ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಭ್ರಷ್ಟಾಚಾರ, ದಲಿತರ ಹಣ ಲೂಟಿ, ಮುಸ್ಲಿಮರ ಓಲೈಕೆ ವಿರೋಧಿಸಿ ರಾಜ್ಯ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಮೈಸೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮಹೇಂದ್ರ ದೇವನೂರು
ಮೈಸೂರು (ಏ.08): ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಭ್ರಷ್ಟಾಚಾರ, ದಲಿತರ ಹಣ ಲೂಟಿ, ಮುಸ್ಲಿಮರ ಓಲೈಕೆ ವಿರೋಧಿಸಿ ರಾಜ್ಯ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಮೈಸೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಬೆಲೆ ಏರಿಕೆ ನೀತಿಯ ವಿರುದ್ಧ ಸಮರ ಸಾರಿದ ಬಿಜೆಪಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜನಾಕ್ರೋಶ ಯಾತ್ರೆ ನಿಮಿತ್ತ ನಗರಕ್ಕೆ ಆಗಮಿಸಿದ ಪಕ್ಷದ ನಾಯಕರು, ಚಾಮುಂಡಿಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ನಂತರ ಬೈಕ್, ಕಾರುಗಳ ಮೂಲಕ ನೆಹರು ವೃತ್ತ ತಲುಪಿದರು. ನಂತರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಗಾರಿ ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ನೆಹರು ವೃತ್ತದಿಂದ ಆರಂಭವಾದ ಯಾತ್ರೆ, ಅಶೋಕ ರಸ್ತೆ ಮಾರ್ಗವಾಗಿ ಪುರಭವನದ ಎದುರಿಗೆ ಆಗಮಿಸಿತು. ಈ ವೇಳೆ ಪಕ್ಷದ ನಾಯಕರು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ದಲಿತರ ಬಗೆಗಿನ ಸರ್ಕಾರದ ನೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬಳಿಕ, ಪುರಭವನದ ಎದುರು ತೆರೆದ ವಾಹನದಲ್ಲಿ ನಿಂತು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಹೊರಗೆ ಮಲಗುತ್ತಿರುವ ಬಿಜೆಪಿ ನಾಯಕರು: ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಿದ್ದರಾಮಯ್ಯ ಕಳ್ಳ, ಡಿ.ಕೆ.ಶಿವಕುಮಾರ್ ಮಳ್ಳ, ರಾಹುಲ್ ಗಾಂಧಿ ದೊಡ್ಡ ಕಳ್ಳ ಎಂದು ಜರಿದರೆ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಮೈಸೂರು ಅರಸರು ಮತ್ತು ದೇವರಾಜ ಅರಸು ಅವರ ಪಾದದ ಧೂಳಿಗೂ ನೀವು ಸಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ಬಂದಿದೆ. ಇದರ ಪ್ರಕಾರ ತಮಗೆ ಬೇಕಾದ ಸ್ಥಳದಲ್ಲಿ ಎಷ್ಟು ಬೇಕಾದರೂ ಸೈಟನ್ನು ಕಳ್ಳತನ ಮಾಡಿ ಪಡೆಯಬಹುದು. ಬಳಿಕ, ರಾತ್ರೋ ರಾತ್ರಿ ಅದನ್ನು ಹಿಂದಿರುಗಿಸಿದರೆ ಅದು ಕಳ್ಳತನ ಆಗುವುದಿಲ್ಲ, ಕೇಸೂ ಆಗುವುದಿಲ್ಲ. ಇದು ಕಾಂಗ್ರೆಸ್ ನ ಹೊಸ ಕಾನೂನು ಎಂದು ಮೂದಲಿಸಿದರು. ರಾಜ್ಯ ಸರ್ಕಾರದ ಆರ್ಥಿಕ ದುಃಸ್ಥಿತಿ ಕುರಿತು ಕಿಡಿ ಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರು ಅಭಿವೃದ್ಧಿಗೆ ಅನುದಾನ ಇಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೂ, ರಾಜ್ಯ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಜರಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಪಕ್ಷದ ನಾಯಕರಾದ ಡಿ.ವಿ.ಸದಾನಂದಗೌಡ, ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ, ಬಿ.ಶ್ರೀರಾಮುಲು, ಮುರುಗೇಶ್ ನಿರಾಣಿ, ಸಿ.ಟಿ.ರವಿ, ಟಿ.ಎಸ್. ಶ್ರೀವತ್ಸ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ ಸಿಂಹ, ಅರವಿಂದ ಬೆಲ್ಲದ್, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕೇಸರಿಮಯವಾದ ಮೈಸೂರು: ಜನಾಕ್ರೋಶ ಯಾತ್ರೆ ಹಿನ್ನೆಲೆಯಲ್ಲಿ ನಗರದ ಅಶೋಕ ರಸ್ತೆ, ದೊಡ್ಡಗಡಿಯಾರ ವೃತ್ತ, ನೆಹರು ವೃತ್ತ ಮತ್ತು ಪುರಭವನದ ಆವರಣದ ರಸ್ತೆ ಕೇಸರಿಮಯವಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಿಜೆಪಿಯ ಬಾವುಟಗಳು ರಾರಾಜಿಸಿದವು. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಕ್ಷದ ಪರ, ಪಕ್ಷದ ನಾಯಕರ ಪರ ಘೋಷಣೆ ಕೂಗಿದರು.
ಕಾಂಗ್ರೆಸ್‌ನವರು ಜನಪರ ಆಡಳಿತ ಕೊಡುವ ಬದಲಿಗೆ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಸಿದ್ದರಾಮಯ್ಯ ಎಷ್ಟು ಬಜೆಟ್ ಮಂಡಿಸಿದ್ದಾರೆ ಎನ್ನುವುದು ಮುಖ್ಯವಲ್ಲ. ನಾಡಿನ ಆರೂವರೆ ಕೋಟಿ ಜನರಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನ ಶುರು ಮಾಡಿರುವ ರಾಜ್ಯ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಹಿಂದೂ ಹುಲಿಯನ್ನು ಬೋನಿಗೆ ಹಾಕಿದ ಅಪ್ಪ ಮಗ: ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮರಣ ಪ್ರಮಾಣ ಪತ್ರ ಶುಲ್ಕ ಸೇರಿದಂತೆ ಒಟ್ಟು 48 ವಸ್ತುಗಳ ಬೆಲೆ ಹೆಚ್ಚಿಸಲಾಗಿದೆ. ಇತಿಹಾಸದಲ್ಲಿ ಇದೊಂದು ದಾಖಲೆ. ಈ ಸರ್ಕಾರ ಕೆಳಗಿಳಿಸಲು ಈ ಯಾತ್ರೆ.
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ