ದಾವಣಗೆರೆ: ಪಾಲಿಕೆಯಲ್ಲಿ ಬಿಜೆಪಿದು ಗೂಂಡಾ ಸಂಸ್ಕೃತಿ?

By Kannadaprabha News  |  First Published Oct 23, 2022, 9:06 AM IST
  • ಪಾಲಿಕೆಯಲ್ಲಿ ಬಿಜೆಪಿದು ಗೂಂಡಾ ಸಂಸ್ಕೃತಿ
  • ತಾಕತ್ತು, ದಮ್‌ ಇದ್ರೆ ಪ್ರತಿಭಟಿಸಿ ಎನ್ನುವುದು ಯಾವ ಸಂಸ್ಕೃತಿ ಎಂದು ಮೇಯರ್‌ಗೆ ಮಂಜುನಾಥ ಗಡಿಗುಡಾಳ್‌ ಪ್ರಶ್ನೆ

ದಾವಣಗೆರೆ (ಅ.23) : ಒಳ ಚರಂಡಿ ಸಮಸ್ಯೆ ಉಲ್ಬಣಿಸಿದ್ದರಿಂದ ಎಸ್‌ಒಜಿ ಕಾಲೋನಿಗೆ ಬಂದಿದ್ದ ಮೇಯರ್‌ ಜಯಮ್ಮ ಗೋಪಿನಾಯ್ಕ ನಿಮಗೆ ತಾಕತ್ತಿದ್ದರೆ, ಧಮ್‌ ಇದ್ದರೆ ರಸ್ತೆ ಬಂದ್‌ ಮಾಡಿ, ಪ್ರತಿಭಟನೆ ಮಾಡುವಂತೆ ಸವಾಲು ಹಾಕಿದ್ದಾರೆ ಹೊರತು ನಾವ್ಯಾರೂ ಮೇಯರ್‌ಗೆ ಕೂಡಿ ಹಾಕಿಲ್ಲ, ಗೂಂಡಾ ವರ್ತನೆ ತೋರಿಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಜಿ.ಎಸ್‌.ಮಂ ಜುನಾಥ ಗಡಿಗುಡಾಳ್‌, ಕಾಂಗ್ರೆಸ್‌ ಸದಸ್ಯ ಪಾಮೇನಹಳ್ಳಿ ನಾಗರಾಜ ತಿರುಗೇಟು ನೀಡಿದ್ದಾರೆ.

ದಾವಣಗೆರೆ: ಹೊಲಿಗೆ ಕೆಲಸಗಾರರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ, ಡಿಸಿಗೆ ಮನವಿ

Tap to resize

Latest Videos

ನಗರದ ಎಸ್‌ಒಜಿ ಕಾಲೋನಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಕಾಂಗ್ರೆಸ್ಸಿನವರು ಅಲ್ಲ, ಬಿಜೆಪಿಯವರೇ ಗೂಂಡಾವರ್ತನೆ ತೋರುತ್ತಿದ್ದಾರೆ. ದಲಿತರು, ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿಗೆ ಅಪಾರ ಗೌರವ ಇದೆ. ಮೇಯರ್‌ ಜಯಮ್ಮ ಗೋಪಿನಾಯ್ಕ, ಮಾಜಿ ಮೇಯರ್‌ ಎಸ್‌.ಟಿ.ವೀರೇಶ ಇತರರು ಕಾಂಗ್ರೆಸ್ಸಿನ ವಿರುದ್ಧ ಮಾಡಿರುವ ಆರೋಪವೆಲ್ಲಾ ಸುಳ್ಳು ಎಂದರು.

ಎಸ್‌ಒಜಿ ಕಾಲೋನಿಯಲ್ಲಿ ಯುಜಿಡಿ ಸಮಸ್ಯೆ ತೀವ್ರವಾಗಿದ್ದರಿಂದ ಜೋರು ಮಳೆಯಾದರೆ ಮನೆಗಳಿಗೆ ತ್ಯಾಜ್ಯ ನೀರು, ಮಳೆ ನೀರು ನುಗ್ಗಿ ಜೀವನ ನಡೆಸಲು ಇಲ್ಲಿನ ಜನರಿಗೆ ಕಷ್ಟವಾಗುತ್ತದೆ. ಈ ಕಾರಣಕ್ಕೆ ಸಮಸ್ಯೆ ಸರಿಪಡಿಸುವಂತೆ ಮೇಯರ್‌, ಆಯುಕ್ತರು, ಎಂಜಿನಿಯರ್‌ಗೆ ಕಾಲೋನಿಗೆ ಭೇಟಿ ನೀಡುವಂತೆ ಮನವಿ ಮಾಡಿದ್ದೆವು. ಆದರೆ,

ಯಾರೊಬ್ಬರೂ ಬಾರದ್ದರಿಂದ ಮೇಯರ್‌ಗೆ ಫೋನ್‌ ಮಾಡಿ ಕರೆದವು. ಮೇಯರ್‌ ಜಯಮ್ಮ ಭೇಟಿ ನೀಡಿದ್ದ ವೇಳೆ ಸ್ಥಳೀಯ ನಿವಾಸಿಗಳೇ ಸಮಸ್ಯೆಯನ್ನು ಹೇಳಿಕೊಂಡರು. ಆಗ ಮೇಯರ್‌ ಜಯಮ್ಮ ನಿಮಗೆ ತಾಕತ್ತಿದ್ದರೆ, ಧಮ್‌ ಇದ್ದರೆ ರಸ್ತೆ ಬಂದ್‌ ಮಾಡಿ, ಪ್ರತಿಭಟಿಸುವಂತೆ ಸವಾಲು ಹಾಕಿದ್ದರು ಎಂದು ಅವರು ದೂರಿದರು.

ಮೇಯರ್‌ಗೆ ನಾವು ಕೂಡಿ ಹಾಕಿದ್ದೇವೆಂಬುದೆಲ್ಲಾ ಶುದ್ಧ ಸುಳ್ಳು. ಎಸ್‌ಒಜಿ ಕಾಲನಿಯಲ್ಲಿ ದಲಿತರೇ ಹೆಚ್ಚಾಗಿದ್ದು, 31ನೇ ವಾರ್ಡ್‌ನಲ್ಲಿ ದಲಿತ ಮಹಿಳೆಯಾದ ಮೇಯರ್‌ ಜಯಮ್ಮ ವಿರುದ್ಧ ಗೂಂಡಾವರ್ತನೆ ಮಾಡುವುದಾದರೂ ಹೇಗೆ ಸಾಧ್ಯ? ಕಾಂಗ್ರೆಸ್‌ ಸದಸ್ಯರ ಬಗ್ಗೆ ಮೇಯರ್‌, ಮಾಜಿ ಮೇಯರ್‌ ಅಪಪ್ರಚಾರ ಮಾಡುತ್ತಿದ್ದಾರೆ. ಕುಣಿಯಲು ಬಾರದವರು ನೆಲ ಡೊಂಕು ಎಂದಂತೆ ಬಿಜೆಪಿ ಮೇಯರ್‌, ಮಾಜಿ ಮೇಯರ್‌ ವರ್ತನೆ ಇದೆ. ಬಿಜೆಪಿಯವರಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ದಲಿತರು, ದಲಿತ ಮೇಯರ್‌, ಮಹಿಳೆ ಅಂದೆಲ್ಲಾ ಎಳೆದು ತರುತ್ತಿದ್ದಾರಷ್ಟೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು 22 ಜನ ಇದ್ದ ಕಾಂಗ್ರೆಸ್‌ ಸದಸ್ಯರ ಮನೆಗಳಿಗೆ ರಾತ್ರೋರಾತ್ರಿ ಹೋಗಿ, ಬೆದರಿಸಿದ್ದಲ್ಲದೇ ಕೆಲವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ. ಹೀಗೆ ಗೂಂಡಾವರ್ತನೆ ತೋರುವುದೇನಿದ್ದರೂ ಬಿಜೆಪಿಯವರ ಸಂಸ್ಕೃತಿಯಾಗಿದೆ. ಕಾಂಗ್ರೆಸ್ಸಿನ ಬಗ್ಗೆ ಮೇಯರ್‌, ಮಾಜಿ ಮೇಯರ್‌ ಮಿಥ್ಯಾರೋಪ ಮಾಡುವುದು ಸರಿಯಲ್ಲ. ಜನರ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುವುದೂ ಗೂಂಡಾವರ್ತನೆಯೇ? ತಾಕತ್ತಿದ್ದರೆ, ದಮ್‌ ಇದ್ದರೆ ಪ್ರತಿಭಟನೆ ಮಾಡುವಂತೆ ಸವಾಲು ಹಾಕುವುದು ಮೇಯರ್‌ ಸ್ಥಾನದಲ್ಲಿ ಇದ್ದವರಿಗೆ ಶೋಭೆ ತರುವುದೇ ಎಂದು ಅವರು ಪ್ರಶ್ನಿಸಿದರು.

ದಾವಣಗೆರೆ: ಪಾಲಿಕೆಯ ಇತಿಹಾಸದಲ್ಲೇ ಇಂತಹ ಕೆಟ್ಟ ಆಡಳಿತ ನೋಡಿಲ್ಲ, ಗಡಿಗುಡಾಳ್ ಮಂಜುನಾಥ್

ಎಸ್‌ಒಜಿ ಕಾಲೋನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಲ್ಲೇಶಪ್ಪ ಮಾತನಾಡಿ, ಒಳ ಚರಂಡಿ ಸೇರಿದಂತೆ ಮೂಲ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಪಾಲಿಕೆ ಬಿಜೆಪಿ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದೆ. ಮಳೆಗಾಲದಲ್ಲಿ ಮಳೆ ನೀರಿನ ಜೊತೆ ಚರಂಡಿ, ಒಳ ಚರಂಡಿ ತ್ಯಾಜ್ಯ ನೀರು ಮನೆಗಳಿಗೆ ನುಗ್ಗುತ್ತದೆ. ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ಈ ಬಗ್ಗೆ ಪ್ರಶ್ನಿಸಿದರೆ, ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಜನರು ಸಮಸ್ಯೆ ಪರಿಹರಿಸುವ ಕೆಲಸವನ್ನು ಮೇಯರ್‌, ಆಯುಕ್ತರು, ಅಧಿಕಾರಿಗಳು ಮೊದಲು ಮಾಡಲಿ ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯರಾದ ಕಲ್ಲಳ್ಳಿ ನಾಗರಾಜ, ಮುಖಂಡರಾದ ಇಟ್ಟಿಗುಡಿ ಮಂಜುನಾಥ, ಗಣೇಶ ಹುಲ್ಮನಿ, ಕಲ್ಲೇಶ, ಜಗದೀಶ, ವೆಂಕಟೇಶ, ಕೆ.ಎಲ್‌.ಹರೀಶ ಬಸಾಪುರ, ಸಂಗೀತಾ, ರವಿ, ಮಂಜುನಾಥ ಇತರರು ಇದ್ದರು.

click me!