ಸುಮಲತಾ ಆಪ್ತರ ಪರ್ಸೆಂಟೇಜ್‌ ಚರ್ಚೆ ವಿಡಿಯೋ ನನ್ನ ಬಳಿ ಇದೆ: ಶಾಸಕ ರವೀಂದ್ರ

By Kannadaprabha NewsFirst Published Oct 23, 2022, 8:07 AM IST
Highlights

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಷಯವಾಗಿ ದಿಲೀಪ್‌ ಬಿಲ್ಡ್‌ ಕಾನ್‌ ಅಧಿಕಾರಿ ಜೊತೆ ಸಂಸದೆ ಸುಮಲತಾ ಅಂಬರೀಶ್‌ ಆಪ್ತರು ಪರ್ಸೆಂಟೇಜ್‌ ವಿಚಾರವಾಗಿ ನಡೆಸಿರುವ ಮಾತುಕತೆಯ ವೀಡಿಯೋ ನನ್ನ ಬಳಿ ಇದೆ. ಅದನ್ನು ಜನತಾ ನ್ಯಾಯಾಲಯದ ಮುಂದೆ ಬಯಲು ಮಾಡುತ್ತೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಂಡ್ಯ/ಶ್ರೀರಂಗಪಟ್ಟಣ (ಅ.23): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಷಯವಾಗಿ ದಿಲೀಪ್‌ ಬಿಲ್ಡ್‌ ಕಾನ್‌ ಅಧಿಕಾರಿ ಜೊತೆ ಸಂಸದೆ ಸುಮಲತಾ ಅಂಬರೀಶ್‌ ಆಪ್ತರು ಪರ್ಸೆಂಟೇಜ್‌ ವಿಚಾರವಾಗಿ ನಡೆಸಿರುವ ಮಾತುಕತೆಯ ವೀಡಿಯೋ ನನ್ನ ಬಳಿ ಇದೆ. ಅದನ್ನು ಜನತಾ ನ್ಯಾಯಾಲಯದ ಮುಂದೆ ಬಯಲು ಮಾಡುತ್ತೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ.

ತಾಲೂಕಿನ ಬಸ್ತೀಪುರ ಗ್ರಾಮದಲ್ಲಿ 21 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಶಾಲಾ ಕೊಠಡಿ ಹಾಗೂ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಏಟ್ರಿಯಾ ಹೋಟೆಲ್‌ನಲ್ಲಿ ನಡೆದ ಯಾವ ವೀಡಿಯೋ ಬೇಕೋ ಅದನ್ನು ರವೀಂದ್ರ ಶ್ರೀಕಂಠಯ್ಯ ಅವರಿಗೆ ಪೆನ್‌ಡ್ರೈವ್‌ನಲ್ಲಿ ಹಾಕಿಕೊಡುತ್ತೇನೆ ಎಂಬ ಸುಮಲತಾ ಅಂಬರೀಶ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನ ಏಟ್ರಿಯಾ ಹೋಟೆಲ್‌ನಲ್ಲಿ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಸಂಸದರು ಕಳುಹಿಸಿದ ಟೀಮ್‌ ಎಷ್ಟು ಪರ್ಸೆಂಟೇಜ್‌ ಕೇಳಿದರು, ಎಷ್ಟುಕೋಟಿ ಹಣಕ್ಕೆ ಬೇಡಿಕೆ ಇಟ್ಟರು ಎಂಬ ವೀಡಿಯೋ ದಾಖಲೆಗಳು ನನ್ನ ಬಳಿ ಇವೆ. ಅದನ್ನು ಚುನಾವಣಾ ಸಮಯಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದರು.

Latest Videos

ಅಧಿವೇಶನದಲ್ಲಿ ಯಾವ ಶಾಸಕರು ಏನು ಮಾತನಾಡಿದ್ದಾರೆ?: ದಳಪತಿಗಳ ವಿರುದ್ಧ ಹರಿಹಾಯ್ದ ಸುಮಲತಾ

ಈಗ ಬಿಡುಗಡೆ ಮಾಡೋಲ್ಲ: ನನ್ನ ಬಳಿ ವೀಡಿಯೋ, ಆಡಿಯೋ ದಾಖಲೆಗಳಿರುವುದರಿಂದಲೇ ಮಾತನಾಡುತ್ತಿದ್ದೇನೆ. ಇಲ್ಲದಿದ್ದರೆ ಮಾತನಾಡುವುದಕ್ಕೆ ಸಾಧ್ಯವೇ. ಈಗ ಅದನ್ನು ಬಿಡುಗಡೆ ಮಾಡುವುದಕ್ಕೆ ಸಕಾಲವಲ್ಲ. ರಾಜ್ಯದಲ್ಲಿ ನಡೆದ ಎಷ್ಟೋ ನ್ಯೂನತೆಗಳ ಬಗ್ಗೆ ಬಹಿರಂಗ ಚರ್ಚೆಯಾಗಿ, ವಿಡಿಯೋಗಳು ಬಿಡುಗಡೆಯಾದರೂ ಯಾರೊಬ್ಬರಿಗೂ ಶಿಕ್ಷೆಯಾಗಲಿಲ್ಲ. ಹಾಗಾಗಿ ನಾನು ಜನತಾ ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದರು. ನಾನು ಸಂಸದೆ ಸುಮಲತಾ ಏಟ್ರಿಯಾ ಹೋಟೆಲ್‌ನಲ್ಲಿ ಪಾರ್ಟಿ ಮಾಡುವ, ಅವರ ವೈಯಕ್ತಿಕ ಜೀವನದ ವೀಡಿಯೋವನ್ನು ಕೇಳುವುದಿಲ್ಲ. ದಿಲೀಪ್‌ ಬಿಲ್ಡ್‌ಕಾನ್‌ ಅಧಿಕಾರಿಗಳ ಜೊತೆ ಸಂಸದರ ಆಪ್ತರು ಏಟ್ರಿಯಾ ಹೊಟೇಲ್‌ನಲ್ಲಿ ನಡೆಸಿರುವ ಮಾತುಕತೆ ವಿವರದ ಬಗ್ಗೆ ವೀಡಿಯೋ-ಆಡಿಯೋ ನೀಡುವಂತೆ ನನ್ನ ಒತ್ತಾಯವಿದೆ. ಅದನ್ನು ಅವರು ಪೆನ್‌ಡ್ರೈವ್‌ನಲ್ಲಿ ಹಾಕಿಕೊಟ್ಟರೆ ಕ್ಷೇತ್ರದ ಜನರೆಲ್ಲರಿಗೂ ತೋರಿಸಿಕೊಂಡು ಬರುತ್ತೇವೆ. ಆಗ ಇವರ ನಿಜಬಣ್ಣ ತಿಳಿಯುತ್ತದೆ ಎಂದರು.

ಸಂಸದರಿಂದ ಸರ್ಟಿಫಿಕೇಟ್‌ ಬೇಕಿಲ್ಲ: ನಾನೂ ಸೇರಿದಂತೆ ಜಿಲ್ಲೆಯ ಇತರೆ ಶಾಸಕರು ಮತದಾರರ ಸೇವಕರಾಗಿದ್ದು, ಸಾರ್ವಜನಿಕ ಬದುಕಿನಲ್ಲಿ ರೈತರು, ಜನಸಾಮಾನ್ಯರ ಸಂಕಷ್ಟಗಳನ್ನು ಅರಿತಿದ್ದೇವೆ. ಜನರೊಟ್ಟಿಗೆ ನಾವು ಬಾಳ್ವೆ ಮಾಡುತ್ತಿದ್ದು, ನಮಗೆ ಬೆಂಗಳೂರಿನಲ್ಲಿ ವಾಸ್ತವ್ಯ ಇರುವ ಸಂಸದೆ ಸುಮಲತಾ ಅವರ ಸರ್ಟಿಫಿಕೇಟ್‌ ಅಗತ್ಯವಿಲ್ಲ ಎಂದು ಟೀಕಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಇವರಿಗೆ ತಕ್ಕ ಸರ್ಟಿಫಿಕೇಟ್‌ ಕೊಡಲು ಕಾಯುತ್ತಿದ್ದಾರೆ. ಮೂರೂವರೆ ವರ್ಷದ ಅಧಿಕಾರವಧಿಯಲ್ಲಿ ಜಿಲ್ಲೆಗೆ ಸಂಸದರ ಕೊಡುಗೆ ಏನೆಂದು ಪ್ರಶ್ನಿಸಿದ ಅವರು, ತಮ್ಮ ಅಧಿಕಾರ ಬಳಸಿ ಶ್ರೀರಂಗಪಟ್ಟಣದಲ್ಲಿ ರೈಲು ನಿಲುಗಡೆ ಮಾಡಿಸಲಾಗದ ಸಂಸದರು, ತಮ್ಮ ಅಭಿವೃದ್ಧಿ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.

ನಮ್ಮ ಕುಟುಂಬ 1952 ರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ತಾತ ಚುಂಚೇಗೌಡರು ಮೈಸೂರು ಮಹಾರಾಜರಿಂದ ಹಲವು ಜನಪಯೋಗಿ ಕಾರ್ಯಗಳಿಗೆ ಚಾಲನೆ ಕೊಡಿಸಿದ್ದರು. ಅಂದಿನಿಂದ ಇಂದಿನವರೆಗೆ ನಾವು ಸೋಲು-ಗೆಲುವಿನೊಂದಿಗೆ ಕ್ಷೇತ್ರದ ಜನಸಾಮಾನ್ಯರ ಕಷ್ಟ-ಸುಖಗಳಿಗೆ ಪಾಲುದಾರರಾಗಿದ್ದೇವೆ. ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹಿಂದಿನ ಶಾಸಕರ ಅವಧಿಯ ಅಭಿವೃದ್ಧಿಯ ಬಗ್ಗೆ ಕ್ಷೇತ್ರದ ಜನತೆ ತುಲನೆ ಮಾಡುತ್ತಿದ್ದು, ಚುನಾವಣಾ ತೀರ್ಪಿಗೆ ನಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದು ತಿಳಿಸಿದರು.  

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು, ಬೆಳಗೊಳ ಗ್ರಾ.ಪಂ ಉಪಾಧ್ಯಕ್ಷ ರಾರ‍ಯಂಬೋ ರವಿ, ಗ್ರಾ.ಪಂ ಸದಸ್ಯರಾದ ಮಹಾಲಕ್ಷ್ಮೀ ಮಹಾದೇವ, ರೇಣುಕಾ ಶಿವಣ್ಣ, ಗಣೇಶ್‌, ಇ.ಸಿ.ಒ ನಂಜುಂಡಾಚಾರಿ, ಸಿ.ಆರ್‌.ಪಿ ಮಹೇಶ್‌, ಮುಖ್ಯ ಶಿಕ್ಷಕಿ ಚಂದ್ರಕಲಾ, ದೊಡ್ಡ ಯಜಮನರಾದ ಹಾಲಪ್ಪ, ಚಿಕ್ಕ ಯಜಮಾನ ನಾಗರಾಜು, ನಂದೀಶ್‌, ಆನಂದ, ಶಿವು, ಜಗದೀಶ್‌, ಬೈರೇಶ್‌ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ

ನಿಖಿಲ್‌ ರಾಜ್ಯ ರಾಜಕಾರಣಕ್ಕೆ ಬರಲಿ: 2023ರ ವಿಧಾನಸಭಾ ಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವಂತೆ ವರಿಷ್ಠರಲ್ಲಿ ಎಲ್ಲಾ ಶಾಸಕರು ಸೇರಿ ಒತ್ತಾಯಿಸಿದ್ದೇವೆ. ಕುಮಾರಸ್ವಾಮಿ ಅವರಿಗೆ ರೈತರು ಮತ್ತು ಬಡವರ ಪರ ಕಾಳಜಿ ಇರುವಂತೆ ನಿಖಿಲ್‌ ಕುಮಾರಸ್ವಾಮಿಗೂ ಕಾಳಜಿ ಇದೆ. ಆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣಕ್ಕೆ ಆಗಮಿಸುವಂತೆ ಒತ್ತಾಯ ಮಾಡಲಾಗಿದೆ. ಅಗತ್ಯ ಬಿದ್ದರೆ ನಿಖಿಲ್‌ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

click me!