ಮತ್ತೊಮ್ಮೆ ಬಿಜೆಪಿ ಸರ್ಕಾರ: ಕಾಂಗ್ರೆಸ್‌ ಮನೆ ಖಾಲಿ ಆಗಲಿದೆ ಕಾದು ನೋಡಿ: ನಳಿನ್‌ ಕುಮಾರ್‌ ಕಟೀಲು

By Kannadaprabha NewsFirst Published Feb 8, 2023, 12:23 PM IST
Highlights

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರಲಿದ್ದು, ಕಾಂಗ್ರೆಸ್‌ ಮನೆ ಖಾಲಿಯಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

ದಾವಣಗೆರೆ (ಫೆ.8) : ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರಲಿದ್ದು, ಕಾಂಗ್ರೆಸ್‌ ಮನೆ ಖಾಲಿಯಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

ನಗರದಲ್ಲಿ ಬೂತ್‌ ಮಟ್ಟದ ವಿಜಯ ಸಂಕಲ್ಪ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುವಾಗಲೇ ತಮ್ಮ ಮೊಬೈಲ್‌ಗೆ ಬಂದ ಕರೆಯೊಂದನ್ನು ಸ್ವೀಕರಿಸದೇ ತೋರಿಸುತ್ತಾ, ಕಾಂಗ್ರೆಸ್‌ ಮನೆ ಖಾಲಿಯಾಗಲಿದೆ. ನೀವು ಕಾದು ನೋಡಿ ಎನ್ನುವ ಮೂಲಕ ಕಾಂಗ್ರೆಸ್‌ ಮುಖಂಡರ ಕರೆ ಎಂಬ ಕುತೂಹಲ ಹುಟ್ಟು ಹಾಕಿದರು. ಜನವರಿ 25ರಿಂದ ಫೆ.5ರವರೆಗೆ ವಿಜಯ ಸಂಕಲ್ಪ ಅಭಿಯಾನ ಕೈಗೊಳ್ಳಲಾಗಿದೆ. ಮತದಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಬಗ್ಗೆ ಕರಪತ್ರ ಹಂಚುವುದು, ಸರ್ಕಾರದ ಸಾಧನೆ, ಸೌಲಭ್ಯ ತಿಳಿಸುವುದು, ಬಿಜೆಪಿಯ ಭರವಸೆಯ ಸ್ಟಿಕ್ಕರ್‌ ಅಳವಡಿಸುವ, ಕರಪತ್ರ ಅಂಟಿಸುವ ಕೆಲಸ ಆಗುತ್ತಿದೆ. ಮನೆ ಮನೆಗೆ ತಲುಪುತ್ತಿದ್ದೇವೆ. ಬೂತ್‌ ವಿಜಯ ಅಭಿಯಾನದ ವೇಳೆ 20 ಲಕ್ಷ ಮನೆಗೆ ಆಗ ಬಾವುಟ ಹಾರಿಸಿದ್ದು, 42 ಸಾವಿರ ಬೂತ್‌ಗಳಲ್ಲಿ ಪೇಜ್‌ ಕಮಿಟಿ ಮಾಡಿದ್ದು, 2 ಅಭಿಯಾನ ಯಶಸ್ವಿಯಾಗಿ ಮಾಡಿದ್ದೇವೆ ಎಂದರು.

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ಸಿನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹಣ ಹಂಚಿದ್ದರ ಬಗ್ಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಹಣ ಹಂಚಿ ಚುನಾವಣೆ ಗೆಲ್ಲುವ ಸಂಸ್ಕೃತಿ ಕಾಂಗ್ರೆಸ್‌ ಪಕ್ಷದ್ದಾಗಿದೆ. ಬಿಜೆಪಿಯಲ್ಲಿ ಅಂತಹ ಸಂಸ್ಕೃತಿ ಇಲ್ಲ ಎಂದು ಹೇಳಿದರು. ಇದು ಚುನಾವಣೆ ಸಮಯವಾಗಿದ್ದು, 70 ಶಾಸಕರು ಏನು ಪತ್ರ ನೀಡಿದ್ದಾರೆಂಬುದು ಗೊತ್ತಿಲ್ಲ. ಚುನಾವಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾರ್ಗದರ್ಶನ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ನಳಿನಕುಮಾರ ಕಟೀಲು ಹೇಳಿದರು.

ಕಾರವಾರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ಕಾಂಗ್ರೆಸ್, ಜೆಡಿಎಸ್ ವಿರುದ್ಧ ನಳಿನ್ ವಾಗ್ದಾಳಿ

ಸಿದ್ದರಾಮಯ್ಯರಿಂದ ಕಾಂಗ್ರೆಸ್‌ ಸರ್ವನಾಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಕಾಂಗ್ರೆಸ್‌ ಪಕ್ಷವು ಸರ್ವನಾಶವಾಗಲಿದೆ. ರಾಜಕೀಯ ಗುರುವಾದ ಮಾಜಿ ಪ್ರಧಾನಿ ದೇವೇಗೌಡರನ್ನೇ ಅಡ್ಡ ಹಾಕಿ, ತುಳಿದು ಜೆಡಿಎಸ್‌ ತೊರೆದು ಕಾಂಗ್ರೆಸ್ಸಿಗೆ ಸೇರಿದ ವ್ಯಕ್ತಿ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಸ್ವತಃ ಸಿದ್ದರಾಮಯ್ಯನೇ ಜನತಾದಳ ತೊರೆದು ಕಾಂಗ್ರೆಸ್‌ಗೆ ವಲಸಿಗ. ಇಂತಹ ವ್ಯಕ್ತಿಗೆ ಮತ್ತೊಬ್ಬರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ ಎಂದು ವಲಸಿಗ ಬಿಜೆಪಿ ಸಚಿವರು, ಶಾಸಕರ ಬಗ್ಗೆ ಟೀಕಿಸುತ್ತಿರುವ ವಿಪಕ್ಷ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು. ದಲಿತ ಮುಖ್ಯಮಂತ್ರಿ ಚರ್ಚೆ ಹುಟ್ಟು ಹಾಕಿ ದಲಿತರನ್ನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ಇದೇ ಸಿದ್ದರಾಮಯ್ಯ ಎಂದು ಆರೋಪಿಸಿದರು.

click me!