ಯಾವ ಸಮಯಕ್ಕೆ ಯಾವ ನಾಯಕರು ಉತ್ತಮವೋ ಅವರು ಇರುತ್ತಾರೆ. ಪ್ರಸ್ತುತ ವಿಜಯೇಂದ್ರ ಸೂಕ್ತ ಎನಿಸಿದೆ. ವರಿಷ್ಠರಿಗೆ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಔಚಿತ್ಯ ಎನಿಸಿದೆ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ತೀರ್ಮಾನ ಆಗಲಿದೆ: ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್
ಬೆಂಗಳೂರು(ಡಿ.08): ಪಕ್ಷದ ಪರಿಷ್ಠರಿಗೆ ಬಿ.ವೈ.ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಈಗಿನ ಔಚಿತ್ಯ ಎನಿಸಿದೆ. ಹೀಗ ಅವರನ್ನೇ ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಹೇಳಿದ್ದಾರೆ.
ಈ ಮೂಲಕ ವಿಜಯೇಂದ್ರ ನೇಮಕವನ್ನು ಪ್ರಶ್ನಿಸುತ್ತಿರುವ ಶಾಸಕ ಯತ್ನಾಳ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಶನಿವಾರ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸಮಯಕ್ಕೆ ಯಾವ ನಾಯಕರು ಉತ್ತಮವೋ ಅವರು ಇರುತ್ತಾರೆ. ಪ್ರಸ್ತುತ ವಿಜಯೇಂದ್ರ ಸೂಕ್ತ ಎನಿಸಿದೆ. ವರಿಷ್ಠರಿಗೆ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಔಚಿತ್ಯ ಎನಿಸಿದೆ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ತೀರ್ಮಾನ ಆಗಲಿದೆ ಎಂದು ಹೇಳಿದರು.
ಸ್ವಪಕ್ಷೀಯರ ವಿರುದ್ಧ ಯತ್ನಾಳ್ ಟೀಕೆ ನಿಲ್ಲಿಸಬೇಕು: ರೇಣುಕಾಚಾರ್ಯ
ಬಿಜೆಪಿಯಲ್ಲಿ ತಂಡ ಇಲ್ಲ: ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಎಂಬ ತಂಡಗಳು ಇಲ್ಲ. ಆದರೆ, ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದರು. ನಮ್ಮದು ಶಿಸ್ತಿನ ಪಕ್ಷ. ಕರ್ನಾಟಕದಲ್ಲಿ 71 ಲಕ್ಷ ಕಾರ್ಯಕರ್ತರು ಇದ್ದಾರೆ. ಎಲ್ಲರ ವ್ಯಕ್ತಿತ್ವ ಬೇರೆ ಇರುತ್ತದೆ. ಯಾರ ವ್ಯಕ್ತಿತ್ವ ಸರಿ ಎಂಬುದಕ್ಕೆ ಕಾಲವೇ ಸರಿಯಾದ ಉತ್ತರ ನೀಡಲಿದೆ ಎಂದು ಯತ್ನಾಳ್ ಬಹಿರಂಗ ಹೇಳಿಕೆಗಳ ಕುರಿತ ಪ್ರಶ್ನೆಗೆ ರಾಧಾ ಮೋಹನ್ ದಾಸ್ ಉತ್ತರಿಸಿದರು.
ಯತ್ನಾಳ್ ಉತ್ತರ ನೋಡಿ ಕ್ರಮ ರಾಜ್ಯದಲ್ಲಿ ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಎಂಬ ತಂಡಗಳು ಇಲ್ಲ. ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ.
ಇನ್ನು ಜಾರಕಿಹೊಳಿ ವೈಲೆಂಟ್, ನಾನು ಸೈಲೆಂಟ್: ಯತ್ನಾಳ್
ಹುಬ್ಬಳ್ಳಿ: ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಯನ್ನು ಪರ್ಮನೆಂಟ್ ಆಗಿ ನಿಲ್ಲಿಸಿ ಎಂದು ದೆಹಲಿ ನಾಯಕರಿಂದ ಸೂಚನೆ ಪಡೆದು ಬಂದಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟ ಚುಕ್ಕಾಣಿಯನ್ನು ಹಸ್ತಾಂತರ ಮಾಡುವ ಸುಳಿವು ನೀಡಿದ್ದಾರೆ. 'ಇನ್ಮೇಲೆ ನಾನು ಸೈಲೆಂಟ್ ಆಗುತ್ತೇನೆ, ಶಾಸಕ ರಮೇಶ್ ಜಾರಕಿಹೊಳಿ ವೈಲೆಂಟ್ ಆಗುತ್ತಾರೆ' ಎಂದು ಅವರು ತಿಳಿಸಿದ್ದರು.
ಜೊತೆಗೆ ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಕೇಂದ್ರ ಬರೆಯುತ್ತೇವೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೀತಿವಿ, ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲವೇ ಅಲ್ಲ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವುದೇ ನಮ್ಮ ಟಾರ್ಗೆಟ್. ನಾವು ಅಧಿಕಾರಕ್ಕೆ ಬಂದಾಗ ಪ್ರಾಮಾಣಿಕರನ್ನು ಸಿಎಂ ಮಾಡುವ ಗುರಿಯಿದೆ. ಭ್ರಷ್ಟರು ಸಿಎಂ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದು ಸರ್ಕಾರದ ಎಲ್ಲ ನಿರ್ಣಯ ಕಿತ್ತು ಹಾಕ್ತೇವೆ: ಯತ್ನಾಳ್
ದೆಹಲಿಯಿಂದ ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ ಯತ್ನಾಳ್, ಸುದ್ದಿಗಾರರ ಜೊತೆ ಮಾತನಾಡಿದರು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಒಪ್ಪಲ್ಲ ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, 'ಇನ್ನು ಮುಂದೆ ನಾನು ಸೈಲೆಂಟ್ ಆಗಿ ಇರುತ್ತೇನೆ. ರಮೇಶ್ ಜಾರಕಿಹೊಳಿಯವರು ವೈಲೆಂಟ್ ಆಗುತ್ತಾರೆ' ಎಂದರು. ನಮ್ಮ ಮುಂದಿನ ಹೋರಾಟ ಕುರಿತು ನಾವು ಪ್ಲಾನ್ ಮಾಡಿದ್ದೇವೆ. ಅದರಂತೆ ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. ಮುಂದೆ ನಾವು ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ ಎಂದರು.
ನನ್ನ ಮೇಲೆ ಪ್ರೀತಿ ಇದೆ:
ನನ್ನ ಮೇಲೆ ಹೈಕಮಾಂಡ್ ಗೆ ಯಾವಾಗಲೂ ಪ್ರೀತಿ ಇದ್ದೇ ಇದೆ. ಯತ್ನಾಳ್ ನನ್ನು ಮುಗಿಸುತ್ತೇವೆ ಎನ್ನುವವರಿಂದ ಏನೂ ಆಗಲ್ಲ.ಯಾರಿಂದಲೂ ನನಗೆ ಏನೂ ಮಾಡಲು ಆಗುವುದಿಲ್ಲ. ಯಾರಾರು ಉತ್ತರ ಕೊಡುತ್ತಾರೋ ನೋಡೋಣ. ಅವರೆಲ್ಲರಿಗೂ ಉತ್ತರ ಕೊಡಲು ನಾನು ಸಿದ್ದ. ನನಗೆ ಅಂಜಿಕೆಯಿಲ್ಲ, ಅಳುಕಿಲ್ಲ ಎಂದು ಹೇಳಿದರು.