3 ಮಾಜಿ ಸಿಎಂಗಳಿಗೆ ಬಿಜೆಪಿ ಕೊಕ್‌, ಜಾತಿ ಆಧಾರಿತವಾಗಿ ಮುಖ್ಯಮಂತ್ರಿ ಪಟ್ಟ ಹಂಚಿದ ಬಿಜೆಪಿ!

By Kannadaprabha NewsFirst Published Dec 13, 2023, 9:11 AM IST
Highlights

ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಹೊಸಮುಖ. ಅಟಲ್, ಅಡ್ವಾಣಿ ಕಾಲದ ಮೂರೂ ನಾಯಕರು ನೇಪಥ್ಯಕ್ಕೆ. ಲೋಕಸಭಾ ಚುನಾವಣೆ ಗಮನದಲ್ಲಿಟ್ಟು ಸಿಎಂ, ಡಿಸಿಎಂ ಆಯ್ಕೆ

ನವದೆಹಲಿ (ಡಿ.13): ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಖ್ಯಮಂತ್ರಿಗಳನ್ನಾಗಿ ಹೊಸಬರನ್ನು ಬಿಜೆಪಿ ನೇಮಕ ಮಾಡಿದ್ದು, ಇವರ ಆಯ್ಕೆಯ ಹಿಂದೆ ದೊಡ್ಡ ಮಟ್ಟದ ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ. ಆದರೆ ಹೊಸಬರ ಆಯ್ಕೆಯಿಂದ ದಶಕಗಳ ಕಾಲ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಮೂವರು ನಾಯಕರು ನೇಪಥ್ಯಕ್ಕೆ ಸರಿದಂತಾಗಿದೆ.

ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ. ಅಡ್ವಾಣಿ ಕಾಲದಿಂದ ಈ ಮೂರು ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿದಿದ್ದ ರಮಣ್‌ ಸಿಂಗ್‌ (ಛತ್ತೀಸ್‌ಗಢ), ಶಿವರಾಜ ಸಿಂಗ್‌ ಚೌಹಾಣ್‌ (ಮಧ್ಯಪ್ರದೇಶ) ಹಾಗೂ ವಸುಂಧರಾ ರಾಜೇ (ರಾಜಸ್ಥಾನ) ಅವರ ರಾಜ್ಯ ರಾಜಕೀಯ ಅಂತ್ಯದತ್ತ ಸಾಗಲು ಮುನ್ನುಡಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 3 ರಾಜ್ಯಗಳಿಗೂ ಹೊಸ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ಜಾತಿ ರಾಜಕಾರಣದ ಸಮೀಕರಣ ಸಾಧಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

Latest Videos

ಛತ್ತೀಸ್‌ಗಢಕ್ಕೆ ಆದಿವಾಸಿ ಸಿಎಂ: ಛತ್ತೀಸ್‌ಗಢದಲ್ಲಿ ಆದಿವಾಸಿ ಸಮುದಾಯಕ್ಕೆ ಸೇರಿದವರ ಪ್ರಮಾಣ ಶೇ.32ರಷ್ಟಿದೆ. ಹೀಗಾಗಿಯೇ ಇಲ್ಲಿ ಇದೇ ಸಮುದಾಯಕ್ಕೆ ಸೇರಿದ ವಿಷ್ಣುದೇವ ಸಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ ಆದಿವಾಸಿ ಪ್ರಾಬಲ್ಯವಿರುವ ಸರ್ಗುಜಾ ಮತ್ತು ಬಸ್ತಾರ್‌ನಲ್ಲಿನ 26 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಜಯಿಸಿದೆ. ಅಲ್ಲದೇ ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳನ್ನು ಸೇರಿಸಿದರೆ ಬುಡಕಟ್ಟು ಪ್ರಾಬಲ್ಯವಿರುವ 75 ಲೋಕಸಭಾ ಕ್ಷೇತ್ರಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಆಯ್ಕೆಯನ್ನು ಮಾಡಿದೆ.

ಮಧ್ಯಪ್ರದೇಶಕ್ಕೆ ಯಾದವ ಸಿಎಂ: ದೇಶದ ಹೃದಯ ಭಾಗವಾದ ಮಧ್ಯಪ್ರದೇಶದಲ್ಲಿ ಯಾದವ ಸಮುದಾಯದ ಮುಖ್ಯಮಂತ್ರಿಗೆ ಬಿಜೆಪಿ ಮಣೆ ಹಾಕಿದೆ. ಇದರೊಂದಿಗೆ ದಲಿತ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಯಾದವ ಸಮುದಾಯಕ್ಕೆ ಸೇರಿದವರ ಸಂಖ್ಯೆ ಉತ್ತರಪ್ರದೇಶ ಮತ್ತು ಬಿಹಾರದಲ್ಲೂ ಹೆಚ್ಚಿನ ಪ್ರಮಾಣದಲ್ಲಿದ್ದು, ಈ ರಾಜ್ಯಗಳು ಒಟ್ಟು 120 ಸಂಸತ್‌ ಸ್ಥಾನವನ್ನು ಒಳಗೊಳ್ಳುತ್ತವೆ. ಮುಂದಿನ ಚುನಾವಣೆಯಲ್ಲೂ ಹಿಂದಿ ಬಾಹುಳ್ಯದ ಈ ರಾಜ್ಯಗಳನ್ನು ಗೆಲ್ಲುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್ ಮತ್ತು ಬಿಹಾರದಲ್ಲಿ ತೇಜಸ್ವಿ ಯಾದವ್‌ಗೆ ವಿರುದ್ಧವಾಗಿ ಮತಗಳಿಸಲು ಇದು ಬಿಜೆಪಿಗೆ ಸಹಾಯ ಮಾಡಲಿದೆ. ಮೋಹನ್‌ ಯಾದವ್‌ ಹೊಸ ಸಿಎಂ ಆಗಿದ್ದಾರೆ.

ರಾಜಸ್ಥಾನಕ್ಕೆ ಬ್ರಾಹ್ಮಣ ಸಿಎಂ: ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದ ಪ್ರಮಾಣ ಶೇ.7ರಷ್ಟಿದ್ದು, ಇದೇ ಸಮುದಾಯದ ಭಜನ್‌ಲಾಲ್‌ ಶರ್ಮಾ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಉಳಿದಂತೆ ರಜಪೂತ ಮತ್ತು ದಲಿತ ಸಮುದಾಯದ ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ. ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದವರು ಪ್ರಭಾವಿಗಳಾಗಿದ್ದು, ಈ ಸಮುದಾಯದ ಮುಖ್ಯಮಂತ್ರಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಮತ ತಂದುಕೊಡಬಹುದು. ಅಲ್ಲದೇ ಇದು ಹರ್ಯಾಣ ರಾಜ್ಯದ ಮೇಲೂ ಪ್ರಭಾವ ಬೀರಲಿದ್ದು, ಛತ್ತೀಸ್‌ಗಢ, ಮಧ್ಯಪ್ರದೇಶ ಸೇರಿ 145 ಸಂಸದರು ಆಯ್ಕೆಯಾಗಲಿದ್ದು, ಇದರಲ್ಲಿ 114 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರಾಗಲಿದ್ದಾರೆ. ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತಂದುಕೊಡಲಿದೆ.

click me!