ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಜಯಭೇರಿ: ಕಾಂಗ್ರೆಸ್‌ಗೆ ಮುಖಭಂಗ

By Govindaraj S  |  First Published Aug 22, 2024, 8:14 PM IST

ಬಿಜೆಪಿ-ಜೆಡಿಎಸ್ ಮೈತ್ರಿ ಜಯಭೇರಿ ಬಾರಿಸಿದ್ದು, ಅಧ್ಯಕ್ಷರಾಗಿ ಬಿಜೆಪಿಯ 6 ನೇ ವಾರ್ಡ್ನ ಸುಜಾತ ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ 14ನೇ ವಾರ್ಡ್ನ ಅನು ಮಧುಕರ್ ತಲಾ 25 ಮತಗಳನ್ನು ಗಳಿಸಿ ಆಯ್ಕೆಯಾದರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.22): ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಜಯಭೇರಿ ಬಾರಿಸಿದ್ದು, ಅಧ್ಯಕ್ಷರಾಗಿ ಬಿಜೆಪಿಯ 6 ನೇ ವಾರ್ಡ್ನ ಸುಜಾತ ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ 14ನೇ ವಾರ್ಡ್ನ ಅನು ಮಧುಕರ್ ತಲಾ 25 ಮತಗಳನ್ನು ಗಳಿಸಿ ಆಯ್ಕೆಯಾದರು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎನ್.ಸಲ್ಮಾ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಇಂದಿರಾ ಶಂಕರ್ ಅವರು ತಲಾ 15 ಮತಗಳನ್ನು ಗಳಿಸಿ ಪರಾಭವಗೊಂಡರು. 

Tap to resize

Latest Videos

undefined

ಕಾಂಗ್ರೆಸ್ ಗೆ ಎಸ್ ಡಿ ಪಿ ಐ ಬೆಂಬಲ: ಬಿಜೆಪಿಯ ಇಬ್ಬರು ಸದಸ್ಯರು ಹಾಗೂ ಅಮಾನತುಗೊಂಡಿರುವ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರು ಕಾಂಗ್ರೆಸ್ ಪರ ವಾಲಬಹುದು ಎನ್ನುವ ಮಾತುಗಳು ಹುಸಿಯಾಯಿತು. ಬಿಜೆಪಿಯ ಎಲ್ಲಾ 18 ಸದಸ್ಯರು ಹಾಗೂ ಜೆಡಿಎಸ್ನ ಇಬ್ಬರು ಹಾಗೂ ಜೆಡಿಎಸ್ ಬೆಂಬಲಿತ ಓರ್ವ ಪಕ್ಷೇತರ ಸದಸ್ಯೆ ಜೊತೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್, ಜೆಡಿಎಸ್ನ ಎಸ್.ಎಲ್.ಬೋಜೇಗೌಡ ಹಾಗೂ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಎಲ್ಲರೂ ಹಾಜರಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಇನ್ನು ಕಾಂಗ್ರೆಸ್ ಪರ 12 ಮಂದಿ ಪಕ್ಷದ ಸದಸ್ಯರು, ಎಸ್ಡಿಪಿಐನ ಒಬ್ಬರು, ಒಬ್ಬರು ಪಕ್ಷೇತರ ಸದಸ್ಯ ಹಾಗೂ ಶಾಸಕ ಎಚ್.ಡಿ.ತಮ್ಮಯ್ಯ ಸೇರಿ 15 ಮಂದಿ ಮತ ಚಲಾಯಿಸಿದರು.

ಪಿ.ಓ.ಪಿ ವಿಗ್ರಹಗಳ ನಿಷೇಧ ಹಾಗೂ ರಾಸಾಯನಿಕಗಳಿಂದ ಜಲಮಾಲಿನ್ಯ ತಪ್ಪಿಸಲು ಅಧಿಕಾರಿಗಳ ತಂಡ ನೇಮಿಸಿ: ದಿವ್ಯ ಪ್ರಭು

ಕಾಂಗ್ರೆಸ್ ಗೆ ಮುಖಭಂಗ: ಚುನಾವಣೆ ಘೋಷಣೆ ಆದ ದಿನದಿಂದಲೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಒಟ್ಟಿಗೆ ಪ್ರವಾಸ ತೆರಳಿದ್ದರಾದರೂ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗುತ್ತಾರೆ ಎನ್ನುವುದನ್ನು ಬಿಜೆಪಿ ಮಾತ್ರ ಗೌಪ್ಯವಾಗಿಟ್ಟಿತ್ತು. ಜೆಡಿಎಸ್ ಮಾತ್ರ ತನ್ನ ಬೆಂಬಲಿತ ಪಕ್ಷೇತರ ಸದಸ್ಯೆಗೆ ಅಧ್ಯಕ್ಷ ಸ್ಥಾನ ನೀಡಬೇಕೆನ್ನುವ ಅಹವಾಲು ಮುಂದಿಟ್ಟಿತ್ತು.ಆದರೆ ಇಂದು (ಶುಕ್ರವಾರ) ಬೆಳಗ್ಗೆ ಚುನಾವಣೆಗೆ ಒಂದೆರಡುಗಂಟೆ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರುಗಳಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ಅವರ ನೇತೃತ್ವದಲ್ಲಿ ಸದಸ್ಯರ ಸಭೆ ನಡೆಸಿ ಮುಂದಿನ ಎರಡೂವರೆ ವರ್ಷದ ಅವಧಿಯನ್ನು ಮೂವರಿಗೆ ಹಂಚಿಕೆ ಮಾಡಲು ತೀರ್ಮಾನಿಸಿ ಮೊದಲ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಜಾತ ಶಿವಕುಮಾರ್ ಮತ್ತು ಅನು ಮಧುಕರ್ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಯಿತು.

ಅತ್ತ ಬಿಜೆಪಿಯ ಅಸಮಾಧಾನಿತರನ್ನು ಸೆಳೆದು ಅಧಿಕಾರಕ್ಕೇರುವ ಕಾಂಗ್ರೆಸ್ ಪಕ್ಷದ ಪ್ರಯತ್ನಗಳು ಸಂಫೂರ್ಣ ವಿಫಲಗೊಂಡು ಮುಖಭಂಗ ಅನುಭವಿಸಬೇಕಾಯಿತು. ಚುನಾವಣೆಗೆ ಮುನ್ನ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ನೇತೃತ್ವದಲ್ಲಿ ಸಭೆ ಸೇರಿದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸಿ.ಎನ್.ಸಲ್ಮಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದಿರಾ ಶಂಕರ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದರು. ಆದರೂ ಕಾಂಗ್ರೆಸ್ನ ಮತ್ತೊಬ್ಬರು ಸದಸ್ಯರಾದ ಗೌಸಿಯಾ ಖಾನಂ ಅವರೂ ಸಹ ನಾಮಪತ್ರ ಸಲ್ಲಿಸಿದರಾದರೂ ನಂತರ ಹಿಂದಕ್ಕೆ ಪಡೆದರು.

ಬರದ ಊರು ವಿಜಯಪುರದಲ್ಲಿ ಭಾರೀ ಮಳೆ: ಕೊಚ್ಚಿ ಹೋಯ್ತು ಸೇತುವೆ, ನೆಲಕಚ್ಚಿದ ಲಕ್ಷಾಂತರ ಮೌಲ್ಯದ ದ್ರಾಕ್ಷಿ!

ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಸಂಪರ್ಕಕ್ಕೆ ಸಿಗದೆ ಕಾಂಗ್ರೆಸ್ ಜೊತೆ ಕೈಜೋಡಿಸುವ ಸುಳಿವು ನೀಡಿದ್ದ ಇಬ್ಬರು ಬಿಜೆಪಿ ಸದಸ್ಯರು ಹಾಗೂ ಕಳೆದ ಬಾರಿ ಪಕ್ಷದ ಒಪ್ಪಂದವನ್ನು ಧಿಕ್ಕರಿಸಿ ಅಧಿಕಾರದಲ್ಲಿ ಮುಂದುವರಿದ ಕಾರಣಕ್ಕೆ ಅಮಾನತುಗೊಂಡಿದ್ದ ವರಸಿದ್ದಿ ವೇಣುಗೋಪಾಲ್ ಅವರು ಸಹ ಇಂದಿನ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕಿದ್ದು ಕಾಂಗ್ರೆಸ್ಗೆ ಅಘಾತ ಉಂಟು ಮಾಡಿತು.ಮೈತ್ರಿಕೂಟ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರಸಭೆ ಎದುರು ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು. ಎಲ್ಲಾ ಮುಖಂಡರು, ಸದಸ್ಯರು, ಅಭಿಮಾನಿಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

click me!