ದಲಿತರ ಬಗ್ಗೆ ನಿಜವಾಗಿ ಬಿಜೆಪಿ ಸದಸ್ಯರಿಗೆ ಕಾಳಜಿ ಇದ್ದಿದ್ದರೇ ಕೇಂದ್ರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕರ್ನಾಟಕದ ಎಸ್‌ಸಿಪಿ ಟಿಎಸ್‌ಪಿ ಕಾಯ್ದೆ ಜಾರಿಗೆ ತರಲು ಒತ್ತಾಯಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ವಿಧಾನ ಪರಿಷತ್ (ಡಿ.15): ಸಾಮಾಜಿಕ ನ್ಯಾಯ ಕುರಿತು ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ, ಈ ವಿಷಯದಲ್ಲಿ ಎಂದೂ ಕೂಡಾ ನಮ್ಮ ಬದ್ಧತೆ ಬದಲಾಗುವುದಿಲ್ಲ. ದಲಿತರ ಬಗ್ಗೆ ನಿಜವಾಗಿ ಬಿಜೆಪಿ ಸದಸ್ಯರಿಗೆ ಕಾಳಜಿ ಇದ್ದಿದ್ದರೇ ಕೇಂದ್ರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕರ್ನಾಟಕದ ಎಸ್‌ಸಿಪಿ ಟಿಎಸ್‌ಪಿ ಕಾಯ್ದೆ ಜಾರಿಗೆ ತರಲು ಒತ್ತಾಯಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು. ಗುರುವಾರ 2023-24ನೇ ಸಾಲಿನ ₹3542.10 ಕೋಟಿಗಳ ಪೂರಕ ಅಂದಾಜುಗಳ ಪ್ರಸ್ತಾವನೆ ವೇಳೆ ಬಿಜೆಪಿ ಸದಸ್ಯರು, ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ದಲಿತರಿಗೆ ಅನ್ಯಾಯ ಮಾಡಲಾಗಿದೆ.
ಸಣ್ಣ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಹಣ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ವೆಚ್ಚ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಅವಕಾಶ ವಂಚಿತರು, ಅಕ್ಷರ ವಂಚಿತ ಜನರಿಗೆ ಶಕ್ತಿ ತುಂಬಬೇಕು ಎಂಬ ಕಾರಣದಿಂದ ಕಾಯ್ದೆ ಜಾರಿಗೆ ತಂದಿದ್ದೇವೆ. ಈ ಮೊದಲು ಪರಿಶಿಷ್ಟರಿಗೆ ಬಜೆಟ್‌ನಲ್ಲಿ ₹6-7 ಸಾವಿರ ಕೋಟಿ ವೆಚ್ಚವಾಗುತ್ತಿತ್ತು. ಕಾಯ್ದೆ ಜಾರಿಗೆ ತಂದ ನಂತರ ಬಜೆಟ್ ಗಾತ್ರಕ್ಕೆ ತಕ್ಕಂತೆ ಹಚ್ಚಾಗುತ್ತಾ ಬಂದಿದೆ.
ಪ್ರಧಾನಿ ಮೋದಿ ಎಂದು ಜಾತಿ, ಧರ್ಮ ನೋಡಿಲ್ಲ: ಭಗವಂತ ಖೂಬಾ
ಈ ವರ್ಷ ₹34 ಸಾವಿರ ಕೋಟಿ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು. ಬಿಜೆಪಿ ಆಡಳಿತ ಅವಧಿಯಲ್ಲಿ ಬಜೆಟ್ ಗಾತ್ರ ಹೆಚ್ಚಾದರೂ ಪರಿಶಿಷ್ಟರಿಗೆ ಮೀಸಲಿಡಬೇಕಾದ ಹಣದ ಪ್ರಮಾಣ ಕಡಿಮೆಯಾಯಿತು. ಈ ವಿಷಯ ಅಸತ್ಯವಾಗಿದ್ದರೆ ಬಿಜೆಪಿ ಸದಸ್ಯರು ಅದನ್ನು ಸಾಬೀತುಪಡಿಸಬೇಕು ಎಂದರು. ಕಾಂಗ್ರೆಸ್ ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ. ಆದರೆ, ನೀವು ಸಂವಿಧಾನ ಬದಲಾವಣೆ ಮಾಡಲು ಹೊರಟವರು, ನಿಮ್ಮ ಸಂಸದರು ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲು ಎಂದಿದ್ದರು ಎಂದು ಚುಚ್ಚಿದರು.
ಗದ್ದಲದ ವಾತಾವರಣ: ಮುಖ್ಯಮಂತ್ರಿಗಳ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಅನೇಕ ಸದಸ್ಯರು ಎದ್ದು ನಿಂತು ಮಾತನಾಡಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಸಹ ಪ್ರತಿವಾದಿಸತೊಡಗಿದರು. ಹೀಗಾಗಿ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡದಂತೆ ತಾಕೀತು ಮಾಡಿದರೂ ಕೇಳಲಿಲ್ಲ. ಕೊನೆಗೆ ಯಾರ ಮಾತನ್ನು ಕಡತದಲ್ಲಿ ದಾಖಲು ಮಾಡದಂತೆ ಆದೇಶಿಸಿದರುನಂತರ ಮಾತು ಮುಂದುವರೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೊಂದು ಪೂರಕ ಬಜೆಟ್ ಪ್ರಸ್ತಾವನೆ,ತುರ್ತು ನಿಧಿಯಿಂದ ಬಳಸಲಾಗಿರುವ ಹಣಕ್ಕೆ ಒಪ್ಪಿಗೆ ಪಡೆಯಲು ಮಂಡಿಸಲಾಗಿದೆ. ಬಜೆಟ್ ಗಾತ್ರದಲ್ಲಿ ಅಂದಾಜು ಶೇ. ೧ರಷ್ಟು ಹಣವನ್ನು ಬಜೆಟ್‌ನಲ್ಲಿ ಹೇಳದೇ ಇರುವ ಉದ್ದೇಶಕ್ಕೆ ಬಳಸಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿಲ್ಲ, ಊಟಕ್ಕೆ ಹೋಗಿದ್ದೆ: ಶಾಸಕ ಎಸ್.ಟಿ.ಸೋಮಶೇಖರ್
ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವ ಪರಿಶಿಷ್ಟರ ಹಣ ಬೇರೆಯವರಿಗೂ ಬಳಕೆಯಾಗಿರಬಹುದು. ತಾವು ಯಾವುದನ್ನೂ ಮುಚ್ಚಿಡುವುದಿಲ್ಲ. ಶೇ. ೯೯ ರಷ್ಟು ಸತ್ಯ ಹೇಳುತ್ತೇನೆ. ಗ್ಯಾರಂಟಿ ಯೋಜನೆಯಿಂದ ಜನರು ಖುಷಿಯಾಗಿದ್ದಾರೆ, ಆದರೆ ಬಿಜೆಪಿಗರಿಗೆ ಮಾತ್ರ ಹೊಟ್ಟೆ ಉರಿಯಾಗಿದೆ ಎಂದು ವ್ಯಂಗ್ಯವಾಡಿದರು.ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಡಿ.ಎಸ್. ಅರುಣ್, ಎನ್. ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಹಣಮಂತ ನಿರಾಣಿ, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಟಿ.ಎ. ಶರವಣ ಮುಂತಾದವರು, ಸಣ್ಣ ಪುಟ್ಟ ಸಮುದಾಯಕ್ಕೆ ಸೇರಿದ ಅಭಿವೃದ್ಧಿ ನಿಗಮಗಳಿಗೆ ಹಣ ನೀಡಿಲ್ಲ.ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ನಿರಾಶ್ರಿತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಹೆಚ್ಚಿನ ಹಣ ನೀಡಬೇಕಾಗಿತ್ತು ಎಂದು ಆಗ್ರಹಿಸಿದರು.