ಉತ್ತರ ಕರ್ನಾಟಕ ಬಗ್ಗೆ ಪ್ರತ್ಯೇಕತೆಯ ಕೂಗು ಏಳದಂತೆ ನೋಡಿಕೊಳ್ಳಿ: ಶಾಸಕ ಯತ್ನಾಳ

Published : Dec 13, 2023, 10:16 AM IST
ಉತ್ತರ ಕರ್ನಾಟಕ ಬಗ್ಗೆ ಪ್ರತ್ಯೇಕತೆಯ ಕೂಗು ಏಳದಂತೆ ನೋಡಿಕೊಳ್ಳಿ: ಶಾಸಕ ಯತ್ನಾಳ

ಸಾರಾಂಶ

ಕುಡಿಯುವ ನೀರು, ಶಿಕ್ಷಣ, ವೈದ್ಯಕೀಯ ಸೇವೆ, ಉದ್ಯೋಗ, ನೀರಾವರಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಹಿಂದೆ ಉಳಿದಿದ್ದು, ಇದೇ ರೀತಿಯ ತಾರತಮ್ಯ ಮುಂದುವರೆದರೆ ಜನರು ರೊಚ್ಚಿಗೇಳುತ್ತಾರೆ ಎಂದು ಪಕ್ಷ ಬೇಧ ಮರೆತು ಶಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.   

ವಿಧಾನಸಭೆ (ಡಿ.13): ಕುಡಿಯುವ ನೀರು, ಶಿಕ್ಷಣ, ವೈದ್ಯಕೀಯ ಸೇವೆ, ಉದ್ಯೋಗ, ನೀರಾವರಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಹಿಂದೆ ಉಳಿದಿದ್ದು, ಇದೇ ರೀತಿಯ ತಾರತಮ್ಯ ಮುಂದುವರೆದರೆ ಜನರು ರೊಚ್ಚಿಗೇಳುತ್ತಾರೆ ಎಂದು ಪಕ್ಷ ಬೇಧ ಮರೆತು ಶಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಂಗಳವಾರ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ತಮ್ಮ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಭಾಗ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರಲ್ಲದೇ ಪ್ರತ್ಯೇಕ ಕೂಗಿಗೆ ಅವಕಾಶ ನೀಡದೇ ಅಭಿವೃದ್ಧಿಗೆ ಒತ್ತು ನೀಡಿ ಎಂದು ಆಗ್ರಹಿಸಿದರು.

ಪ್ರತಿಸಲದ ಅಧಿವೇಶನದಲ್ಲೂ ಕೊನೆಯ ಎರಡು ದಿನಗಳ ಕಾಲ ಮಾತ್ರ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ನಡೆಯುತ್ತಿದ್ದ ಚರ್ಚೆ ಈ ಬಾರಿ ಅಧಿವೇಶನದ ಮೊದಲ ವಾರದಲ್ಲೇ ಉತ್ತರ ಕರ್ನಾಟಕ ಹಾಗೂ ಬರದ ಕುರಿತಂತೆ ಚರ್ಚೆಗೆ ಅವಕಾಶ ಕಲ್ಪಿಸಿದ್ದು ವಿಶೇಷ. ಮಂಗಳವಾರ ಪ್ರಶ್ನೋತ್ತರ, ಗಮನ ಸೆಳೆಯುವ ಕಲಾಪ ಹೊರತು ಪಡಿಸಿ ಇಡೀ ದಿನ ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಯಿತು. ಶಾಸಕರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನೇ ಗಮನ ಸೆಳೆಯುವ ಮೂಲಕವೇ ಉತ್ತರ ಕರ್ನಾಟಕ ಎಷ್ಟರ ಮಟ್ಟಿಗೆ ಹಿಂದುಳಿದಿದೆ ಎಂಬುದನ್ನು ವಿವರಿಸಿದರು.

ಶಾಸಕ ಯತ್ನಾಳ್‌ ಅವನತಿ ಆರಂಭವಾಗಿದೆ: ಮಾಜಿ ಸಚಿವ ಮುರುಗೇಶ್‌ ನಿರಾಣಿ

ಪ್ರತ್ಯೇಕತೆ ಬಾರದಂತೆ ನೋಡಿಕೊಳ್ಳಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ನಮ್ಮ ಭಾಗ ಬಹಳಷ್ಟು ಹಿಂದುಳಿದಿದೆ. ಉನ್ನತ ಹುದ್ದೆಗಳು ಕೂಡ ಅಲ್ಲಿನವರಿಗೆ ದೊರೆಯುತ್ತವೆ. ಅಭಿವೃದ್ಧಿ ಮತ್ತು ಹುದ್ದೆ ಪಡೆಯುವಲ್ಲಿಯೂ ಹಿಂದೆ ಬಿದ್ದಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನ ರೊಚ್ಚಿಗೇಳುತ್ತಾರೆ. ನಿಮಗೆ ಪಾಠ ಕಲಿಸಬಹುದು. ಜತೆಗೆ ಪ್ರತ್ಯೇಕತೆಯ ಕೂಗು ಕೇಳಿ ಬರಬಹುದು. ಅದಕ್ಕೆ ಅವಕಾಶ ನೀಡದೇ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.

ಯಾದಗಿರಿ ಶಾಸಕ ಶರಣು ಕಂದಕೂರ ಮಾತನಾಡಿ, ಕಲುಷಿತ ನೀರಿನಿಂದ ಮೂರು ಜನ ಸಾವಿಗೀಡಾಗಿದ್ದಾರೆ ಎಂದರೆ ನಮ್ಮಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಶುದ್ಧ ನೀರು ನಮ್ಮ ಭಾಗಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದು ವಿಪರ್ಯಾಸ ಎಂದು ನೀರಿನ ಸಮಸ್ಯೆ ತೆರೆದಿಟ್ಟರು. ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಪಿಎಚ್‌ಸಿ ಸೆಂಟರ್‌ಗಳಲ್ಲಿ ವೈದ್ಯರ ಸಮಸ್ಯೆ ಬಿಚ್ಚಿಟ್ಟರು. ಅಲ್ಲದೇ, ಶಿಕ್ಷಣ ಆರೋಗ್ಯ, ಕುಡಿವ ನೀರಿನ ಸಮಸ್ಯೆ ಬಗೆಹರಿಸಿದರೆ ಎಷ್ಟೋ ಸುಧಾರಣೆಯಾಗುತ್ತದೆ ಎಂದರು.

ರಾಯಚೂರು ಗ್ರಾಮಾಂತರ ಶಾಸಕ ಬಸವರಾಜ ದದ್ದಲ ಮಾತನಾಡಿ, ಆಲಮಟ್ಟಿ ಡ್ಯಾಂನ ಗೇಟ್‌ ಎತ್ತರಿಸಿದರೆ ನೀರಾವರಿ ಪ್ರದೇಶ ಹೆಚ್ಚಾಗುತ್ತದೆ. ಇದರಿಂದ ಗುಳೆ ಹೋಗುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು. ಕಾಗವಾಡ ಶಾಸಕ ರಾಜು ಕಾಗೆ, ಪ್ರತಿವರ್ಷ ಕುಡಿವ ನೀರಿನ ಸಮಸ್ಯೆ ಎದುರಿಸುತ್ತೇವೆ. ಆಗ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿ ಎಂದು ಕೇಳಬೇಕಾಗುತ್ತದೆ. ಅವರು ಸೊಲ್ಲಾಪುರ ಹಾಗೂ ಜತ್ತ ಕೃಷ್ಣಾ ನದಿಯಿಂದ ನೀರು ಕೊಡಿ ಎಂದು ಹೇಳುತ್ತಾರೆ. ಅದಕ್ಕೆ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಬೇಕು. ಈ ಕೆಲಸ ಸರ್ಕಾರದಿಂದ ಆಗಬೇಕು ಎಂದರು.

ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಕೊಲೆ ಬೆದರಿಕೆ?

ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಇಲ್ಲಿನ ಬಡತನ, ನಿರುದ್ಯೋಗ, ಹಸಿವು, ನೀರಾವರಿ, ಶಿಕ್ಷಣದಲ್ಲಿ ಹಿಂದುಳಿದಿರುವುದು ಹೀಗೆ ಇಲ್ಲಿನ ಸಮಸ್ಯೆಗಳನ್ನು ತಮ್ಮ ರೋಷಾವೇಷದ ಮಾತುಗಳಿಂದ ಸದನದ ಗಮನ ಸೆಳೆದರು. ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಚಳಿಗಾಲದ ಅಧಿವೇಶನದಲ್ಲಿ ಪ್ರತಿ ವರ್ಷ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಏನೇನು ನಡೆದಿದೆ, ಎಷ್ಟು ಪ್ರಯೋಜನವಾಗಿದೆ, ಅದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಿದೆ ಎಂಬ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಬಹಿರಂಗಪಡಿಸಬೇಕು ಎಂಬ ಸಲಹೆ ನೀಡಿದ್ದು ವಿಶೇಷವಾಗಿತ್ತು. ಶಾಸಕರಾದ ಕಂಪ್ಲಿ ಗಣೇಶ, ದೇವದುರ್ಗದ ಕರಿಯಮ್ಮ, ಅವಿನಾಶ ಜಾಧವ ಸೇರಿದಂತೆ ಹಲವು ಶಾಸಕರು ಉತ್ತರ ಕರ್ನಾಟಕದ ಚರ್ಚೆಯಲ್ಲಿ ಭಾಗವಹಿಸಿದ್ದರು. ಬುಧವಾರ ಉತ್ತರ ಕರ್ನಾಟಕದ ಚರ್ಚೆ ಮುಂದುವರಿಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ