ಈ ಬಾರಿ ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 4ರಲ್ಲಿ ಹಾಲಿ ಶಾಸಕರನ್ನು ಬದಲಾಯಿಸಿ, ಹೊಸ ಮುಖಗಳನ್ನು ಸ್ಪರ್ಧೆಗಿಳಿಸಿದೆ. ಆದರೆ, ಕಾಂಗ್ರೆಸ್‌ಗೆ 2 ಕ್ಷೇತ್ರಗಳಲ್ಲಿ ಅನುಭವಿ ಅಭ್ಯರ್ಥಿಗಳಿಲ್ಲದೆ, ಅನಿವಾರ್ಯವಾಗಿ ಹೊಸಮುಖಗಳನ್ನು ಕಣಕ್ಕಿಳಿಸಿದೆ.
ಸುಭಾಶ್ಚಂದ್ರ ಎಸ್.ವಾಗ್ಳೆ
ಉಡುಪಿ(ಏ.26): ಕಳೆದೆರಡು ದಶಕಗಳಿಂದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪೊಗದಸ್ತಾಗಿ ಅರಳಿದ್ದು, ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 5 ಸ್ಥಾನಗಳನ್ನೂ ಗೆದ್ದುಕೊಂಡಿದೆ. ಕಳೆದ ಬಾರಿ ದ.ಕ.ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7ರಲ್ಲಿ ಹೊಸಮುಖಗಳನ್ನು ಕಣಕ್ಕಿಳಿಸಿ ಗೆದ್ದು, ಯಶಸ್ವಿಯಾಗಿದ್ದ ಬಿಜೆಪಿ, ಈ ಬಾರಿ ಈ ಪ್ರಯೋಗವನ್ನು ಉಡುಪಿ ಜಿಲ್ಲೆಯಲ್ಲಿ ಜಾರಿಗೊಳಿಸಿದೆ. ಇಲ್ಲಿನ 5 ಕ್ಷೇತ್ರಗಳ ಪೈಕಿ 4ರಲ್ಲಿ ಹಾಲಿ ಶಾಸಕರನ್ನು ಬದಲಾಯಿಸಿ, ಹೊಸ ಮುಖಗಳನ್ನು ಸ್ಪರ್ಧೆಗಿಳಿಸಿದೆ. ಆದರೆ, ಕಾಂಗ್ರೆಸ್‌ಗೆ 2 ಕ್ಷೇತ್ರಗಳಲ್ಲಿ ಅನುಭವಿ ಅಭ್ಯರ್ಥಿಗಳಿಲ್ಲದೆ, ಅನಿವಾರ್ಯವಾಗಿ ಹೊಸಮುಖಗಳನ್ನು ಕಣಕ್ಕಿಳಿಸಿದೆ.
undefined
ಉಡುಪಿ:
ಹಿಂದುತ್ವದ ಟ್ರಂಪ್ ಕಾರ್ಡ್ ಬಳಕೆ:
ಉಡುಪಿಯಲ್ಲಿ 3 ಬಾರಿ ಗೆದ್ದ ಶಾಸಕ ರಘುಪತಿ ಭಟ್ಟರನ್ನು ಪಕ್ಕಕ್ಕೆ ಸರಿಸಿ, ಗೋಕಳ್ಳಸಾಗಣೆ, ಹಿಜಾಬ್ ವಿರುದ್ಧದ ಹೋರಾಟದಿಂದ ಬೆಳಕಿಗೆ ಬಂದ ಹಿಂದೂ ಯುವನಾಯಕ ಯಶಪಾಲ್ ಸುವರ್ಣಗೆ ಬಿಜೆಪಿ ಟಿಕೆಟ್ ನೀಡಿದೆ. ಆ ಮೂಲಕ ಹಿಂದುತ್ವವನ್ನು ತನ್ನ ಟ್ರಂಪ್ ಕಾರ್ಡ್ ಆಗಿ ಬಳಸುವುದಕ್ಕೆ ಹೊರಟಿರುವುದು ಸ್ಪಷ್ಟವಾಗಿದೆ.
ಈ ಬಾರಿಯ ಎಲೆಕ್ಷನ್‌ನಲ್ಲಿ ಯಶಸ್ವಿಯಾಗುತ್ತಾ ಹೊಸಮುಖ ಪ್ರಯೋಗ?
ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 6 ಬಾರಿ ಗೆಲುವು ತಂದು ಕೊಟ್ಟ, ಮೊಗವೀರ ಸಮುದಾಯದ ಮಧ್ವರಾಜ್ ಕುಟುಂಬದ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈಗ ಬಿಜೆಪಿ ಸೇರಿರುವುದರಿಂದ, ಕಾಂಗ್ರೆಸ್ ಅದೇ ಸಮುದಾಯದ ಹೊಸಮುಖ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್‌ಗೆ ಟಿಕೆಟ್ ನೀಡಿದೆ. ಜಾತಿ ಬೆಂಬಲದ ನಿರೀಕ್ಷೆಯ ಜೊತೆಗೆ ಕಾಂಚನ್ ಅವರ ಸಾಫ್‌್ಟಹಿಂದುತ್ವ ಕೂಡ ಕಾಂಗ್ರೆಸ್‌ಗೆ ಮತ ತಂದು ಕೊಡುತ್ತದೆ ಎನ್ನುವುದು ಇಲ್ಲಿನ ಲೆಕ್ಕಾಚಾರ.
ಕುಂದಾಪುರ:
ಹಾಲಾಡಿ ಶಿಷ್ಯಗೆ ಬಂಟ ಅಭ್ಯರ್ಥಿ ಸವಾಲ್:
ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು, 56 ಸಾವಿರ ಮತಗಳ ಅಂತರದಲ್ಲಿ ಗೆದ್ದ ದಾಖಲೆ ಇಲ್ಲಿನ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರದ್ದು. 1999ರಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದಾಗಿನಿಂದ ಸತತ 4 ಬಾರಿ ಬಿಜೆಪಿ, 1 ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಶ್ರೀನಿವಾಸ ಶೆಟ್ಟರು ಈ ಬಾರಿ ಸ್ವಯಂ ನಿವೃತ್ತಿ ಘೋಷಿಸಿ, ತಮ್ಮ ಶಿಷ್ಯ ಕಿರಣ್ ಕೊಡ್ಗಿಗೆ ಟಿಕೆಟ್ ಕೊಡಿಸಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆಯನ್ನು ಹೆಗಲಿಗೇರಿಸಿಕೊಂಡು ಓಡಾಡುತ್ತಿರುವುದು ಬಿಜೆಪಿಗಿರುವ ಪ್ಲಸ್ ಪಾಯಿಂಟ್. ಇಲ್ಲಿಯೂ ಕಾಂಗ್ರೆಸ್, ಹೊಸಮುಖ ದಿನೇಶ್ ಹೆಗ್ಡೆ ಮೊಳಹಳ್ಳಿಗೆ ಟಿಕೆಟ್ ನೀಡಿದೆ. ಅವರು ಬಂಟ ಸಮುದಾಯಕ್ಕೆ ಸೇರಿದವರು. ಕುಂದಾಪುರದಲ್ಲಿ 50 ಸಾವಿರಕ್ಕೂ ಹೆಚ್ಚು ಮತದಾರರಿರುವ ಬಂಟ ಸಮುದಾಯದ್ದೇ ಪ್ರಾಬಲ್ಯ. ಇಲ್ಲಿ ಕಳೆದ 15 ಚುನಾವಣೆಗಳಲ್ಲಿ 12 ಬಾರಿ ಬಂಟರೇ ಗೆದ್ದಿರುವುದು ಒಂದು ದಾಖಲೆಯಾಗಿದ್ದು, ಇದು ಕಾಂಗ್ರೆಸ್‌ನ ಬಂಟ ಅಭ್ಯರ್ಥಿಗಿರುವ ಪ್ಲಸ್ ಪಾಯಿಂಟ್.
ಬೈಂದೂರು:
ಗೋಪಾಲ ಪೂಜಾರಿಗೆ ಆರ್‌ಎಸ್‌ಎಸ್ ಕಟ್ಟಾಳು ಸೆಡ್ಡು:
ಇಲ್ಲಿ ಬಹುಸಂಖ್ಯೆಯಲ್ಲಿರುವ ಬಿಲ್ಲವ ಮತದಾರರೇ ನಿರ್ಣಾಯಕರು. ಅದೇ ಸಮುದಾಯದ ಹೋಟೆಲ್ ಉದ್ಯಮಿ ಗೋಪಾಲ ಪೂಜಾರಿ ಅವರು ಕಾಂಗ್ರೆಸ್‌ನಿಂದ 4 ಬಾರಿ ಗೆದ್ದಿದ್ದಾರೆ. ಕಳೆದ ಬಾರಿ ಸೋತು ಈ ಬಾರಿ ಮತ್ತೆ ಕಣಕ್ಕಿಳಿದಿದ್ದಾರೆ. ಬಿಜೆಪಿ ಇಲ್ಲಿನ ಹಾಲಿ ಶಾಸಕ ಸುಕುಮಾರ್ ಶೆಟ್ಟರನ್ನು ಕೈಬಿಟ್ಟು, ಅವರದ್ದೇ ಸಮುದಾಯದ ಗುರುರಾಜ ಶೆಟ್ಟಿಗಂಟಿಹೊಳೆ ಅವರನ್ನು ಕಣಕ್ಕಿಳಿಸಿದೆ. ಆರ್‌ಎಸ್‌ಎಸ್‌ನಲ್ಲಿ ಪಳಗಿದ, ಬರಿಗಾಲಲ್ಲಿ ಓಡಾಡುವ ಸರಳ ವ್ಯಕ್ತಿತ್ವದ ಗುರುರಾಜ್, ಯುವಕರ ದೊಡ್ಡ ತಂಡವನ್ನೇ ಬೆನ್ನಿಗಿಟ್ಟುಕೊಂಡಿದ್ದಾರೆ. ಶಾಸಕ ಸುಕುಮಾರ ಶೆಟ್ಟಿಯವರ ಅಸಮಾಧಾನ ತಣ್ಣಗಾಗಿದೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಬೆಂಬಲವೂ ಇವರಿಗಿದೆ. ಇದು ಬಿಜೆಪಿಗೆ ವಿಶ್ವಾಸ ಮೂಡಿಸಿದೆ.
ಕಾಪು:
ಮೊಗವೀರರ ಮತ ಸೆಳೆಯುವವರಾರು?
ಉಡುಪಿ ಜಿಲ್ಲೆಯಲ್ಲಿ ಫಿಫ್ಟಿ-ಫಿಫ್ಟಿ ಮ್ಯಾಚ್ ನಡೆಯುತ್ತಿರುವ ಕ್ಷೇತ್ರ ಇದು. ಮೊಗವೀರರೇ ಅಧಿಕ ಸಂಖ್ಯೆಯಲ್ಲಿದ್ದರೂ, ಕಾಂಗ್ರೆಸ್ ಪಕ್ಷ ಬಿಲ್ಲವ ಸಮುದಾಯದ ಮಾಜಿ ಸಚಿವ ವಿನಯಕುಮಾರ್ ಸೊರಕೆಗೆ, ಬಿಜೆಪಿ ಹೊಸಮುಖ ಬಂಟ ಸಮುದಾಯದ ಸುರೇಶ್ ಶೆಟ್ಟಿಗುರ್ಮೆಗೆ ಟಿಕೆಟ್ ನೀಡಿದೆ. ಕಳೆದ ಬಾರಿ ಸೋತ ಮೇಲೆಯೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸೊರಕೆ ಜನರಿಗೆ ಹತ್ತಿರವಿದ್ದಾರೆ. ಹೋಟೆಲ್-ಗಣಿ ಉದ್ಯಮಿ ಗುರ್ಮೆ ಅವರು ತಮ್ಮ ಕವಿತ್ವದ ಮಾತುಗಳಿಂದ ಜನರನ್ನು ಆಕರ್ಷಿಸುತ್ತಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದದಿಂದ ಬಿಜೆಪಿ ಮಣಿಸಲು ಅಸಾಧ್ಯ: ಎಸ್.ಟಿ.ಸೋಮಶೇಖರ್
ಇಲ್ಲಿ 30 ಸಾವಿರದಷ್ಟು ಅಲ್ಪಸಂಖ್ಯಾತರ ಮತಗಳಿವೆ. ಆದರೆ, ಈ ಬಾರಿ ಎಸ್‌ಡಿಪಿಐ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್ ಕೂಡ ಮುಸ್ಲಿಂ ಮಹಿಳೆಗೆ ಟಿಕೆಟ್ ನೀಡಿದೆ. ಇದು ಕಾಂಗ್ರೆಸ್‌ಗೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿಗೆ ಕಾಂಗ್ರೆಸ್ ಮತ ವಿಭಜನೆಯ ಲಾಭವಾಗಲಿದೆ. ಆದರೂ, ಮೊಗವೀರರ ಮತಗಳನ್ನು ಹೆಚ್ಚು ಸೆಳೆಯುವವರಿಗೆ ಇಲ್ಲಿ ಗೆಲುವು ಸಿಗಲಿದೆ.
ಕಾರ್ಕಳ:
ಸುನಿಲ್, ಮುತಾಲಿಕ್ ನಡುವಿನ ಕದನ:
ಇದು ಉಡುಪಿಯ ಸ್ಟಾರ್‌ವಾರ್ ಕ್ಷೇತ್ರ. ಇಲ್ಲಿ ಹಿಂದುತ್ವದ ಫೈರ್ ಬ್ರ್ಯಾಂಡ್, 3 ಬಾರಿ ಗೆದ್ದು ಸಚಿವರಾಗಿರುವ ಸುನಿಲ್ ಕುಮಾರ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಪ್ರಖರ ಹಿಂದುತ್ವವಾದಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವ ಮೂಲಕ ಸವಾಲೊಡ್ಡಿದ್ದಾರೆ.
ಕಾಂಗ್ರೆಸ್‌ನಿಂದ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿಕಣದಲ್ಲಿದ್ದಾರೆ. ಬಂಟರ ನಾಯಕರೂ ಆಗಿರುವುದರಿಂದ ಸಮುದಾಯದ ಮತ ಅವರಿಗೆ ಲಾಭವಾಗಲಿದೆ. ಆದರೆ, ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥ ಪೂಜಾರಿ ಪಕ್ಷದ ವರಿಷ್ಠರ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ. ಕಾರ್ಕಳ, ಹಿಂದುಳಿದ ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿ ಅವರನ್ನು 6 ಬಾರಿ ಗೆಲ್ಲಿಸಿ, ಮುಖ್ಯಮಂತ್ರಿಯನ್ನಾಗಿ ಮಾಡಿದ ಕ್ಷೇತ್ರ. ಈ ಕ್ಷೇತ್ರದಲ್ಲಿ ಸುನಿಲ್ ಮತ್ತು ಮುತಾಲಿಕ್ ನಡುವಿನ ಕದನ, ಕಾಂಗ್ರೆಸ್‌ಗೆ ವರದಾನವಾಗಲಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ.