ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್, ಇದು ದೇವೇಗೌಡರಿಗೆ ಇಷ್ಟ ಇಲ್ಲ ಎಂದರು.
ಅರಸೀಕೆರೆ (ಅ.04): ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್, ಇದು ದೇವೇಗೌಡರಿಗೆ ಇಷ್ಟ ಇಲ್ಲ ಎಂದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌಡರು ಮಗನ ಒತ್ತಡಕ್ಕೆ ಮಣಿದಿದ್ದಾರೆ. ರಾಜ್ಯಾಧ್ಯಕ್ಷರನ್ನು ಬಿಟ್ಟು ಮೈತ್ರಿ ಮಾಡಿಕೊಂಡಿದ್ದಾರೆ. ಇದಕ್ಕೆ ದೇವೇಗೌಡರು ಮನಸಾರೆ ಒಪ್ಪಿಲ್ಲ ಎಂದು ಹೇಳಿದರು.
ರಾಜ್ಯದಲ್ಲೀಗ ಸೆಕ್ಯುಲರ್ ಪಾರ್ಟಿ ಆಗಿ ಉಳಿದಿರುವುದು ಕಾಂಗ್ರೆಸ್ ಒಂದೇ. ಜನತಾದಳ ಸೆಕ್ಯುಲರ್ ಪಕ್ಷ ಅಂತ ಇತ್ತು. ಅದರಿಂದ ಕಾಂಗ್ರೆಸ್‌ಗೆ ಸ್ವಲ್ಪ ಹೊಡೆತ ಬೀಳುತ್ತಿತ್ತು. ಈಗ ನಮಗೇ ಅನುಕೂಲ ಎಂದರು. ಅವರ ಮೈತ್ರಿಯಿಂದ ನಮಗೆ ಪ್ಲಸ್ ಆಗುತ್ತೆ. ಜೆಡಿಎಸ್ ತೀರ್ಮಾನಕ್ಕೂ ನಮಗೂ ಸಂಬಂಧ ಇಲ್ಲ. ಅವರು ಏನಾದ್ರೂ ಮಾಡಿಕೊಳ್ಳಲಿ ಎಂದರು.
ಹಿಂದೂ ಧರ್ಮ ಉಳಿದರೆ ದೇಶ ಉಳಿಯಲು ಸಾಧ್ಯ: ಶೋಭಾ ಕರಂದ್ಲಾಜೆ
ಈ ಸರ್ಕಾರ ಇರೋದು ಇನ್ನು ಆರೇ ತಿಂಗಳು, ಆಗ ಅಲ್ಪಸಂಖ್ಯಾತರು ನನ್ನ ಹತ್ರಾನೇ ಬರಬೇಕು ಎಂದು ಕುಮಾರಸ್ವಾಮಿ ಹೇಳಿಕೆಗೆ ಕೆಂಡಾಮಂಡಲರಾದ ಜಮೀರ್, ದೇವೇಗೌಡರು, ಕುಮಾರಸ್ವಾಮಿ ಇತಿಹಾಸ ತಗೊಂಡ್ರೆ, ದೇವೇಗೌಡರು ನಮ್ಮ ಸಮಾಜಕ್ಕೆ ಒಳ್ಳೆಯದು ಮಾಡಿದ್ದಾರೆ, ಬೇರೆ ಪಕ್ಷದಲ್ಲಿದ್ದರೂ ಹೆಮ್ಮೆಯಿಂದ ಹೇಳುತ್ತೇನೆ, ಈ ವಯಸ್ಸಿನಲ್ಲೂ ದೇವೇಗೌಡರಿಗೆ ಅಲ್ಪಸಂಖ್ಯಾತರು, ಎಲ್ಲಾ ವರ್ಗದವರ ಬಗ್ಗೆ ಕಾಳಜಿ ಇದೆ, ಆದರೆ ಕುಮಾರಸ್ವಾಮಿಗೆ ಇಲ್ಲ ಎಂದು ಗುಡುಗಿದರು.
ಒಂದು ಉದಾಹರಣೆ ತೋರಿಸಿ: ದೇವೇಗೌಡರು ಸೆಕ್ಯುಲರ್ ಆಗಿದ್ರು, ಇವತ್ತೂ ಹಾಗೆಯೇ ಇದ್ದಾರೆ. ಅವರು ೧೦೦ ಪರ್ಸೆಂಟ್ ಸೆಕ್ಯುಲರ್ ಲೀಡರ್. ಅವರು ಮುಸಲ್ಮಾನರಿಗೆ ರಕ್ಷಣೆ ಕೊಟ್ಟಿದ್ದಾರೆ. ಈದ್ಗಾ, ಮೀಸಲಾತಿ, ಅಧಿಕಾರ ವಿಚಾರದಲ್ಲಿ ಕೊಡುಗೆ ನೀಡಿದ್ದಾರೆ. ಆದರೆ ಯಾವುದಾದರೂ ಮುಸ್ಲಿಮರಿಗೆ ಕುಮಾರಸ್ವಾಮಿ ರಕ್ಷಣೆ ಕೊಟ್ಟಿರುವ ಒಂದು ಉದಾಹರಣೆ ತೋರಿಸಿ ಎಂದು ಸವಾಲು ಹಾಕಿದರು. ಅವರ ಸಂಪುಟದಲ್ಲಿ ನಾನು ಮಂತ್ರಿಯಾದಾಗ ಹಜ್ ಮತ್ತು ವಕ್ಫ್ ಖಾತೆ ನೀಡಿದರು. ಅಲ್ಲೇ ತಿಳಿಯಲಿದೆ ನಮ್ಮ ಬಗ್ಗೆ ಅವರ ಕಾಳಜಿ ಎಷ್ಟು ಎಂಬುದು ಎಂದು ಟಾಂಗ್ ನೀಡಿದರು.
2004ರಲ್ಲಿ ತಮಿಳುನಾಡಿನಿಂದ ರಾಮಸ್ವಾಮಿ ಅವರನ್ನು ಕರ್ಕೊಂಡು ಬಂದು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ರು, ಆಗ ಕುಮಾರಸ್ವಾಮಿಗೆ ಮುಸ್ಲಿಮರ ಬಗ್ಗೆ ಕಾಳಜಿ ಇರಲಿಲ್ಲವಾ, ಫಾರೂಕ್‌ರನ್ನು ಸೋಲಿಸಲು ಎರಡು ಸಲ ರಾಜ್ಯಸಭೆಗೆ ನಿಲ್ಲಿಸಿದ್ದರು, ಸೋಲುವ ಟೈಮಲ್ಲಿ ಮುಸ್ಲಿಮರನ್ನು ಬಲಿ ಹಾಕೋದೋ, ಗೆಲ್ಲೋ ಟೈಮ್‌ನಲ್ಲಿ ಕುಪೇಂದ್ರ ರೆಡ್ಡಿನಾ ಎಂದು ಖಾರವಾಗಿ ಪ್ರಶ್ನಿಸಿದರು.
೨೦೧೮ರಲ್ಲಿ ಎಲ್ಲಾ ಕಡೆ ಫಾರೂಕ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ನಾನು ಸಿಎಂ ಆದ್ರೆ ಫಾರೂಕ್ ಅವರನ್ನು ಡಿಸಿಎಂ ಮಾಡಿ ಹೋಂ ಮಿನಿಸ್ಟರ್ ಮಾಡ್ತೀನಿ ಅಂತಿದ್ರು, ಮಾಡಿದ್ರಾ ಸ್ವಾಮಿ ನೀವು ಎಂದು ಕೇಳಿದರು. 2018ರಲ್ಲಿ ಕಾಂಗ್ರೆಸ್‌ನಲ್ಲಿ ನನಗಿಂತ ಸೀನಿಯರ್‌ಗಳಾದ ರೋಷನ್‌ಬೇಗ್, ತನ್ವಿರ್‌ಸೇಠ್, ಹ್ಯಾರಿಸ್ ಅವರನ್ನು ಬಿಟ್ಟು ನನ್ನನ್ನು ಮಂತ್ರಿ ಮಾಡಿ ೪ ಖಾತೆ ಕೊಟ್ಟಿದ್ರು ಮಿಸ್ಟರ್ ಕುಮಾರಸ್ವಾಮಿ ಅವರೆ, ನೀವು ಕೊಟ್ಟಿದ್ದು ವಕ್ಫ್ ಖಾತೆ ಎಂದು ತಿರುಗೇಟು ನೀಡಿದರು. ಏತಕ್ಕೆ ಮುಸಲ್ಮಾನರು ನಿಮ್ಮ ಬಳಿ ಬರಬೇಕು, ಈಗ ಇಬ್ರಾಹಿಂ ಸಾಹೇಬ್ರನ್ನ ಬಲಿ ಕೊಟ್ಟಿದ್ದೀರಿ, ಶರವಣನನ್ನು ಎಂಎಲ್‌ಸಿ ಮಾಡಿದ್ದೇಕೆ, ಮುಸ್ಲಿಮರು ಇರಲಿಲ್ವಾ ಎಂದು ಕಿಡಿಕಾರಿದರು.
ಸರ್ಕಾರಿ ಕೆಲಸದಲ್ಲಿ ಜಾತಿ ಸಲ್ಲ: ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಅವರು ನಮ್ಮ ಸೀನಿಯರ್ ಲೀಡರ್, ಅವರ ಬಗ್ಗೆ ಬಹಳ ಗೌರವವಿದೆ. ಏಳು ಜನ ಲಿಂಗಾಯತರನ್ನು ಮಂತ್ರಿ ಮಾಡಿದ್ದೇವೆ. ನಾನು ಮುಸ್ಲಿಮರಿಗೆ ಇಂತಹ ಕಡೆ ಕೊಡಿ ಅಂತ ಹೇಳಲು ಆಗುತ್ತಾ, ಯಾವ ಅಧಿಕಾರಿ ಉತ್ತಮ ಕೆಲಸ ಮಾಡ್ತಾರೆ ಅವರನ್ನು ಹಾಕಿಕೊಳ್ಳಬೇಕು. ಸರ್ಕಾರಿ ಕೆಲಸದಲ್ಲಿ ಜಾತಿ ತರಬಾರದು ಎಂದು ಪರೋಕ್ಷವಾಗಿ ಕುಟುಕಿದರು.
ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವ ಬಗ್ಗೆ ನಮ್ಮದು ಹೈಕಮಾಂಡ್ ಪಕ್ಷ. ಅವರು ಏನು ಹೇಳ್ತಾರೋ ಆ ಗೆರೆ ನಾವು ದಾಟಲು ಆಗಲ್ಲ. ಅವರು ಹೇಳಿದಂತೆ ನಡೆಯೋದೂ ಪಕ್ಕಾ, ರಾಜ್ಯದಲ್ಲಿ ಇನ್ನೂ 15 ವರ್ಷ ನಮ್ಮದೇ ಸರ್ಕಾರ ಇರಲಿದೆ, ಯಾರೂ ಅಲ್ಲಾಡಿಸೋಕೆ ಆಗಲ್ಲ ಎಂದು ಭವಿಷ್ಯ ನುಡಿದರು. ಜನರು ಕೆಲಸ ಬಯಸುತ್ತಾರೆ ಹಾಗಾಗಿ ನಮ್ಮ ಸರ್ಕಾರ ಸುಭದ್ರವಾಗಿ ಇರುತ್ತೆ ಎಂದರು.
ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಬೇರೆ ಪಕ್ಷದಿಂದ ಬಹಳ ಜನ ಕಾಂಗ್ರೆಸ್‌ಗೆ ಬರುವವರು ಇದ್ದಾರೆ, ರಾಜ್ಯಾದ್ಯಂತ ಸೆಕ್ಯುಲರ್ ಮೈಂಡೆಡ್ ಕೌನ್ಸಿಲರ್ ೬೦-೮೦ ಜನ ನನ್ನ ಜೊತೆ ಮಾತನಾಡಿದ್ದಾರೆ. ಮೈಸೂರು, ಚನ್ನಪಟ್ಟಣ, ಕೋಲಾರ, ಚಿಕ್ಕಬಳ್ಳಾಪುರ, ಹಾಸನದಿಂದಲೂ ಫೋನ್ ಮಾಡಿದ್ರು. ಮುಂದೆ ಬಹಳ ಜನ ಸೇರುವವರಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಿ ಸೇರಿಸಿಕೊಳ್ತೀವಿ ಎಂದರು. ಇದೇ ವೇಳೆ ಸಿ.ಎಂ.ಇಬ್ರಾಹಿಂ ಅವರನ್ನ ಮರಳಿ ಕಾಂಗ್ರೆಸ್‌ಗೆ ಕರೆತರೋ ವಿಚಾರ ನನಗೆ ಗೊತ್ತಿಲ್ಲ. ಅವರು ಬಂದರೆ ಸ್ವಾಗತ ಎಂದರು.
ಮುಸ್ಲಿಮರು ಮತ ಹಾಕಿಲ್ಲವೆಂದು ಎಚ್‌ಡಿಕೆ ಎದೆಮುಟ್ಟಿ ಹೇಳ್ತಾರಾ?: ಸಚಿವ ಜಮೀರ್
ಕೆ ಎಂ ಶಿವಲಿಂಗೇಗೌಡ ಸಚಿವರಾಗ್ತಾರೆ: ಸಚಿವರ ಮಾತಿನ ನಡುವೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಇದುವರೆಗೆ ಕಾಂಗ್ರೆಸ್ ಸೋಲಿಸುತ್ತಿದ್ದುದು ಜೆಡಿಎಸ್‌ನವರು, ಇನ್ಮುಂದೆ ಕಾಂಗ್ರೆಸ್ ಗೆಲ್ಲಿಸೋರೆ ಜೆಡಿಎಸ್‌ನವರು ಎಂದರು. ಇದಕ್ಕೆ ಸಚಿವರು ಹೌದು ಎಂದು ದನಿಗೂಡಿಸಿದರು. ರಾಜ್ಯದಲ್ಲಿ ಒಂದು ಸಾವಿರ ಮದ್ಯದಂಗಡಿ ತೆರೆಯಲು ನನ್ನ ವಿರೋಧವಿದೆ ಎಂದು ಸಚಿವ ಹಾಗೂ ಶಾಸಕ ಶಿವಲಿಂಗೇಗೌಡ ಇಬ್ಬರೂ ಹೇಳಿದರು. ಶಿವಲಿಂಗೇಗೌಡ ಸಚಿವರಾಗಬೇಕಿತ್ತು ನಾನು ದೆಹಲಿಯಲ್ಲಿದ್ದೆ. ಅವರ ಹೆಸರು ಬಹುತೇಕ ಅಂತಿಮ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಯಾಕೆ ಬದಲಾಯಿತೋ ನನಗೆ ಗೊತ್ತಿಲ್ಲ, ಎರಡೂವರೆ ವರ್ಷ ಆದಮೇಲೆ ಶಿವಲಿಂಗೇಗೌಡ ಸಚಿವರಾಗ್ತಾರೆ ಎಂದು ಜಮೀರ್ ಹೇಳಿದರು.