ಬಹುದಿನಗಳಿಂದ ಕೇಳಿಬರುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುವ ನಿರೀಕ್ಷೆಯಿದ್ದು, ಇನ್ನೊಂದು ವಾರದೊಪ್ಪತ್ತಿನಲ್ಲಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸುವ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ.
ಬೆಂಗಳೂರು (ಏ.08): ಬಹುದಿನಗಳಿಂದ ಕೇಳಿಬರುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುವ ನಿರೀಕ್ಷೆಯಿದ್ದು, ಇನ್ನೊಂದು ವಾರದೊಪ್ಪತ್ತಿನಲ್ಲಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸುವ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ. ಇದೇ ತಿಂಗಳ 12ರಂದು ಅಥವಾ 14ರ ಅಂಬೇಡ್ಕರ್ ಜಯಂತಿ ಬಳಿಕ ಚೌಹಾಣ್ ಆಗಮಿಸುವ ಸಂಭವವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆಯಾದರೂ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸಿ ರಾಜ್ಯಾಧ್ಯಕ್ಷ ಚುನಾವಣೆ ಕುರಿತು, ಯಾರನ್ನು ನೇಮಕ ಮಾಡಿದರೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಪಕ್ಷದ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆ ಅಭಿಪ್ರಾಯವನ್ನು ಕ್ರೋಢೀಕರಿಸಿ ದೆಹಲಿಗೆ ವಾಪಸಾಗಲಿದ್ದಾರೆ.ದೆಹಲಿಗೆ ತೆರಳಿದ ಬಳಿಕ ಚೌಹಾಣ್ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆ ತಮ್ಮ ವರದಿಯನ್ನು ವರಿಷ್ಠರಿಗೆ ನೀಡಲಿದ್ದಾರೆ. ಬಳಿಕ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಇದುವರೆಗಿನ ಮಾಹಿತಿ ಅನುಸಾರ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚಾಗಿದೆ.
ಆದರೆ, ಚೌಹಾಣ್ ಅವರು ಆಗಮಿಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಚಿತ್ರಣ ಬದಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವುದು ಬೇಡ ಎಂಬ ಪಟ್ಟು ಹಿಡಿದಿದ್ದ ಶಾಸಕ ಯತ್ನಾಳ್ ಬಣ ಸದ್ಯಕ್ಕೆ ಅತಂತ್ರ ಸ್ಥಿತಿಯಲ್ಲಿದೆ. ಖುದ್ದು ಯತ್ನಾಳ್ ಅವರನ್ನೇ ಪಕ್ಷದಿಂದ ಉಚ್ಚಾಟಿಸಿರುವುದರಿಂದ ಅವರ ಬಣದ ಇತರ ಮುಖಂಡರು ಗೊಂದಲಕ್ಕೆ ಸಿಲುಕಿದ್ದಾರೆ. ಆದರೂ ಅವರ ಬಣದ ಮುಖಂಡರ ಅಭಿಪ್ರಾಯದಲ್ಲಿ ಬದಲಾವಣೆ ಏನೂ ಆಗಿಲ್ಲ.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಈ ನಡುವೆ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ವಿಜಯೇಂದ್ರ ಅವರೂ ಏಕಾಏಕಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಯತ್ನಾಳ್ ಬಣದ ಆರೋಪಗಳನ್ನು ಹುಸಿಗೊಳಿಸಬೇಕು ಎಂಬ ಉದ್ದೇಶದಿಂದ ಅತ್ಯುತ್ಸಾಹದಿಂದಲೇ ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟ ಆರಂಭಿಸಿದ್ದಾರೆ. ಹೀಗಾಗಿ, ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಗದ ಸನ್ನಿವೇಶ ನಿರ್ಮಾಣವಾಗಿದೆ. ಆದರೆ, ಸದ್ಯಕ್ಕಂತೂ ವಿಜಯೇಂದ್ರ ಅವರ ಬಲ ತುಸು ಹೆಚ್ಚೇ ಇದೆ.