ಕನಕಪುರ /ರಾಮನಗರ(ಡಿ.11):ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂಥ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸೀಟುಗಳನ್ನೂ ಗೆಲ್ಲುವ ಸೂಚನೆ, ಸಾಧ್ಯತೆಗಳಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಕನಕಪುರ ನಗರಸಭೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಸರ್ಕಾದ ಯಂತ್ರ ದುರುಪಯೋಗ ಆಗಿರುವುದರಿಂದ ಒಂದೆರಡು ಕಡೆ ಹೆಚ್ಚು-ಕಡಿಮೆ ಆಗಬಹುದು. ಆದರೂ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನಗಳು ಬರಲಿವೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪನವರು (BS Yediyurappa) ಹತಾಶರಾಗಿ ಜೆಡಿಎಸ್ (JDS) ಬೆಂಬಲ ಯಾಚಿಸುತ್ತಿದ್ದಾರೆ. ಬಿಜೆಪಿ (BJP) ರಾಜ್ಯದಲ್ಲಿ ತನ್ನ ಶಕ್ತಿ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿ. ಅವರು ಬೆಂಬಲ ಕೇಳಬಾರದು ಅಂತ ಅಲ್ಲ. ಅದು ಅವರ ಹಕ್ಕು. ನಾವೂ ಪಕ್ಷಾತೀತವಾಗಿ ಬೆಂಬಲ ಕೇಳಿದ್ದೇವೆ. ಬಿಜೆಪಿ (BJP), ಜೆಡಿಎಸ್ (JDS), ಪಕ್ಷೇತರರು ಎಲ್ಲರೂ ಕಾಂಗ್ರೆಸ್ (Congress) ಬೆಂಬಲಿಸಿ ಎಂದಿದ್ದೇವೆ. ಆದರೆ, ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡುತ್ತೇವೆ. 15 ವರ್ಷ ವಿರೋಧ ಪಕ್ಷದಲ್ಲೇ ಕೂರಿಸುತ್ತೇವೆ ಎಂದೆಲ್ಲ ಹೇಳಿದ್ದಾರೆ. ಹಾಗೆ ಹೇಳಿದವರು ಹೋಗಿ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಇದು ಬಿಜೆಪಿ ದುಸ್ಥಿತಿ ಮತ್ತು ಶಕ್ತಿ ಕುಂದಿರುವುದನ್ನು ತೋರಿಸುತ್ತದೆ ಎಂದು ಶಿವಕುಮಾರ್ (Shivakumar) ಲೇವಡಿ ಮಾಡಿದರು.
ಡಿ. 13ರಂದು ಮೇಕೆದಾಟು ಹೋರಾಟ ಸಭೆ: ಮೇಕೆದಾಟು ಅಣೆಕಟ್ಟೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ವಿಚಾರ ಸಂಬಂಧ ಕಾವೇರಿ (Cauvery) ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ ಕಾಂಗ್ರೆಸ್ ಮುಖಂಡರ ಸಭೆಯನ್ನು ಡಿ. 13 ರಂದು ಸಂಜೆ ಬೆಂಗಳೂರಿನಲ್ಲಿ (Bengaluru) ಕರೆಯಲಾಗಿದೆ. ಶಾಸಕರನ್ನು ಹೊರತುಪಡಿಸಿ ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವರು. ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಮನ್ವಯಕಾರರು, ಬ್ಲಾಕ್ ಕಾಂಗ್ರೆಸ… ಅಧ್ಯಕ್ಷರು ಸೇರಿದಂತೆ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪಾದಯಾತ್ರೆ ಯಲ್ಲಿ ಭಾಗವಹಿಸುವವರು ಆನ್ ಲೈನ್ ನಲ್ಲಿ ತಮ್ಮ ಫೋಟೋ ಸಮೇತ ಹೆಸರು ನೋಂದಣಿ ಮಾಡಿಸಬೇಕು. ಒಂದು ದಿನ, ಎರಡು ದಿನ, ಮೂರು ದಿನದಿಂದ ಪಾದಯಾತ್ರೆ ಮುಗಿಯುವವರೆಗೂ ಎಷ್ಟುದಿನ ಬೇಕಾದರೂ ಅವರು ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಒಂದು ದಿನ ನಡೆಯುವವರಿಗೆ ಒಂದು, ಎರಡು ದಿನ ನಡೆಯುವವರಿಗೆ ಬೇರೆ, ಹತ್ತು ದಿನ ನಡೆಯುವವರಿಗೆ ಬೇರೆ - ಹೀಗೆ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಪಕ್ಷದಿಂದ ಸರ್ಟಿಫಿಕೇಚ್ ನೀಡಲಾಗುವುದು. ಕಾವೇರಿ ಜಲಾನಯನ ಪ್ರದೇಶ ರೈತರು (Farmers) ಹಾಗೂ ಬೆಂಗಳೂರು ಜನರ ಹಿತದೃಷ್ಟಿಯಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ಜೆಡಿಎಸ್, ಬಿಜೆಪಿಗರಿಂದಲೂ ಕಾಂಗ್ರೆಸ್ ಅಭ್ಯರ್ಥಿಗೆ ಸಪೋರ್ಟ್
ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಬೆಂಬಲಿತ ಸದಸ್ಯರು ಸಹ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಅವರನ್ನೇ ಗೆಲ್ಲಿಸಿಕೊಳ್ಳುವ ವಿಶ್ವಾಸವಿದೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು. ಜಿಲ್ಲಾ ಕೇಂದ್ರ ರಾಮನಗರದ ನಗರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಅನ್ಯ ಪಕ್ಷಗಳ ಬೆಂಬಲಿತ ಸದಸ್ಯರು ಸಹ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಅವರನ್ನೇ ಬೆಂಬಲಿಸುವುದಾಗಿ ತಮ್ಮ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.
ಅಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದು ಕೂಡ ರವಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಪಡುವುದು ತಪ್ಪೇನು ಅಲ್ಲ. ಅವರೆಲ್ಲ ಅವರ ಪ್ರಯತ್ನ ಮಾಡಿದ್ದಾರೆ. ನಾವು ಸಹ ಮತದಾರರ ವಿಶ್ವಾಸಗಳಿಸಲು ಪ್ರಯತ್ನ ಮಾಡಿದ್ದೇವೆ. ಯಾರನ್ನೇ ಮತ ಕೇಳಿದರು ರಾಜ್ಯ, ಜಿಲ್ಲೆಯ ಭವಿಷ್ಯದ ದೃಷ್ಠಿಯಿಂದ ಕಾಂಗ್ರೆಸ್ (Congress) ಬೆಂಬಲಿಸುವುದಾಗಿ ತಿಳಿಸಿದ್ದರು. ರಾಜ್ಯಕ್ಕೆ ಇದೊಂದು ಬದಲಾವಣೆಯ ಕಾಲ ಎಂದರು.
ನಗರಸಭೆ ಕಾಂಗ್ರೆಸ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.