ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡತನವನ್ನ ಹೋಗಲಾಡಿಸಲಾಗಿಲ್ಲ. ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರ ಕೊಟ್ಟು ನೋಡಿ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರ (ನ.28): ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡತನವನ್ನ ಹೋಗಲಾಡಿಸಲಾಗಿಲ್ಲ. ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರ ಕೊಟ್ಟು ನೋಡಿ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಂಚರತ್ನ ರಥಯಾತ್ರೆಯ 10ನೇ ದಿನವಾದ ಭಾನುವಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಮಂಚೇನಹಳ್ಳಿ, ಮುಸ್ಟೂರು, ಗೊಲ್ಲಹಳ್ಳಿ, ಪೆರೇಸಂದ್ರ, ಹೊನೇಗಲ್ಲು, ದಿಬ್ಬೂರು, ನಾಯನಹಳ್ಳಿ ಗ್ರಾಮಗಳಲ್ಲಿ ನಡೆದ ರಥಯಾತ್ರೆ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದರು.
ಆರೋಗ್ಯ ಲೆಕ್ಕಿಸದೇ ಯಾತ್ರೆ: ಇಂದು ನನ್ನ ಆರೋಗ್ಯವನ್ನು ಲೆಕ್ಕಿಸದೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ನೂರು ದಿನ ಹಮ್ಮಿಕೊಂಡಿದ್ದೇನೆ. ನಿಮಗೆ ನಮ್ಮ ಪಂಚರತ್ನ ಯೋಜನೆ ಬಗ್ಗೆ ತಿಳಿಸಲು ಓಡಾಡುತ್ತಿದ್ದೇನೆ. ಕಳೆದ 10 ದಿನಗಳಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆಂದರು. ಸ್ವಾತಂತ್ರ್ಯ ಬಂದ ಬಳಿಕ ಎಷ್ಟೋ ನೇಮಕಾತಿಯಾಗಿಲ್ಲ. ಸರಿಯಾಗಿ ಕಟ್ಟಡ ಕಟ್ಟಿಲ್ಲ. ಎರಡು ವರ್ಷದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿಲ್ಲ. ಈ ಭಾಗದಲ್ಲಿ ಬಸ್ ವ್ಯವಸ್ಥೆ ಕೂಡ ಸರಿಯಾಗಿಲ್ಲ.
ಬಿಜೆಪಿ ಸರ್ಕಾರ ಬಂದಾಗಲೇ ಗಡಿ ಗಲಾಟೆ: ಎಚ್.ಡಿ.ಕುಮಾರಸ್ವಾಮಿ
ಹೀಗಿರುವಾಗ ಬಡ ಮಕ್ಕಳು ಶಾಲೆಗೆ ಹೋಗಿ ಕಲಿಯೋದು ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಇದಕ್ಕಾಗಿ ಪಂಚರತ್ನ ಯೋಜನೆಗೆ 1ಲಕ್ಷ 20 ಸಾವಿರ ಕೋಟಿ ಹಣ ಹೊಂದಿಸಬೇಕಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಹಣ ಪೋಲಾಗಲು ಬಿಡೋದಿಲ್ಲ. ಜನತೆಯ ಸಮಸ್ಯೆ ಆಧಾರದ ಮೇಲೆ, ಜನರಿಗೆ ಅನುಕೂಲ ಆಗಲು ಪ್ರಣಾಳಿಕೆ ತರುತ್ತವೆಂದು ಭರವಸೆ ನೀಡಿದರು.
ಪಾಪದ ಹಣಕ್ಕೆ ಕೈವೊಡ್ಡಬೇಡಿ: ಕೆ.ಪಿ. ಬಚ್ಚೇಗೌಡರು ಇಲ್ಲಿ ಪ್ರಾಮಾಣಿಕ ಕೆಲಸ ಮಾಡಿದರು. ಆದರೆ ಈಗ ಜನರರ ಹಣ ಲೂಟಿ ಹೊಡೆಯುತ್ತಿದ್ದಾರೆ. ಪಾಪದ ಹಣ ಹಂಚಲು ಬಂದರೆ ಹೊರಗೆ ಕಳಿಸಿ. ಇಲ್ಲಿ ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ ಹೆದರಬೇಡಿ. ಇನ್ನಿರೋದು ಐದಾರು ತಿಂಗಳು ಮಾತ್ರ. ನಾನಿದ್ದೇನೆ ನಿಮ್ಮ ಪರವಾಗಿ ನಿಲ್ಲುತ್ತೇನೆ. ಯಾವುದಕ್ಕೂ ಹೆದರೋ ಅವಶ್ಯಕತೆ ಇಲ್ಲ. ಜನ ನೀವೇ ಅವರಿಗೆ ಬುದ್ದಿ ಕಲಿಸಿ ಮನೆಗೆ ಕಳಿಸಿ. ಪ್ರಾಮಾಣಿಕತೆಗೆ, ಸತ್ಯಕ್ಕೆ ಎಂದಿಗೂ ಜಯ ಇರಲಿದೆ. ಎಲ್ಲದರಲ್ಲೂ ಸಚಿವ ಸುಧಾಕರ್ ವ್ಯಾಪಾರ ಮಾಡುತ್ತಿದ್ದಾರೆಂದು ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಪಟಾಲಂ ನ ಅಕ್ರಮ ಕಲ್ಲು ಗಣಿಗಾರಿಕೆಗೆ ಗುಡಿಬಂಡೆ ಸ್ಟೇಷನ್ ನಲ್ಲಿ ಆಟ ನಡೆಯಲ್ಲ ಅಂತ ತಮ್ಮ ಕ್ಷೇತ್ರದ ಊರಿಗೆ, ಅದರಲ್ಲೂ ತಮ್ಮ ಹುಟ್ಟೂರಿಗೆ ಸ್ಟೇಷನ್ ತಂದುಕೊಂಡರು. ಇದರ ಲಾಭ ಆಗೋದು ಜನರಿಗೆ ಅಲ್ಲ, ಸಚಿವರಿಗೆ. ಅಕ್ರಮ ಗಣಿಗಾರಿಕೆಗೆ. ಇಲ್ಲಿರೋ ಅಕ್ರಮ ಕ್ರಷರ್ ನಡೆಸೋದಕ್ಕೆ ಇವರು ಬೆಂಬಲವಾಗಿದಾರೆಂದರು. ಆ ಪುಣ್ಯಾತ್ಮ (ಸುಧಾಕರ್) ಇದಾನಲ್ಲ. ಅಕ್ರಮಗಳಲ್ಲಿ ಮುಳುಗಿ ತೆಳುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಕಟ್ಟಿಅಂದರೆ ಅದನ್ನ ಪೇರೆಸಂದ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೆಡಿಕಲ್ ಕಾಲೇಜ್ ನಿರ್ಮಾಣದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆಂದರು.
ಚಿಕ್ಕಬಳ್ಳಾಪುರದಲ್ಲಿ ನಾನು ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ಕಟ್ಟಿಅಂತ ಡಿಸಿಗೆ ಸೂಚನೆ ಕೊಟ್ಟೆ. ಆದರೆ ಅದರ ಸ್ಥಳವನ್ನೇ ಬದಲಿಸಿದರು. ಯಾಂಕಂದ್ರೆ ಅಲ್ಲಿ ಅವರ ಕುಟುಂಬದ ಆಸ್ತಿ ಇದೆ. ಇವರ ಆಸ್ತಿ ಬೆಲೆ ಏರಿಸಿಕೊಳ್ಳಲು ಅಲ್ಲಿ ಮೆಡಿಕಲ್ ಕಾಲೇಜು ಇಟ್ಟುಕೊಂಡಿದ್ದಾರೆಂದು ಹೆಸರೇಳದೆ ಸಚಿವ ಸುಧಾಕರ್‌ಗೆ ಕುಮಾರಸ್ವಾಮಿ ಚಾಟಿ ಬೀಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಜಿಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕುಂಟಹಳ್ಳಿ ಮುನಿಯಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಕೆ.ಸಿ.ರಾಜಾಕಾಂತ್, ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಸೇರಿದಂತೆ ಅನೇಕ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು.
ಇವರೇನು ಟಾಟಾ, ಬಿರ್ಲಾನಾ.?: ನನಗೆ ಇವರ ಎಲ್ಲಾ ಹಣೆಬರಹ ಗೊತ್ತು. ಚುನಾವಣೆ ಸಂದರ್ಭದಲ್ಲಿ ಪಾಪದ ಹಣ ತಂದು ಕೊಡುತ್ತಾರೆ. ಎಲ್ಲಿಂದ ಬಂತು ಇವರಿಗೆ ಹಣ. ಇವರೇನು ಟಾಟಾ, ಬಿರ್ಲಾನಾ.? ಬಚ್ಚೇಗೌಡರ ಬಳಿ ಹಣ ಇಲ್ಲದೆ ಇರಬಹುದು. ಅವರ ತಂದೆ ಕಾಲದಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ತಾಯಿ, ತಂದೆಯರಿಗೆ ಮನವಿ ಮಾಡುತ್ತೇನೆ. ಪಾಪದ ಹಣಕ್ಕೆ ಕೈ ಒಡ್ಡಬೇಡಿ. ಅದರಿಂದ ನಿಮ್ಮ ಕಷ್ಟಪರಿಹಾರ ಆಗಲ್ಲ. ಇವರು ಕೊಡುವ ಕುಕ್ಕರ್ ಆಸೆಗೆ ಮತ ಕೊಡಬೇಡಿ. ನಿಮ್ಮ ಮತ ಪಡೆದು ರಾಜ್ಯವನ್ನ ಲೂಟಿ ಮಾಡುತ್ತಿದ್ದಾರೆಂದು ಪರೋಕ್ಷವಾಗಿ ಸಚಿವ ಸುಧಾಕರ್ ವಿರುದ್ದ ಮಾಜಿ ಸಿಎಂ ಎಚ್.ಡಿ,ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
JDS Pancharatna Rathayatra: ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಸಿಎಂ: ಹೆಚ್.ಡಿ.ಕುಮಾರಸ್ವಾಮಿ
ಮಂಚೇನಹಳ್ಳಿ, ಪೆರೇಸಂದ್ರದಲ್ಲಿ ದಳಪತಿಗಳ ಶಕ್ತಿ ಪ್ರದರ್ಶನ: ಗೌರಿಬಿದನೂರು ಮೂಲಕ ಪಂಚರತ್ನ ರಥ ಮಂಚೇನಹಳ್ಳಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿದ್ದ ಸೇರಿದ್ದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಗೆ ಭರ್ಜರಿ ಸ್ವಾಗತ ಕೋರುವ ಮೂಲಕ ಮಂಚೇನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ಶಕ್ತಿ ಪ್ರದರ್ಶಿಸಿದರು. ಈ ವೇಳೆ ಬೃಹತ್ ಸೇಬಿನ ಹಾರಗಳನ್ನು ಕುಮಾರಸ್ವಾಮಿಗೆ ಕ್ರೈನ್ ಮೂಲಕ ಹಾಕಿ ಚಿಕ್ಕಬಳ್ಳಾಪುರಕ್ಕೆ ಬರಮಾಡಿಕೊಂಡರು. ಬಳಿಕ ಸಚಿವ ಡಾ.ಕೆ.ಸುಧಾಕರ್ ತವರು ಪೆರೇಸಂದ್ರದಲ್ಲಿ ಕೂಡ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಸಂಚರಿಸಿದ ವೇಳೆ ಕಾರ್ಯಕರ್ತರು ಪಾಲ್ಗೊಂಡು ಕುಮಾರಸ್ವಾಮಿ, ಬಚ್ಚೇಗೌಡ ಪರ ಜೈಕಾರಗಳನ್ನು ಕೂಗಿದರು.