ಕಾಫಿನಾಡಿನಲ್ಲಿ ಮುಂದುವರಿದ ಹಾಲಿ ವರ್ಸಸ್ ಮಾಜಿ ಶಾಸಕರ ಟಾಕ್ ಫೈಟ್
ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಗೌಡ ವ್ಯಂಗ್ಯ
ಅಕ್ರಮ ಆಸ್ತಿ ಮಾಡಿದ್ದರೆ ಲೋಕಾಯುಕ್ತ ತನಿಖೆ ಸೇರಿದಂತೆ ಯಾವುದೇ ತನಿಖೆಗೂ ಸಿದ್ದ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.28) : ಕಾಫಿನಾಡಿನಲ್ಲಿ ಹಾಲಿ ವರ್ಸಸ್ ಮಾಜಿ ಶಾಸಕರ ಟಾಕ್ ಫೈಟ್ ಮುಂದುವರಿದೆ. ರಾಜ್ಯ ಬಿಜೆಪಿಯಿಂದ ನಿನ್ನೆ ಜಿಲ್ಲೆಯ ಶೃಂಗೇರಿಯಲ್ಲಿ ಮಾಡಲಾಗಿರುವ ಜನಸಂಕಲ್ಪ ಯಾತ್ರೆಯು ಮೂಲತಃ ಯಾತ್ರೆಯಾಗಿರದೇ ನನ್ನನ್ನು ಸೋಲಿಸಲು ಟಾರ್ಗೆಟ್ ಮಾಡಿದ ಕಾರ್ಯಕ್ರಮವಾಗಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದದ್ದು ಬಿಜೆಪಿಯ ಜನಸಂಕಲ್ಪ ಯಾತ್ರೆ ಅಲ್ಲ. ಅದು ನನ್ನನ್ನ ಟಾರ್ಗೆಟ್ ಮಾಡಿದ್ದ ಸಮಾವೇಶ ಎಂದು ವ್ಯಂಗ್ಯವಾಡಿದ್ದಾರೆ. ಜನಸಂಕಲ್ಪ ಸಮಾವೇಶದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಜೀವರಾಜ್ ಅವರ ಕುಮ್ಮಕ್ಕಿನಿಂದ ಕೇವಲ ನನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂಬುದನ್ನು ನಾನು ಬಹಳ ಸಲ ನೋಡಿದ್ದೇನೆ. ಆದರೆ, ಶೋಭಾ ಕರಂದ್ಲಾಜೆ ಸೇರಿ ಉಳಿದವರು ಮಾತನಾಡುವಾಗ ಅವ್ಯವಹಾರ ಆಗೇ ಹೋಗಿದೆ, ಮುಗಿದೆ ಹೋಗಿದೆ ಎಂಬಂರ್ಥದಲ್ಲಿ ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
BJP Janasankalpa Yatre: ಜೀವರಾಜ್, ಪರವಾಗಿಲ್ವಪ್ಪಾ.. 2023ಕ್ಕೆ ದಾಟುತ್ತೀಯ: ಸಿಎಂ ಬೊಮ್ಮಾಯಿ ಮೆಚ್ಚುಗೆ
ಲೋಕಾಯುಕ್ತ ಸೇರಿ ಯಾವುದೇ ತನಿಖೆಗೂ ಸಿದ್ದ: ನಾನು ರಾಜಕಾರಣಕ್ಕೆ ಬರುವ ಮುನ್ನ ನನ್ನ ಆಸ್ತಿ ಎಷ್ಟಿದೆ? ಜೀವರಾಜ್ ರಾಜಕೀಯಕ್ಕೆ ಬರುವ ಮುನ್ನ ಎಷ್ಟಿತ್ತು? ಈಗ ಇಬ್ಬರ ಆಸ್ತಿಯ ಪ್ರಮಾಣ ಎಷ್ಟಿದೆ ಎಲ್ಲವೂ ತನಿಖೆಯಾಗಲಿ. ನಾನು ರಾಜಕಾರಣಕ್ಕೆ ಬಂದ ಮೇಲೆ ಒಂದು ರೂಪಾಯಿ, ಒಂದಿಂಚು ಜಾಸ್ತಿಯಾಗಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ, ಜೀವರಾಜ್ ಅವರ ಆಸ್ತಿಯ ಪ್ರಮಾಣ ಹೆಚ್ಚಾಗಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂದು ಪ್ರಶ್ನಿಸಿದರು. ಯಾರಾದರೂ ಒಬ್ಬ ವ್ಯಕ್ತಿಯ ಮೇಲೆ ಆರೋಪಿಸುವಾಗ ಸ್ವಲ್ಪವಾದರೂ ಹುರುಳಿರಬೇಕು. ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ವಿಜಯಾನಂದ ದೂರು ನೀಡಿರುವುದನ್ನು ನಾನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಅವರು ವಾಪಸ್ ತೆಗೆದುಕೊಂಡಿರುವುದನ್ನು ಸಹ ಕೇಳಿದ್ದೇನೆ. ಈ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತರಿಂದ ಯಾವುದೇ ನೋಟೀಸ್ ಬಂದಿಲ್ಲ, ಅದ್ದರಿಂದ ಯಾವುದರ ಬಗ್ಗೆಯೂ ಮಾತನಾಡದೆ ಮೌನವಾಗಿದ್ದೆ ಎಂದು ತಿಳಿಸಿದರು.
ವಿಜಯಾನಂದ ಆರೋಪ ಸುಳ್ಳು: ನನ್ನ ಮತ್ತು ಉದ್ಯಮಿ ಸಿದ್ಧಾರ್ಥ ಅವರ ನಡುವಿನ ಸಂಬಂಧ 4 ದಶಕದ್ದು, ಅವರ ಸಂಸ್ಥೆಯಲ್ಲಿ ಸುಮಾರು 30 ವರ್ಷ ದುಡಿದಿದ್ದೇನೆ. ಅವರ ಜೀವಿತ ಅವಧಿಯಲ್ಲಿಯೇ 1956ರ ಪಾರ್ಟನರ್ ಶಿಫ್ ಆಕ್ಟ್ ಪ್ರಕಾರ ಕರಾರುಪತ್ರ ಆಗಿದೆ. ಲಿಖಿತವಾಗಿ ಮಾತ್ರ ಅಲ್ಲ, ಮೌಖಿಕವಾಗಿಯೂ ಹೇಳಿರುವುದು ಅವರ ಕುಟುಂಬದವರಿಗೆ ಗೊತ್ತಿದೆ. ಆಸ್ತಿ ಖರೀದಿ ಸಂದರ್ಭದಲ್ಲಿ ಎಲ್ಲೂ ಲೋಪ ಆಗಿಲ್ಲ. ಕಾರು ಚಾಲಕನ ಕೆಲಸದಲ್ಲಿ ಮುಂದುವರೆಸುವಂತೆ ಕೋರಿ ಬಂದ ವಿಜಯಾನಂದ ಎಂಬ ವ್ಯಕ್ತಿಯಿಂದ ಲೋಕಾಯುಕ್ತರಿಗೆ ದೂರು ಕೊಡಿಸುವ ಬದಲು ಜೀವರಾಜ್ ಅವರು ಪತ್ನಿ ಅಥವಾ ಅವರ ಪುತ್ರ ವೈದ್ಯರು ಅವರಿಂದ ದೂರು ಕೊಡಿಸಬೇಕಾಗಿತ್ತು. ಅವರ ಹತ್ತಿರ ದಾಖಲೆ ಇದ್ದರೆ, ಅವರದೇ ಸರ್ಕಾರ ಇದೆ, ತನಿಖಾ ಸಂಸ್ಥೆಗಳು ಇವೆ. ಅವುಗಳಿಂದ ತನಿಖೆ ನಡೆಸಲು ಸರ್ಕಾರಕ್ಕೆ ಕೋರಿಕೊಳ್ಳಬೇಕಾಗಿತ್ತು. ಆದರೆ, ಕೆಲಸ ಕೇಳಲು ಬಂದ ವ್ಯಕ್ತಿಯಿಂದ ದೂರು ಕೊಡಿಸಿರುವುದು ನೋಡಿದರೆ ಇದೆಲ್ಲಾ ಸುಳ್ಳು ಮಾಹಿತಿ ಎಂದರು.
ಶಾಸಕರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ಕೈಗೊಳ್ಳಿ: ಮಾಜಿ ಸಚಿವ ಜೀವರಾಜ್ ಆಗ್ರಹ
ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ: ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಆದರೆ, ಸರ್ಕಾರದಿಂದ ಅನುದಾನ ತರುವ ಸಂದರ್ಭದಲ್ಲಿ ಜೀವರಾಜ್ ಅಡ್ಡಗಾಲು ಹಾಕುವ ಕೆಲಸ ಮಾಡಿದ್ದಾರೆ. ಸೋಲಿನ ಹತಾಶೆಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಮನೋ ರೋಗಕ್ಕೆ ತುತ್ತಾಗಿರುವವರಂತೆ ಕಾಣುತ್ತಾರೆ ಎಂದ ಅವರು, ಅವರು ಎಷ್ಟೇ ತೊಂದರೆ ಕೊಟ್ಟರೂ ನಾನು ಬಗ್ಗುವವನಲ್ಲ ಎಂದು ಹೇಳಿದರು.ಕಾಲ ಕಾಲಕ್ಕೆ ಆದಾಯ ತೆರಿಗೆ ಸಂದಾಯ ಮಾಡುತ್ತಿದ್ದೇನೆ. ಯಾವುದೇ ತನಿಖಾ ಸಂಸ್ಥೆಯ ಮುಂದೆ ದಾಖಲೆ ಹಜಾರು ಪಡಿಸಲು ಸಿದ್ಧವಾಗಿದ್ದೇನೆ ಎಂದು ತಿಳಿಸಿದರು.