ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆ ಭಾನುವಾರ ರಾಯಚೂರಿನಿಂದ ಗುಡೆಬೆಲ್ಲೂರು ಮೂಲಕ ತೆಲಂಗಾಣ ಪ್ರವೇಶಿಸಲಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಅ.23): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆ ಭಾನುವಾರ ರಾಯಚೂರಿನಿಂದ ಗುಡೆಬೆಲ್ಲೂರು ಮೂಲಕ ತೆಲಂಗಾಣ ಪ್ರವೇಶಿಸಲಿದೆ. ಇದರೊಂದಿಗೆ ಸೆ.30ರಂದು ರಾಜ್ಯ ಪ್ರವೇಶಿಸಿ, ಸುಮಾರು 500 ಕಿ.ಮೀ. ಸಂಚರಿಸಿದ ಯಾತ್ರೆ ಕರ್ನಾಟಕದಲ್ಲಿ ಸಮಾಪ್ತಿಗೊಳ್ಳಲಿದೆ. ಈ ಮಧ್ಯೆ, ರಾಯಚೂರಿನಲ್ಲಿ ಶನಿವಾರವೂ ಜೋಷ್ ತಗ್ಗದೆ ಅತ್ಯಂತ ಉತ್ಸಾಹ-ಉಲ್ಲಾಸದೊಂದಿಗೆ ಯಾತ್ರೆ ಸಾಗಿತು. ಇದೇ ಮೊದಲ ಬಾರಿಗೆ ಮಾಜಿ ಸಂಸದೆ ರಮ್ಯಾ ಅವರು ರಾಹುಲ್ ಜೊತೆ ಹೆಜ್ಜೆ ಹಾಕುವ ಮೂಲಕ ಯಾತ್ರೆಗೆ ರಂಗು ತಂದರು.
ಶುಕ್ರವಾರ ರಾತ್ರಿ ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾದಲ್ಲಿ ತಂಗಿದ್ದ ರಾಹುಲ್, ಶನಿವಾರ ಬೆಳಗ್ಗೆ 6 ಗಂಟೆಗೆ ಯಾತ್ರೆ ಆರಂಭಿಸಿದರು. ಕೆಲಸಕ್ಕೆ ಹೋಗುತ್ತಿದ್ದ ರೈತರು, ಕೃಷಿ- ಕೂಲಿ ಕಾರ್ಮಿಕರು, ಮಹಿಳೆಯರು, ಯುವಕರು, ಮುಖಂಡರು ಹಾಗೂ ಮಾಜಿ ಸೈನಿಕರು ರಾಹುಲ್ ಗಾಂಧಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಬಳಿಕ, ಮಿಟ್ಟಿಮಲ್ಕಾಪುರ ಗ್ರಾಮದ ನಿವಾಸಿ ಹನುಮೇಶ ಅವರ ಮನೆಗೆ ತೆರಳಿ ಉಪಾಹಾರ ಸೇವಿಸಿದರು.
ಬಿಜೆಪಿ, ಆರ್‌ಎಸ್‌ಎಸ್ ಜನರಲ್ಲಿ ಕೋಮುದ್ವೇಷ ಹರಡುತ್ತಿದೆ: ರಾಹುಲ್ ಗಾಂಧಿ
ನಂತರ, ಬೆಳಗ್ಗೆ 11 ಗಂಟೆಗೆ ರಾಯಚೂರು ನಗರಕ್ಕೆ ಆಗಮಿಸಿದ ರಾಹುಲ್, ಉದ್ಯೋಗ ಖಾತ್ರಿಯ ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರೊಂದಿಗೆ ಸಂವಾದ ನಡೆಸಿದರು. ಬಳಿಕ, ಸಂಜೆ 4 ಗಂಟೆಗೆ ಯಾತ್ರೆ ಮತ್ತೆ ಆರಂಭವಾಯಿತು. ಯಾತ್ರೆ ವೇಳೆ ರಾಹುಲ್ ಅವರು, ಸಿದ್ದರಾಮಯ್ಯನವರ ಕೈ ಹಿಡಿದು ಹೆಜ್ಜೆ ಹಾಕಿದರು. ನಗರದ ಚತುಷ್ಪಥ ರಸ್ತೆಯಲ್ಲಿ ಸಾಗಿದ ರಾಹುಲ್, ಬಸವೇಶ್ವರ ವೃತ್ತದ ಹಿಂಬದಿಯ ವಾಲ್‌ಕಾಟ್ ಮೈದಾನಕ್ಕೆ ಆಗಮಿಸಿದರು. ಈ ವೇಳೆ, ಪಟಾಕಿ ಸಿಡಿಸಿ ಅವರಿಗೆ ಸ್ವಾಗತ ಕೋರಲಾಯಿತು. ಬಳಿಕ, ಮೈದಾನದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಸಂಜೆ, ಯರಮರಸ್ ಸಮೀಪದ ಆನಂದ ಪ್ರೌಢಶಾಲೆಯಲ್ಲಿ ವಾಸ್ತವ್ಯ ಹೂಡಿದರು.
ನಾಳೆಯಿಂದ 3 ದಿನ ಯಾತ್ರೆಗೆ ವಿರಾಮ: ಭಾನುವಾರ ಬೆಳಗ್ಗೆ ಯರಮರಸ್‌ನಿಂದ ಹೊರಡಲಿರುವ ಯಾತ್ರೆ, ಗುಡೆಬೆಲ್ಲೂರು ಮೂಲಕ ತೆಲಂಗಾಣ ಪ್ರವೇಶಿಸಲಿದೆ. ಗುಡೆಬೆಲ್ಲೂರಿನಲ್ಲಿ ಬೆಳಗಿನ ಉಪಹಾರ ಸೇವಿಸಿದ ಬಳಿಕ ಯಾತ್ರೆಗೆ 3 ದಿನದ ವಿರಾಮ ಬೀಳಲಿದೆ. ದೀಪಾವಳಿ ನಿಮಿತ್ತ ಯಾತ್ರೆಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ. ಈ ಮಧ್ಯೆ, ಅ.26ರಂದು ದಿಲ್ಲಿಗೆ ತೆರಳಲಿರುವ ರಾಹುಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸಾಗಲಿದ್ದಾರೆ. ರಜೆ ಬಳಿಕ, ಅ.27ರ ಮುಂಜಾನೆ ಗುಡೆಬೆಲ್ಲೂರಿನಿಂದ ಯಾತ್ರೆ ಪುನರಾರಂಭಗೊಳ್ಳಲಿದೆ.
ಬ್ಯಾಂಡ್ ಬಾರಿಸಿದ ಡಿಕೆಶಿ, ತಮಟೆ ಹೊಡೆದ ಬೈರೇಗೌಡ: ಪಾದಯಾತ್ರೆಯಲ್ಲಿ ರಾಹುಲ್ ಅವರಿಗಿಂತ ಸ್ವಲ್ಪ ಮುಂದೆ ಬ್ಯಾಂಡ್‌ನವರು ಸಾಗುತ್ತಿದ್ದರು. ಯಾತ್ರೆ ಮಿಟ್ಟಿಮಲ್ಕಾಪುರ ಸಮೀಪ ಬರುತ್ತಿದ್ದಂತೆ ಬ್ಯಾಂಡ್ ಬಳಿಗೆ ಬಂದ ಡಿಕೆಶಿ ಸುಮಾರು 3 ಕಿ.ಮೀ. ವರೆಗೂ ನುರಿತ ಕಲಾವಿದರ ಹಾಗೆ ಬ್ಯಾಂಡ್‌ನ್ನು ಲಯಬದ್ಧವಾಗಿ ಭಾರಿಸಿದರು. ಇದೇ ವೇಳೆ, ಕೃಷ್ಣ ಭೈರೇಗೌಡ ಅವರು ತಮಟೆಯನ್ನು ಬಾರಿಸುತ್ತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಗೆದ್ದರೆ ಕಲ್ಯಾಣ ಕರ್ನಾಟಕದಲ್ಲಿ 60000 ಹುದ್ದೆ ಭರ್ತಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 60 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ರಾಹುಲ್ ಗಾಂಧಿ ಘೋಷಿಸಿದರು. ವಾಲ್ಕಾಟ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೆ ವಾಜಪೇಯಿ ಮತ್ತು ಆಡ್ವಾಣಿ ಅವರು 371(ಜೆ) ಮೀಸಲಾತಿ ನೀಡಲು ಆಗುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದ ಈ ಭಾಗಕ್ಕೆ 371 (ಜೆ) ಮೀಸಲಾತಿ ನೀಡಲಾಗಿದೆ. ಆದರೆ, ಇಂದು ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ 371 (ಜೆ) ಅನುಷ್ಠಾನದಲ್ಲಿ ವಿಫಲತೆ ಕಂಡಿದೆ. ಇದರಿಂದಾಗಿ ಈ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿಯನ್ನು ಮಾಡಲಾಗಿಲ್ಲ ಎಂದು ಹೇಳಿದರು.
‘ಕರ್ನಾಟಕ ರಾಜ್ಯಕ್ಕೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಅವಿನಾಭಾವ ಸಂಬಂಧವಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರಿನಿಂದ ಗೆಲ್ಲಿಸಿದ್ದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ತಾಯಿ ಸೋನಿಯಾ ಗಾಂಧಿ ಅವರನ್ನು ಬಳ್ಳಾರಿಯಿಂದ ಗೆಲ್ಲಿಸಿದ್ದನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಕಳೆದ 22 ದಿನಗಳಿಂದ ಕರ್ನಾಟಕದಲ್ಲಿ 500 ಕಿ.ಮೀ.ಗಿಂತ ಹೆಚ್ಚು ದೂರ ಪಾದಯಾತ್ರೆ ಮಾಡಿದ್ದು, ಪಾದಯಾತ್ರೆ ಉದ್ದಕ್ಕೂ ಎಲ್ಲ ಜನರು ತಮ್ಮ ಶಕ್ತಿ, ಪ್ರೀತಿಯನ್ನು ನೀಡಿದ್ದಾರೆ. ಇದಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದರು.
ತೆಲಂಗಾಣದಲ್ಲಿ 19 ವಿಧಾನಸಭಾ ಮತ್ತು 7 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಂತೆ 16 ದಿನಗಳ ಕಾಲ ಯಾತ್ರೆ 375 ಕಿ.ಮೀ. ನಡೆಯಲಿದೆ. ಯಾತ್ರೆ ದಿನಕ್ಕೆ 20 ರಿಂದ 25 ಕಿ.ಮೀ. ಕ್ರಮಿಸಲಿದೆ. ಯಾತ್ರೆ ವೇಳೆ ರಾಹುಲ್ ಸಭೆಗಳನ್ನು ನಡೆಸಲಿದ್ದಾರೆ. ಹಲವಾರು ಗಣ್ಯರನ್ನು ಭೇಟಿಯಾಗಲಿದ್ದಾರೆ. ಚಚ್‌ರ್, ಮಸೀದಿ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ನ.7ಕ್ಕೆ ಯಾತ್ರೆ ಮಹಾರಾಷ್ಟ್ರ ಪ್ರವೇಶಿಸಲಿದೆ.
ಸಂಸತ್ತಲ್ಲಿ ರೈತರ ಪರ ದನಿ ಎತ್ತುವೆ: ಅನ್ನದಾತರಿಗೆ ರಾಹುಲ್ ಭರವಸೆ
ರಾಹುಲ್ ಓಟ: ಈ ಮಧ್ಯೆ, ಮಿಟ್ಟಿಮಲ್ಕಾಪುರ-ಮಲಿಯಾದ್ ಮಧ್ಯದಲ್ಲಿ ಯಾತ್ರೆ ಸಾಗುತ್ತಿದ್ದಾಗ, ರಾಹುಲ್ ಅವರು ಏಕಾಏಕಿ ಓಡಲು ಶುರು ಮಾಡಿದರು. ಜೊತೆಗಿದ್ದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಇತರರು ಕೂಡ ಅವರೊಂದಿಗೆ ಓಡಲು ಶುರು ಮಾಡಿದರು. ಈ ವೇಳೆ, ರಾಯಚೂರು ಜಿಲ್ಲೆಯ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ರಾಹುಲ್‌ಗೆ ರಾಷ್ಟ್ರಧ್ವಜ ನೀಡಿ ಓಟದಲ್ಲಿ ಹೆಜ್ಜೆ ಹಾಕಿದರು. ಜನರು ಕೇಕೆ-ಸಿಳ್ಳೆಗಳ ಮುಖಾಂತರ ಪಾದಯಾತ್ರೆಗೆ ಮತ್ತಷ್ಟುಉತ್ಸಾಹ ತುಂಬಿದರು.
ರಾಗಾ ಜೊತೆ ಹೆಜ್ಜೆ ಹಾಕಿದ ರಮ್ಯ: ರಾಹುಲ್ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಭಾರತ ಐಕ್ಯತಾ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ದೊರಕಿದೆ. ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡು, ರಾಹುಲ್‌ಗೆ ಸಾಥ್ ನೀಡಿದರು. ಆದರೆ, ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಮಾತ್ರ ಈವರೆಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದು ಹಲವು ಚರ್ಚೆಗಳಿಗೆ ಗ್ರಾಸವಾಗಿತ್ತು. ಆದರೆ, ಯಾತ್ರೆ ಮುಗಿಯಲು ಒಂದು ದಿನ ಬಾಕಿ ಇರುವಾಗ ಶನಿವಾರ ಸಂಜೆ ರಾಯಚೂರಿನಲ್ಲಿ ಅದ್ದೂರಿಯಾಗಿ ಸಾಗಿದ ಯಾತ್ರೆಯಲ್ಲಿ ರಾಹುಲ್ ಜೊತೆ ರಮ್ಯಾ ಹೆಜ್ಜೆ ಹಾಕಿ, ಎಲ್ಲರ ಗಮನ ಸೆಳೆದರು.