದು
ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು.ತಮಿಳುನಾಡು ರಾಜಕೀಯಕ್ಕಾಗಿ ಕ್ಯಾತೆ ತೆಗೆದಿದೆ. ಕಾವೇರಿ ವಿವಾದ ಇಂದು ನಿನ್ನೆಯದಲ್ಲ. 2018ರಲ್ಲಿ ಅಂತಿಮ ತೆರೆ ಬಿದ್ದಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ 2018ರಲ್ಲಿ ಅಂತಿಮ ತೀರ್ಪು ನೀಡಿದೆ. ನಾವು ಎಷ್ಟು ನೀರು ಕೊಡಬೇಕು, ಬಿಳಿಗುಂಡ್ಲು ಇಂದ ಎಷ್ಟು, ಕೇರಳಾಗೆ ಎಷ್ಟು, ಪಾಂಡಿಚೇರಿಗೆ ಎಷ್ಟು ಅಂತ ನಿಗದಿ ಮಾಡಲಾಗಿದೆ. ಅದನ್ನ ಇಂಪ್ಲಿಮೆಂಟ್ ಮಾಡಬೇಕು. ಕಾವೇರಿ ಬೋರ್ಡ್ ಇತ್ಯರ್ಥ ಪಡಿಸಬೇಕು. ಅವರು ಎಲ್ಲಾ ನೋಡ್ಕೋತಾರೆ. ತೀರ್ಪು ಬಂದ ಮೇಲೆ 400ಕ್ಕೂ ಹೆಚ್ಚು TMC ನೀರು ತಮಿಳುನಾಡಿಗೆ ಹೋಗ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಬೇಕು. ತಮಿಳುನಾಡು ಸರ್ಕಾರ ತೆಗೆದಿರೋ ತಗಾದೆಗೆ ಸೊಪ್ಪು ಹಾಕಬಾರದು ಎಂದರು.
ಕೇಂದ್ರ ಸರ್ಕಾರ ರಾಜಕೀಯ ಮಾಡದೆ, ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಬಹಳ ಹಿಂದೆಯೇ ಕೊಡಬೇಕಿತ್ತು. ಸಿಎಂ ಆಲ್ ಪಾರ್ಟಿ ಮೀಟಿಂಗ್ ಮಾಡಿದಾಗಲೂ ಹೇಳಿದ್ದೆವು. ಅವರು ರೆಡ್ಯೂಸ್ ಆದ್ರೂ ಮಾಡಿಕೊಡಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ.ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣ ಮಲೈ ಪ್ರತಿಭಟನೆ ಕೂತಿದ್ದ. ಬಿಜೆಪಿ ಮತಗಳನ್ನ ಹೆಚ್ಚು ಮಾಡಿಕೊಳ್ಳಲು ಹೀಗೆ ಮಾಡಿದ್ದ ಎಂದು ಟಾಂಗ್ ಕೊಟ್ಟರು.