ಸಂಸತ್‌ ಕ್ಷೇತ್ರ ಕಡಿತ ವಿರುದ್ಧ ದಕ್ಷಿಣ ಸಿಎಂಗಳ ಸಭೆ : ಸಿದ್ದರಾಮಯ್ಯ

Kannadaprabha News   | Kannada Prabha
Published : Jan 21, 2026, 04:31 AM IST
CM Siddaramaiah

ಸಾರಾಂಶ

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅದರಿಂದ ದಕ್ಷಿಣ ಭಾರತ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವ ಜತೆಗೆ ರಾಜಕೀಯ ಧ್ವನಿ ದುರ್ಬಲವಾಗಲಿದೆ. ಹೀಗಾಗಿ ಮರು ವಿಂಗಡಣೆಗೆ ಪ್ರಬಲ ವಿರೋಧ ವ್ಯಕ್ತಪಡಿಸಲು ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಸಚಿವರ ಸಭೆ

ಬೆಂಗಳೂರು : ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅದರಿಂದ ದಕ್ಷಿಣ ಭಾರತ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವ ಜತೆಗೆ ರಾಜಕೀಯ ಧ್ವನಿ ದುರ್ಬಲವಾಗಲಿದೆ. ಹೀಗಾಗಿ ಮರು ವಿಂಗಡಣೆಗೆ ಪ್ರಬಲ ವಿರೋಧ ವ್ಯಕ್ತಪಡಿಸಲು ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಸಚಿವರ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮಾಜವಾದಿ ಅಧ್ಯಯನ ಕೇಂದ್ರ ಮಂಗಳವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣ ಭಾರತ ಸಮಾಜವಾದಿ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳು ದೇಶದ ಕಾನೂನಿನಂತೆ ನಡೆದುಕೊಂಡಿವೆ. ಜನಸಂಖ್ಯೆ ನಿಯಂತ್ರಣ ಸೇರಿ ಎಲ್ಲ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿವೆ. ಹೀಗಾಗಿ ಇಲ್ಲಿ ಜನಸಂಖ್ಯೆ ಕಡಿಮೆಯಿದೆ. ಆದರೆ, ಉತ್ತರ ಪ್ರದೇಶ, ಬಿಹಾರ ಸೇರಿ ಇನ್ನಿತರ ಉತ್ತರ ಭಾರತದ ರಾಜ್ಯಗಳು ಅದನ್ನು ಪಾಲಿಸದೆ ಜನಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಿದರೆ ಉತ್ತರ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳು ಹೆಚ್ಚಲಿದ್ದು, ದಕ್ಷಿಣ ಭಾರತ ರಾಜ್ಯಗಳಲ್ಲಿ ಸಂಖ್ಯೆ ಕುಸಿಯಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯ ಕೂಗು ಕಸಿಯಲಿದೆ:

ಕೇಂದ್ರ ಸರ್ಕಾರದ ನಿರ್ಧಾರ ದಕ್ಷಿಣ ಭಾರತ ರಾಜ್ಯಗಳ ರಾಜಕೀಯ ಕೂಗು ಕಸಿಯಲಿದೆ. ಅಧ್ಯಯನಗಳ ಪ್ರಕಾರ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಸೇರಿ ಇನ್ನಿತರ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಲಿದೆ. ಈ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳು ಹೆಚ್ಚುವ ಸಾಧ್ಯತೆಗಳಿವೆ. ಅದೇ ದಕ್ಷಿಣ ರಾಜ್ಯಗಳ ಸ್ಥಾನ ಕುಸಿಯಲಿದೆ. ಇದು ನಮ್ಮ ರಾಜಕೀಯ ಧ್ವನಿ ಅಡಗಿಸುವ ಕೆಲಸ. ಹೀಗಾಗಿ ಕೇಂದ್ರದ ನಿರ್ಧಾರವನ್ನು ಪ್ರಬಲ ವಿರೋಧಿಸಲು ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿ, ಸಚಿವರ ಸಭೆ ನಡೆಸುವ ಉದ್ದೇಶವಿದೆ ಎಂದರು.

ಕ್ಷೇತ್ರಗಳ ಮರುವಿಂಗಡಣೆ ಜನಸಂಖ್ಯೆ ಆಧಾರಿತವಾಗಿ ಮಾಡುವುದು ತಪ್ಪಲ್ಲ. ಅದನ್ನು ದೇಶದ ಸಾಮಾಜಿಕ ಮತ್ತು ಪ್ರಾದೇಶಿಕ ವಾಸ್ತವಗಳಿಗೆ ಹೇಗೆ ಹೊಂದಿಸಲಾಗುತ್ತದೆ ಎಂಬುದು ಮುಖ್ಯ. ಕೇಂದ್ರ ಹೇಳುವ ರೀತಿಯಲ್ಲಿ ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣ ರಾಜ್ಯಗಳ ರಾಜಕೀಯ ಕೂಗು ದುರ್ಬಲವಾಗಲಿದೆ. ಕೇಂದ್ರ ಸರ್ಕಾರದ ನೀತಿಗಳ ಮೇಲೆ ನಮ್ಮ ಪ್ರಭಾವ ಕುಗ್ಗುಲಿದೆ. ಸಂಪನ್ಮೂಲ ಹಂಚಿಕೆಯಲ್ಲಿ ಅನ್ಯಾಯ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.

ಮೂರು ದೊಡ್ಡ ಸಂಕಷ್ಟ ಹೇರಿದ ಬಿಜೆಪಿ:

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶದ ಮೇಲೆ ಮೂರು ದೊಡ್ಡ ಸಂಕಷ್ಟ ಹೇರಿವೆ. ಸಂವಿಧಾನಾತ್ಮಕ ಮೌಲ್ಯಗಳ ನಾಶ, ವಿಂಗಡಣೆ ಮತ್ತು ಹಣಕಾಸು ವ್ಯವಸ್ಥೆಯ ದಮನ ಮಾಡಿವೆ. ಕರ್ನಾಟಕ ಹಿಂದುಳಿದಿಲ್ಲ. ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ರು.ಗಳನ್ನು ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡಲಾಗುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕ ಶೇ. 5ರಷ್ಟನ್ನು ಹೊಂದಿದ್ದರೂ, ದೇಶದ ಜಿಡಿಪಿಗೆ ಶೇ. 8.4ರಷ್ಟು ಕೊಡುಗೆ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿ ರುಪಾಯಿಗೆ 13 ಪೈಸೆಯನ್ನು ಮಾತ್ರ ರಾಜ್ಯಕ್ಕೆ ವಾಪಸ್‌ ನೀಡುತ್ತಿದೆ. ಬರಗಾಲ, ಪ್ರವಾಹ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ. ಸುದರ್ಶನ ರೆಡ್ಡಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌. ಪಾಟೀಲ್‌, ಕೇರಳದ ಮಾಜಿ ಹಣಕಾಸು ಸಚಿವ ಐಸಾಕ್‌ ಥಾಮಸ್‌, ತೆಲಂಗಾಣ ಶಾಸಕ ವಂಶಿಕೃಷ್ಣ, ಮಾಜಿ ಸಂಸದರಾದ ಥಂಪನ್‌ ಥಾಮಸ್‌, ಎಲ್‌. ಹನುಮಂತಯ್ಯ ಇತರರಿದ್ದರು.

- ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಕೇಂದ್ರ ಸರ್ಕಾರದ ಸಿದ್ಧತೆ

- ಕೇಂದ್ರದ ಕಾನೂನಿನಂತೆ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತಗಳಿಗೆ ಇದರಿಂದ ಅನ್ಯಾಯ

- ಕಾನೂನು ಪಾಲಿಸದ ಉತ್ತರಪ್ರದೇಶ, ಬಿಹಾರ ಸೇರಿ ಉತ್ತರ ಭಾರತದ ರಾಜ್ಯಗಳ ಕೇಂದ್ರ ಹೆಚ್ಚಳ

- ಇದು ನಮ್ಮ ಧ್ವನಿ ಅಡಗಿಸುವ ಕೆಲಸ. ಇದನ್ನು ವಿರೋಧಿಸಲು ದಕ್ಷಿಣ ಭಾರತ ಸಿಎಂಗಳ ಸಭೆ: ಸಿದ್ದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಂಗ್ಲಾ ನುಸುಳುಕೋರರ ಬಗ್ಗೆ ಸುಳ್ಳು ಮಾಹಿತಿ, ಪ್ರಧಾನಿ ಮೋದಿ, ಅಜಿತ್ ದೋವಲ್ ವಿರುದ್ಧ ಸಂತೋಷ್ ಲಾಡ್ ಕಿಡಿ
ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್