ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದ ಔತಣಕೂಟಕ್ಕೆ ಮಾತ್ರ ಹೋಗಿದ್ದೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಸುವರ್ಣಸೌಧ (ಡಿ.15): ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದ ಔತಣಕೂಟಕ್ಕೆ ಮಾತ್ರ ಹೋಗಿದ್ದೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಔತಣಕೂಟದಲ್ಲಿ ಭಾಗಿಯಾಗಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, 'ನಿನ್ನೆ ರಾತ್ರಿ 8ರಿಂದ 10ಗಂಟೆವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜೊತೆಗಿದ್ದೆ. ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದೆ. ಶಿವಕುಮಾರ್ ಕೂಡ ನನಗೆ ಊಟಕ್ಕೆ ಆಹ್ವಾನ ಕೊಟ್ಟಿದ್ದರು. ಹಾಗಾಗಿ ರಾತ್ರಿ 11ಕ್ಕೆಹೋಗಿ ಸುಭ ಕೋರಿ ಬಂದೆ' ಎಂದರು. 'ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ. ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡವಿದೆ. ಬಿಜೆಪಿಗೆ ಯಾವುದೇ ತರಹದ ಮುಜುಗುರವಾಗುವ ಕೆಲಸ ನಾನು ಮಾಡಲ್ಲ ಎಂದರು.
ಉತ್ತರ ಕರ್ನಾಟಕ ಬಗ್ಗೆ ಚರ್ಚಿಸೋಕೆ ಬಿಜೆಪಿ-ಜೆಡಿಎಸ್ ಆಸಕ್ತಿ ಇಲ್ಲ: ಸಚಿವ ಚಲುವರಾಯಸ್ವಾಮಿ
ಕಾಂಗ್ರೆಸ್ ಔತಣಕೂಟದಲ್ಲಿ ಎಸ್‌ಟಿಎಸ್, ಹೆಬ್ಬಾರ್ ಭಾಗಿ: ಕುತೂಹಲಕಾರಿ ಬೆಳವಣಿಗೆಯಲ್ಲಿ ಬುಧವಾರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಔತಣಕೂಟದಲ್ಲಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಪಾಲ್ಗೊಂಡಿದ್ದರು. ಕುಂದಾ ನಗರಿಯ ಹೊಟೇಲ್‌ವೊಂದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಸಭೆಯ ನಂತರ ಔತಣಕೂಟ ಆಯೋಜಿಸಲಾಗಿದ್ದು, ಕೂಟದಲ್ಲಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಭಾಗಿಯಾಗಿದ್ದರು.ಈಗಾಗಲೇ ಬಿಜೆಪಿಯಿಂದ ವಿಮುಖರಾಗಿರುವ ಈ ಶಾಸಕರು ಕಾಂಗ್ರೆಸ್ ವರಿಷ್ಠರಿಂದ ಸೂಚನೆ ಬಂದ ಕೂಡಲೇ ಪಕ್ಷ ತೊರೆಯಲಿದ್ದಾರೆ ಎನ್ನಲಾಗಿದ್ದು, ಈ ಮಾತಿಗೆ ಈ ಬೆಳವಣಿಗೆ ಇಂಬು ನೀಡಿದೆ.
ಕೆಲ ಬಿಜೆಪಿ ರಾಷ್ಟ್ರೀಯ ನಾಯಕರಿಂದ ನನ್ನ ಟಾರ್ಗೆಟ್: ಬಿಜೆಪಿಯ ಕೆಲ ರಾಷ್ಟ್ರೀಯ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಬಿಡಿ ಎಂದು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ನಾನು ಅಸಮಾಧಾನ ಸ್ಫೋಟಿಸುವುದು ಅನಿವಾರ್ಯವಾಯಿತು. ಆ ರಾಷ್ಟ್ರೀಯ ನಾಯಕರು ಯಾರೆಂಬುದನ್ನು ಮುಂದೆ ಹೇಳುತ್ತೇನೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ನಾನು ಏಕವಚನದಲ್ಲಿ ಮಾತನಾಡಿಸಿಕೊಳ್ಳುವ ರೀತಿಯಲ್ಲಿ ಬೆಳೆದಿಲ್ಲ. ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧೆ ಮಾಡಿದ್ದೇನೆ. ನಾಲ್ಕು ಬಾರಿ ಜನ ಗೆಲ್ಲಿಸಿದರೆ, 2 ಬಾರಿ ಸೋಲಿಸಿದ್ದಾರೆ.
ಸಂಸತ್ ಭವನದಲ್ಲಿನ ಭಯೋತ್ಪಾದಕ ರೀತಿಯ ಕೃತ್ಯ ಆಘಾತಕಾರಿ: ಪ್ರಮೋದ್ ಮುತಾಲಿಕ್
ಯಾರೋ ಲೀಡರ್ ಬಂದು ಏಕವಚನದಲ್ಲಿ ಹೋಗಿ ಅಂದ್ರೆ ಆಗಲ್ಲ. ಅವರಪ್ಪನ ರೀತಿ ಮಾತನಾಡುವ ಶಕ್ತಿಯನ್ನು ದೇವರು ನನಗೂ ಕೊಟ್ಟಿದ್ದಾನೆ ಎಂದು ವಾಗ್ದಾಳಿ ನಡೆಸಿದರು. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ವಿಧಾನಸಭಾ ಚುನಾವಣೆ ಪೂರ್ವದಿಂದಲೂ ಹೇಳುತ್ತಿದ್ದಾರೆ. ಈಗಲೂ ಅದೇ ರಾಗ ಹಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗುವುದರಿಂದ ಅವರಿಗೆ ಏನು ಲಾಭ ಇದೆ ಎಂಬುದು ನನಗೆ ಗೊತ್ತಿಲ್ಲ. ಆಗಲೂ, ಈಗಲೂ ನಾನು ಬಿಜೆಪಿಯಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.