BJP-JDS ದೋಸ್ತಿಯಲ್ಲಿ ಟಿಕೆಟ್ ಯಾರಿಗೆ?: ಸುಮಲತಾಗೆ ಮತ್ತೊಮ್ಮೆ ಸಿಗುವುದೇ ಮಂಡ್ಯ ಲೋಕಸಭಾ ಟಿಕೆಟ್

By Kannadaprabha News  |  First Published Dec 13, 2023, 12:59 PM IST

ಮುಂಬರುವ ಲೋಕಸಭಾ ಚುನಾವಣೆಯ ಬಿಸಿ ಈಗಾಗಲೇ ಜಿಲ್ಲೆಯಲ್ಲಿ ದಿನೇ ದಿನೇ ಕಾವೇರುತ್ತಿದೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ವಿರೋಧಿಯಾಗಿದ್ದ ಬಿಜೆಪಿ ಈ ಬಾರಿ ಜೆಡಿಎಸ್ ಜೊತೆ ಬಾಂಧವ್ಯ ಬೆಸೆದಿದ್ದು, ಕಾಂಗ್ರೆಸ್ ಈ ಬಾರಿ ವಿರೋಧಿಯಾಗಿ ಕಣಕ್ಕಿಳಿಯುತ್ತಿದೆ. 


ಮಂಡ್ಯ ಮಂಜುನಾಥ

ಮಂಡ್ಯ (ಡಿ.13): ಮುಂಬರುವ ಲೋಕಸಭಾ ಚುನಾವಣೆಯ ಬಿಸಿ ಈಗಾಗಲೇ ಜಿಲ್ಲೆಯಲ್ಲಿ ದಿನೇ ದಿನೇ ಕಾವೇರುತ್ತಿದೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ವಿರೋಧಿಯಾಗಿದ್ದ ಬಿಜೆಪಿ ಈ ಬಾರಿ ಜೆಡಿಎಸ್ ಜೊತೆ ಬಾಂಧವ್ಯ ಬೆಸೆದಿದ್ದು, ಕಾಂಗ್ರೆಸ್ ಈ ಬಾರಿ ವಿರೋಧಿಯಾಗಿ ಕಣಕ್ಕಿಳಿಯುತ್ತಿದೆ. ಈಗ ಜಿಲ್ಲೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿಯಲ್ಲಿ ಸ್ಪರ್ಧಿಸುವ ಕಟ್ಟಾಳುಗಳು ಯಾರು ಎಂಬುದು ಬಹು ಚರ್ಚಿತ ವಿಷಯವಾಗಿದೆ.

Tap to resize

Latest Videos

ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಎರಡೂ ಪಕ್ಷಗಳು ನಿರ್ಧರಿಸಿವೆ. ಮೈತ್ರಿಯ ರೂಪು-ರೇಷೆಗಳು, ಸೀಟು ಹಂಚಿಕೆಯಷ್ಟೇ ನಿರ್ಧಾರವಾಗಬೇಕಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೆ ಸುಮಲತಾ ಅಂಬರೀಶ್ ಉತ್ಸುಕರಾಗಿದ್ದಾರೆ. ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ದಳಪತಿಗಳು ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಒಮ್ಮೆ ಸೀಟು ಹಂಚಿಕೆ ವೇಳೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಸುಮಲತಾ ಸ್ಪರ್ಧೆಗೆ ಅಡ್ಡಿ ಉಂಟಾಗಲಿದೆ. ಹಾಗಾಗಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಬಿಜೆಪಿ ನಾಯಕರಿಗೆ ಅನಿವಾರ್ಯವಾಗಲಿದೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕ ಬಗ್ಗೆ ಪ್ರತ್ಯೇಕತೆಯ ಕೂಗು ಏಳದಂತೆ ನೋಡಿಕೊಳ್ಳಿ: ಶಾಸಕ ಯತ್ನಾಳ

ಜೆಡಿಎಸ್ ಅಭ್ಯರ್ಥಿ ಯಾರು?: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತರುವಂತೆ ಕೆಲವರು ಒತ್ತಡ ಹೇರುತ್ತಿದ್ದರೆ, ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರು ಮತ್ತೊಮ್ಮೆ ಧೂಳಿನಿಂದ ಎದ್ದು ಬರುವುದಕ್ಕೆ ಚಿಂತಿಸುತ್ತಿದ್ದಾರೆ. ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ ಅವರನ್ನು ಮತ್ತೆ ಕ್ಷೇತ್ರದಿಂದ ಕಣಕ್ಕಿಳಿಸುವುದು ಬೇಡ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಆರು ಸ್ಥಾನಗಳಲ್ಲಿ ಸೋಲನ್ನಪ್ಪಿ ಅಸ್ತಿತ್ವ ಕಳೆದುಕೊಂಡಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ದಳದ ಅಭ್ಯರ್ಥಿಯಾಗಿ ಕರೆತರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗಿದೆ.

ಸ್ಟಾರ್ ಪ್ರಚಾರಕಿಯಾಗಲೂ ಸಿದ್ಧ: ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಮೊದಲ ಆಯ್ಕೆಯನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ. ಕ್ಷೇತ್ರ ಹಂಚಿಕೆ ಸಮಯದಲ್ಲಿ ಮಂಡ್ಯ ಬಿಜೆಪಿ ಟಿಕೆಟ್ ಕೈತಪ್ಪಿದರೆ ಸುಮಲತಾ ಅವರು ಸಂಸದ ಡಿ.ವಿ.ಸದಾನಂದಗೌಡರಿಂದ ತೆರವಾಗಲಿರುವ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಯ್ಕೆಯನ್ನು ಮುಂದಿಟ್ಟುಕೊಂಡಿದ್ದಾರೆ. ಆ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಸುಮಲತಾ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಮಂಡ್ಯ ಹಾಗೂ ಬೆಂಗಳೂರು ಉತ್ತರ ಕ್ಷೇತ್ರ ಎರಡೂ ಕಡೆ ಬಿಜೆಪಿ ಟಿಕೆಟ್ ಸಿಗುವುದಿಲ್ಲವೆಂದಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿ ಪ್ರಚಾರ ನಡೆಸುವುದು. ಮುಂದೆ ರಾಜ್ಯಸಭೆಗೆ ತಮ್ಮನ್ನು ಆಯ್ಕೆ ಮಾಡುವಂತೆ ಬಿಜೆಪಿ ವರಿಷ್ಠರ ಎದುರು ಆಯ್ಕೆಗಳನ್ನು ಮುಂದಿರಿಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಕ್ಷೇತ್ರಕ್ಕೆ ದಳಪತಿಗಳ ಪಟ್ಟು: ಈ ಮೊದಲು ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರ ನೀಡುವ ಬಗ್ಗೆ ಪ್ರಾಮೀಸ್ ಮಾಡಿರುವುದರಿಂದ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲಾಗುವುದಿಲ್ಲ ಎಂಬ ನಿಲುವಿಗೆ ಬಿಜೆಪಿ ನಾಯಕರು ಬಂದಿದ್ದರು. ಆದರೆ, ದಳಪತಿಗಳೂ ಮಂಡ್ಯ ಕ್ಷೇತ್ರವನ್ನು ತಮಗೇ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬಿಜೆಪಿಗಿಂತಲೂ ಜೆಡಿಎಸ್ ಕ್ಷೇತ್ರದೊಳಗೆ ಬಲಿಷ್ಠವಾಗಿರುವುದರಿಂದ ಅಂತಿಮ ಘಳಿಗೆಯಲ್ಲಿ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಒಲಿದರೂ ಆಶ್ಚರ್ಯಪಡಬೇಕಿಲ್ಲ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಬದಲಾದ ರಾಜಕೀಯ ಚಿತ್ರಣ: ೨೦೨೪ರ ಲೋಕಸಭಾ ಚುನಾವಣೆ ವೇಳೆ ಕ್ಷೇತ್ರದ ರಾಜಕೀಯ ಚಿತ್ರಣವೇ ಸಂಪೂರ್ಣ ಬದಲಾಗಿಹೋಗಿದೆ. ಅಂದು ಬಿಜೆಪಿಗೆ ರಾಜಕೀಯ ಎದುರಾಳಿಯಾಗಿದ್ದ ಜೆಡಿಎಸ್ ಈಗ ಮೈತ್ರಿಯಿಂದ ಮಿತ್ರನಾಗಿದ್ದಾನೆ. ಕಳೆದ ಲೋಕಸಭಾ ಚುನಾವಣೆಯ ಜೆಡಿಎಸ್ ಮಿತ್ರ ಕಾಂಗ್ರೆಸ್ ಈಗ ವಿರೋಧಿ ಸ್ಥಾನದಲ್ಲಿದೆ. ಜನಾಭಿಪ್ರಾಯವೂ ಪ್ರಸ್ತುತ ಸಂದರ್ಭದಲ್ಲಿ ವಿಭಿನ್ನವಾಗಿದೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ಗೆ ಗೆಲುವು ಅನಿವಾರ್ಯವಾಗಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳಲ್ಲೂ ಗೆಲ್ಲುವ ಅಭ್ಯರ್ಥಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ರಾಜಕೀಯವಾಗಿ ಜಟಿಲ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಸ್ಪರ್ಧೆಯನ್ನು ಖಚಿತಪಡಿಸುವುದಕ್ಕೆ ಸಾಧ್ಯವಾಗದಂತಾಗಿದೆ.

ಕ್ಷೇತ್ರದ ಹಿಡಿತ ಕೈತಪ್ಪುವ ಆತಂಕ: ಕಳೆದ ಎರಡು ದಶಕಗಳಿಂದ ಮಂಡ್ಯ ಜಿಲ್ಲೆಯ ಮೇಲೆ ದಳಪತಿಗಳು ಸಾಧಿಸಿರುವ ಹಿಡಿತ ಕೈತಪ್ಪಿಹೋಗುವ ಆತಂಕ ಜೆಡಿಎಸ್ ವರಿಷ್ಠರನ್ನು ತೀವ್ರವಾಗಿ ಕಾಡುತ್ತಿದೆ. ೨೦೧೮ರ ವಿಧಾನಸಭೆ ಚುನಾವಣೆ ನಂತರ ನಿರಂತರ ಸೋಲು ಜೆಡಿಎಸ್ ನಾಯಕರನ್ನು ಕಂಗೆಡಿಸುವಂತೆ ಮಾಡಿದೆ. ೨೦೨೩ ವಿಧಾನಸಭೆ ಚುನಾವಣೆ ಜೆಡಿಎಸ್‌ಗೆ ಒಂದೇ ಒಂದು ಸ್ಥಾನ ದೊರಕಿಸಿಕೊಟ್ಟಿದೆ. ಈ ಸೋಲುಗಳ ಕಹಿ ಅನುಭವದಿಂದ ಹೊರಬರಲು ಗೆಲುವು ಅನಿವಾರ್ಯವಾಗಿದೆ. ಅದಕ್ಕಾಗಿ ಸೀಟು ಹಂಚಿಕೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು, ಚುನಾವಣೆ ಗೆಲ್ಲುವುದನ್ನು ಗುರಿಯಾಗಿಸಿಕೊಂಡು ದಳಪತಿಗಳು ಮುನ್ನಡೆಯುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಕೊಲೆ ಬೆದರಿಕೆ?: ಬಹಿರಂಗ ವೇದಿಕೆಯಲ್ಲಿ ಆಗಿದ್ದೇನು?

ಕಾಂಗ್ರೆಸ್-ಜೆಡಿಎಸ್‌ಗೆ ಪ್ರತಿಷ್ಠೆ: ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಲೋಕಸಭೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದರ ನಡುವೆ ಬಿಜೆಪಿ ಮಂಡ್ಯ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್ ಬೆಂಬಲ ಪಡೆದು ಗೆಲ್ಲುವ ಕಾರ್ಯತಂತ್ರ ರೂಪಿಸಿದೆ. ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ ಹೆಗಲ ಮೇಲೆ ಚುನಾವಣೆ ಗೆಲುವಿನ ಜವಾಬ್ದಾರಿ ಬಿದ್ದಿದೆ. ಇದರ ಮಧ್ಯೆ ಕೈ ಅಭ್ಯರ್ಥಿ ಯಾರಾಗುತ್ತಾರೆ?. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಹೇಗಿರಲಿದೆ?, ಮಂಡ್ಯ ಕ್ಷೇತ್ರ ಯಾರ ಕೈಸೇರಲಿದೆ?. ಅಭ್ಯರ್ಥಿ ಯಾರಾಗಲಿದ್ದಾರೆ?. ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಸಂಸದೆ ಸುಮಲತಾ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದನ್ನು ಕಾದುನೋಡಬೇಕಿದೆ.

click me!