
ಬೆಂಗಳೂರು : ಮುಖ್ಯಮಂತ್ರಿ ಹುದ್ದೆ ಅಷ್ಟು ಸುಲಭವಾಗಿ ಸಿಗುವಂಥದ್ದಲ್ಲ. ಪಂಚಾಯತಿ ಚೇರ್ಮನ್‌ಗಳೇ ಅಧಿಕಾರ ಬಿಟ್ಟುಕೊಡಲ್ಲ. ಹೀಗಾಗಿ, ಮಾತು ಕೊಟ್ಟಿದ್ದಾರೆ ಅಂತ ಅಧಿಕಾರ ಬಿಟ್ಟುಕೊಡಿ ಎನ್ನಲು ಆಗುವುದಿಲ್ಲ. ನನ್ನ ಅಣ್ಣನಿಗೆ ಹಣೆಬರಹದಲ್ಲಿ ಬರೆದಿದ್ದರೆ ಅವರು ಮುಖ್ಯಮಂತ್ರಿಯಾಗುತ್ತಾರೆ. ಆದರೆ, ರಾಜಕಾರಣದಲ್ಲಿ ಅಧಿಕಾರ ಹಾಗೂ ತಾಳ್ಮೆ ಎರಡೂ ಶಾಶ್ವತವಲ್ಲ!
ಹೀಗಂತ ಮಾಜಿ ಸಂಸದ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮಾರ್ಮಿಕವಾಗಿ ನುಡಿದಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರು ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಮ್ಮ ಅಣ್ಣ (ಡಿ.ಕೆ.ಶಿವಕುಮಾರ್)ನ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ. ಎಲ್ಲರೂ ಅದರಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ರಾಜಕೀಯದಲ್ಲಿ ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ. ದೇವರ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡಬೇಕು. ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ ಎಂದೂ ಹೇಳಿದರು.
ಜತೆಗೆ, ನಮ್ಮ ಗುರಿ 2028ರ ಚುನಾವಣೆ. ಅದರಿಂದ ಮತ್ತು ಶಾಸಕರು, ಕಾರ್ಯಕರ್ತರ ಹಿತದೃಷ್ಟಿಯಿಂದ ತಾಳ್ಮೆಯಿಂದಲೇ ಇರಬೇಕಾಗುತ್ತದೆ, ತಾಳ್ಮೆಯಿಂದಲೇ ನೋಡಬೇಕು. ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದು, ಮೊದಲು ಅವರಲ್ಲಿ ಶಿಸ್ತು ಇರಬೇಕು. ಹೀಗಾಗಿ ಶಿಸ್ತು ಪಾಲಿಸುತ್ತಿದ್ದಾರೆ ಎಂದರು.
ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂಬ ಪ್ರಶ್ನೆ ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಅನಿವಾರ್ಯವಾಗಿ ವಿಧಾನಮಂಡಲ ವಿಶೇಷ ಅಧಿವೇಶನ ಕರೆಯಲಾಗಿದೆ. ಇದೆಲ್ಲಾ ಆದ ಬಳಿಕ ಏನು ತೀರ್ಮಾನವಾಗುತ್ತದೋ ಕಾದು ನೋಡಬೇಕು. ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ. ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಭೇಟಿಯಾದಾಗ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಪಂಚಾಯತಿ ಅಧ್ಯಕ್ಷರೇ ತಮ್ಮ ಸ್ಥಾನ ಬಿಡಲು ಬಯಸುವುದಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುತ್ತೇನೆ, ಮಾರ್ಚ್ ಅಂತ್ಯವಾಗಲಿ ಎಂದೆಲ್ಲ ನೆಪ ಹೇಳುತ್ತಾರೆ. ಆದರೆ, ಅಧ್ಯಕ್ಷ ಸ್ಥಾನ ಪಡೆಯುವಾಗ ನನಗೆ ಮೂರು ದಿನ ಅಧಿಕಾರ ಸಾಕು, ಮಾಜಿ ಎಂದು ಕರೆಸಿಕೊಳ್ಳುವುದಷ್ಟೇ ಸಾಕು ಎಂದು ಹೇಳಿರುತ್ತಾರೆ. ಈ ರೀತಿ ಆದಾಗ ಏನೂ ಮಾಡಲಾಗದು. ರಾಜಕಾರಣದಲ್ಲಿ ನಂಬಿಕೆ ಮುಖ್ಯ. ಡಿ.ಕೆ.ಶಿವಕುಮಾರ್ ಚಿಕ್ಕ ವಯಸ್ಸಿನಿಂದಲೂ ಇವೆಲ್ಲವನ್ನು ನೋಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಮಾರ್ಚ್ ಅಂತ್ಯಕ್ಕೆ ಬದಲಾವಣೆ ಆಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಹೇಳುತ್ತಿಲ್ಲ. ಹಳ್ಳಿಗಳಲ್ಲಿ ಹೇಳುವ ನೆಪ ಹೇಳಿದ್ದೇನೆ. ನಾನು ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿಲ್ಲ. ನಮ್ಮ ಊರಿನಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ಹೇಳಿದೆ ಅಷ್ಟೇ. ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ ಎಂದರು.
ನಾಯಕತ್ವ ಬದಲಾವಣೆಯಿಂದ ಒಂದು ವರ್ಗ ಕಾಂಗ್ರೆಸ್ ಪಕ್ಷದಿಂದ ವಿಮುಖವಾಗುತ್ತದೆ ಎಂದು ಬಿಂಬಿಸಲಾಗುತ್ತಿದೆಯಲ್ವಾ ಎಂಬ ಪ್ರಶ್ನೆಗೆ, ಎಲ್ಲಾ ವರ್ಗಗಳ ಮತಗಳೂ ಕಾಂಗ್ರೆಸ್‌ಗೆ ಬೇಕು. ಕೇವಲ ಒಬ್ಬರನ್ನು ಓಲೈಸಿಕೊಳ್ಳುವುದಲ್ಲ. ಜಾತಿ ಮೇಲೆ ನಡೆಯುವ ರಾಜಕಾರಣ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಕುಂಠಿತ ಮಾಡಲಿದೆ ಎಂದರು.
ಜತೆಗೆ, ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು, ವ್ಯಕ್ತಿಗಲ್ಲ. ಕೆಲವರು ವ್ಯಕ್ತಿ ನಿಷ್ಠರಾಗಿದ್ದಾರೆ. ಅವರು ಅಧಿಕಾರಕ್ಕಾಗಿಯೇ ಇರುತ್ತಾರೆ. ಪಕ್ಷ ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗಲೂ ಎಲ್ಲ ರೀತಿಯ ನೋವು, ಕಷ್ಟಗಳನ್ನು ಡಿ.ಕೆ. ಶಿವಕುಮಾರ್ ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ತಾಳ್ಮೆಯಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ನಿರ್ಧರಿಸುತ್ತಾರೆ:
ಎಲ್ಲವನ್ನೂ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಲಾಗಿದೆಯೇ ಎಂಬುದಕ್ಕೆ ಉತ್ತರಿಸಿ, ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರು. ಎಲ್ಲ ದೃಷ್ಟಿಕೋನದಲ್ಲೂ ಚಿಂತನೆ ನಡೆಸುತ್ತಾರೆ. ದೇಶದ ರಾಜಕೀಯ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡುತ್ತಾರೆ. ನಾನು ಕೇವಲ ಶಿವಕುಮಾರ್ ಅವರ ದೃಷ್ಟಿಕೋನದಿಂದ ನೋಡಬಹುದು. ಆದರೆ, ರಾಹುಲ್ ಗಾಂಧಿ ದೇಶದ ಎಲ್ಲ ಬೆಳವಣಿಗೆಗಳ ದೃಷ್ಟಿಯಿಂದ ನೋಡಬೇಕು. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ತೀರ್ಮಾನ ಮಾಡಬೇಕು ಎಂದು ನಿರ್ಧರಿಸಿದ್ದಾರೆ ಎಂದರು.
ಜ.29ಕ್ಕೆ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜ.31ರವರೆಗೆ ವಿಶೇಷ ಅಧಿವೇಶನವಿದೆ. ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ನಾಲ್ಕು ದಿನ ಅವಕಾಶ ನೀಡಿದ್ದು, ಕೊನೆಯ ಮೂರು ದಿನ ಮನರೇಗಾ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಾಗಿದೆ. ಬಜೆಟ್ ತಯಾರಿಯೂ ನಡೆಯುತ್ತಿದೆ. ಇದು ಮುಗಿದ ನಂತರ ಇತರ ವಿಚಾರ ಎಂದು ಹೇಳಿದರು.
ರಾಜ್ಯ ಪೊಲೀಸ್ ಘನತೆ ಮುಖ್ಯ:
ಡಿಜಿಪಿ ರಾಮಚಂದ್ರರಾವ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ರಾಮಚಂದ್ರರಾವ್ ಅವರು ಗೃಹ ಸಚಿವರಿಗೆ ಆತ್ಮೀಯರು ಎಂದು ಹೇಳುತ್ತಾರೆ. ನನಗೂ ಅನೇಕರು ಆತ್ಮೀಯರಿರುತ್ತಾರೆ. ಆದರೆ, ಇದೆಲ್ಲ ಆತ್ಮೀಯತೆಯ ವಿಚಾರವಲ್ಲ, ಶಿಸ್ತಿನ ವಿಚಾರ. ಗೃಹ ಸಚಿವರು ಈಗಾಗಲೇ ತೀರ್ಮಾನ ಕೈಗೊಂಡಿರಬೇಕು. ಶಿಸ್ತು ಮತ್ತು ಕರ್ನಾಟಕ ಪೊಲೀಸ್ ಘನತೆ ಬಹಳ ಮುಖ್ಯ. ಅದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಚುನಾವಣೆಗೆ ಬ್ಯಾಲೆಟ್ ಪೇಪರ್ ಅವಶ್ಯಕತೆ ಇಲ್ಲ: ಡಿ.ಕೆ.ಸುರೇಶ್
ಮತಪತ್ರ ಅವಶ್ಯಕತೆಯಿಲ್ಲ: ಜಿಬಿಎ ನಗರ ಪಾಲಿಕೆ ಚುನಾವಣೆಯಲ್ಲಿ ಮತಪತ್ರ ಬಳಕೆ ಕುರಿತಾಗಿ ಪಕ್ಷದ ನಾಯಕರ ಹೇಳಿಕೆಗೆ ತದ್ವಿರುದ್ಧವಾಗಿ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ಮತಪತ್ರ ಬಳಕೆಯ ಅವಶ್ಯಕತೆಯಿಲ್ಲ ಎಂದೆನಿಸುತ್ತದೆ. ರಾಜ್ಯ ಚುನಾವಣಾ ಆಯೊಗ ಈ ಚುನಾವಣೆ ನಡೆಸುತ್ತಿರುವುದರಿಂದ ಮತಗಳನ್ನು ತಿರುಚಲು ಆಗುವುದಿಲ್ಲ. ನಾವು ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದು, ಎಲ್ಲವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.