ಈ ಬಾರಿಯ ಎಲೆಕ್ಷನ್‌ನಲ್ಲಿ ಯಶಸ್ವಿಯಾಗುತ್ತಾ ಹೊಸಮುಖ ಪ್ರಯೋಗ?

By Kannadaprabha News  |  First Published Apr 26, 2023, 8:01 AM IST

ದಕ್ಷಿಣ ಕನ್ನಡದ 8ರಲ್ಲಿ 3 ಕ್ಷೇತ್ರಗಳಲ್ಲಿ ಬಿಜೆಪಿ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೊಸ ಮುಖ ಕಣಕ್ಕೆ, ಬಿಜೆಪಿಗೆ ಪುತ್ತೂರು, ಕಾಂಗ್ರೆಸ್‌ಗೆ ಮಂಗಳೂರು ಉತ್ತರ, ಸುಳ್ಯ ಸವಾಲು 


ಆತ್ಮಭೂಷಣ್‌

ಮಂಗಳೂರು(ಏ.26): 2018ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಗೆಲ್ಲುವ ಮೂಲಕ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿದೆ. ಕಾಂಗ್ರೆಸ್‌, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿದೆ. ಬಿಜೆಪಿ, ಈ ಬಾರಿ ಎಂಟು ಕ್ಷೇತ್ರಗಳ ಪೈಕಿ ಮೂರರಲ್ಲಿ ಹೊಸಮುಖಗಳನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಕೂಡ ಐದು ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿದೆ. ಪುತ್ತೂರಲ್ಲಿ ಹಿಂದುತ್ವ ಹೆಸರಿನಲ್ಲಿ ಗೆಲ್ಲಲು ಹೊರಟಿರುವ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆ ರಾಜ್ಯದ ಗಮನ ಸೆಳೆದಿದೆ.

Tap to resize

Latest Videos

ಬೆಳ್ತಂಗಡಿ:
‘ಶ್ರಮಿಕ’ನಿಗೆ ಗೆಲ್ಲುವ ಪರಿಶ್ರಮ:

ಮೊದಲ ಅವಧಿಯಲ್ಲಿ ಗೆದ್ದ ಬಳಿಕ ಸಮಾಜ ಸೇವೆಯಿಂದ ‘ಶ್ರಮಿಕ’ ಶಾಸಕ ಎಂದೇ ಕರೆಸಿಕೊಳ್ಳುತ್ತಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಈಗ ಎರಡನೇ ಬಾರಿ ಅದೃಷ್ಟಪರೀಕ್ಷಿಸುತ್ತಿದ್ದಾರೆ. ಇವರಿಗೆ ಪ್ರಮುಖ ಎದುರಾಳಿ ಕಾಂಗ್ರೆಸ್‌ನ ರಕ್ಷಿತ್‌ ಶಿವರಾಮ್‌. ಕಳೆದ ಬಾರಿ ಸ್ಪರ್ಧೆಯಲ್ಲಿ ಹರೀಶ್‌ ಪೂಂಜಾಗೆ ಮಾಜಿ ಶಾಸಕ ವಸಂತ ಬಂಗೇರ ಕಾಂಗ್ರೆಸ್‌ ಪ್ರತಿಸ್ಪರ್ಧಿಯಾಗಿದ್ದರು. ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಕಾಂಗ್ರೆಸ್‌ ಹೊಸಮುಖವನ್ನು ಕಣಕ್ಕೆ ಇಳಿಸಿದೆ. ರಕ್ಷಿತ್‌ ಶಿವರಾಮ್‌ ಅವರು ಮಾಜಿ ಪೊಲೀಸ್‌ ಅಧಿಕಾರಿಯ ಪುತ್ರನಾಗಿದ್ದು, ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರ ಸಂಬಂಧಿ. ಇಲ್ಲಿ ಬೇರೆ ಪಕ್ಷಗಳಿದ್ದರೂ ಇವರಿಬ್ಬರೇ ಪ್ರಮುಖ ಎದುರಾಳಿಗಳು.

ಅಮಿತ್‌ ಶಾ ಮಂಗಳೂರು ರೋಡ್‌ ಶೋ ಮುಂದೂಡಿಕೆ; 30ರಂದು ಪುತ್ತೂರು, ಬೈಂದೂರಲ್ಲಿ ಯೋಗಿ ಅಬ್ಬರ!

ಮೂಡುಬಿದಿರೆ:
ಉಮಾನಾಥ ಕೋಟ್ಯಾನ್‌ಗೆ ಕ್ಷೇತ್ರ ಉಳಿಸುವ ಸವಾಲು:

ಮೂಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ದ.ಕ.ದಲ್ಲೇ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇವರದ್ದು. ಆದರೆ, ಈ ಬಾರಿ ಇವರ ಗೆಲವಿನ ಓಟಕ್ಕೆ ಲಗಾಮು ಹಾಕಲು ಕಾಂಗ್ರೆಸ್‌, ಯುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಕೋಟ್ಯಾನ್‌, ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಿಥುನ್‌ ರೈ ಅವರ ಬಿರುಸಿನ ಪ್ರಚಾರ ಮತದಾರರ ಗಮನ ಸೆಳೆಯುತ್ತಿದೆ. ಇಲ್ಲಿ ಇವರಿಬ್ಬರ ನಡುವೆಯೇ ಜಿದ್ದಾಜಿದ್ದಿ.

ಮಂಗಳೂರು ಉತ್ತರ:
ಕಾಂಗ್ರೆಸ್‌ಗೆ ಬಾವಾ ಸ್ಪರ್ಧೆ ತಲೆನೋವು:

ಹಲವು ಕೈಗಾರಿಕೆಗಳ ಬೀಡು ಎಂದೆನಿಸಿದ ಮಂಗಳೂರು ಉತ್ತರ ಕ್ಷೇತ್ರ, ಬಿಜೆಪಿ ಕೈಯಲ್ಲಿದೆ. ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಅಳೆದೂ, ತೂಗಿ ಉದ್ಯಮಿಯೊಬ್ಬರಿಗೆ ಟಿಕೆಟ್‌ ನೀಡಿದೆ. ಹಾಲಿ ಶಾಸಕ, ಅಭ್ಯರ್ಥಿ ಡಾ.ಭರತ್‌ ಶೆಟ್ಟಿಅವರಿಗೆ ಕಾಂಗ್ರೆಸ್‌ನ ಉದ್ಯಮಿ ಇನಾಯತ್‌ ಆಲಿ ಪ್ರತಿಸ್ಪರ್ಧಿ. ಡಾ.ಭರತ್‌ ಶೆಟ್ಟಿಅವರು ಅಭಿವೃದ್ಧಿ ಹಾಗೂ ಹಿಂದುತ್ವವನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಮಾಜಿ ಶಾಸಕ ಮೊಯ್ದಿನ್‌ ಬಾವಾ ಹಾಗೂ ಉದ್ಯಮಿ ಇನಾಯತ್‌ ಆಲಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟು ಕೊನೆಗೂ ಇನಾಯತ್‌ ಆಲಿ ಟಿಕೆಟ್‌ ದಕ್ಕಿಸಿಕೊಂಡಿದ್ದಾರೆ. ಹಾಗಾಗಿ ಮೊಯ್ದಿನ್‌ ಬಾವಾ ಅವರು ಕೊನೆಕ್ಷಣದಲ್ಲಿ ಜೆಡಿಎಸ್‌ಗೆ ಜಿಗಿದು ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ, ಇಲ್ಲಿ ಕಾಂಗ್ರೆಸ್‌ಗೆ ಮೊಯ್ದಿನ್‌ ಬಾವಾ ಸ್ಪರ್ಧೆ ದೊಡ್ಡ ತಲೆನೋವಾಗಿದೆ. ಇಲ್ಲಿ ಈಗ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ.

ಮಂಗಳೂರು ದಕ್ಷಿಣ:
ಹಳೆ ಮುಖಗಳ ಮುಖಾಮುಖಿ:

ಮಂಗಳೂರು ದಕ್ಷಿಣದಲ್ಲಿ ಈ ಬಾರಿಯೂ ಕಳೆದ ಸಲದ ಅಭ್ಯರ್ಥಿಗಳದ್ದೇ ಮುಖಾಮುಖಿ. ಹಾಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಎರಡನೇ ಅವಧಿಗೆ ಆಯ್ಕೆ ಬಯಸಿದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಆರ್‌.ಲೋಬೋ ಮೂರನೇ ಬಾರಿ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್‌ ಪ್ರಯತ್ನ ನಡೆಸಿದ್ದರು. ಕ್ರೈಸ್ತರು ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಮೂರನೇ ಬಾರಿ ಟಿಕೆಟ್‌ ಪಡೆಯುಲ್ಲಿ ಜೆ.ಆರ್‌.ಲೋಬೋ ಯಶಸ್ವಿಯಾದರು. ಇಲ್ಲಿ ಇವರಿಬ್ಬರ ನಡುವೆ ಬಿರುಸಿನ ಸ್ಪರ್ಧೆ ನಡೆಯಲಿದೆ.

ಮಂಗಳೂರು:
ಖಾದರ್‌ಗೆ ಖದರ್‌ ಯಾರು?:

ಮಂಗಳೂರು(ಉಳ್ಳಾಲ), ಹಾಲಿ ಶಾಸಕ ಕಾಂಗ್ರೆಸ್‌ನ ಯು.ಟಿ.ಖಾದರ್‌ ಹ್ಯಾಟ್ರಿಕ್‌ ಆಗಿ ಗೆದ್ದ ಕ್ಷೇತ್ರ. ತಂದೆ ಯು.ಟಿ.ಫರೀದ್‌ ನಿಧನದ ನಂತರ ಅಲ್ಪಾವಧಿಗೆ ಉಪಚುನಾವಣೆಯಲ್ಲಿ ಪುತ್ರ ಯು.ಟಿ. ಖಾದರ್‌ ಶಾಸಕರಾದರು. ಕಳೆದ ಮೂರು ಅವಧಿಯಲ್ಲೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ನಾಲ್ಕು ಅವಧಿಗಳಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಿದರೂ ಗೆಲವು ಖಾದರ್‌ ಅವರದ್ದೇ ಆಗಿತ್ತು. ಈ ಬಾರಿ ಬಿಜೆಪಿ ಹೊಸಮುಖವಾಗಿ ಸೌಮ್ಯವಾದಿ ಮುಖಂಡ ಎನಿಸಿದ, ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ ಅವರನ್ನು ಸ್ಪರ್ಧೆಗೆ ಇಳಿಸಿದೆ. ಈ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆದ್ದ ಇತಿಹಾಸ ಬಿಟ್ಟರೆ, ಉಳಿದಂತೆ ಕಾಂಗ್ರೆಸ್‌ನದ್ದೇ ಅಧಿಪತ್ಯ. ಇಲ್ಲಿ ಎಸ್‌ಡಿಪಿಐ ಕೂಡ ಕಾಂಗ್ರೆಸ್‌ ಗೆಲುವಿಗೆ ಅಡ್ಡಗಾಲು ಹಾಕಲು ಹೊರಟಿದೆ. ಜೆಡಿಎಸ್‌ ಕೂಡ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತಾದರೂ ಅಂತಿಮ ದಿನ ದಿಢೀರ್‌ ಆಗಿ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆಯುವುದರೊಂದಿಗೆ ಇಲ್ಲಿ ಇಬ್ಬರ ನಡುವೆ ಸ್ಪರ್ಧೆ ಖಚಿತವಾಗಿದೆ.

ಬಂಟ್ವಾಳ:
9ನೇ ಬಾರಿಗೆ ರಮಾನಾಥ ರೈ ಕಣಕ್ಕೆ:

ಬಂಟ್ವಾಳದಲ್ಲಿ ಹಾಲಿ ಶಾಸಕ ಬಿಜೆಪಿಯ ರಾಜೇಶ್‌ ನಾಯ್ಕ್‌ ಎರಡನೇ ಬಾರಿ ಅದೃಷ್ಟಪರೀಕ್ಷೆಯಲ್ಲಿದ್ದಾರೆ. ಇಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕೆ ಇಳಿದಿದ್ದಾರೆ. ರಮಾನಾಥ ರೈಗೆ ಇದು ಒಂಭತ್ತನೇ ಸಲದ ಸ್ಪರ್ಧೆ. ಈ ಹಿಂದೆ ಎರಡು ಬಾರಿಯಷ್ಟೇ ಸೋತಿದ್ದ ರಮಾನಾಥ ರೈ, ಈ ಬಾರಿ ಕೊನೆ ಸ್ಪರ್ಧೆ ಎಂಬಂತೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇಲ್ಲಿ ಬಿಲ್ಲವರು ಹಾಗೂ ಮುಸ್ಲಿಮರು ಪ್ರಮುಖವಾಗಿ ಇದ್ದಾರೆ. ಆ ಬಾರಿಯೂ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಸ್ಪರ್ಧೆ.

ಪುತ್ತೂರು:

ಬಿಜೆಪಿಗೆ ಪಕ್ಷೇತರ ಬಿಸಿ:

ಬಿಜೆಪಿಯ ಭದ್ರಕೋಟೆ ಎನಿಸಿದ ಪುತ್ತೂರಿನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಇಲ್ಲಿ ಹೊಸಬರನ್ನು ಕಣಕ್ಕೆ ಇಳಿಸಲಾಗಿದೆ. ಇಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರುಗೆ ಈ ಬಾರಿ ಬಿಜೆಪಿ ಟಿಕೆಟ್‌ ನೀಡಿಲ್ಲ. ಬದಲು ಜಿ.ಪಂ. ಮಾಜಿ ಅಧ್ಯಕ್ಷೆ, ಸುಳ್ಯ ಕ್ಷೇತ್ರವ್ಯಾಪ್ತಿಯ ಆಶಾ ತಿಮ್ಮಪ್ಪ ಅವರನ್ನು ಕಣಕ್ಕೆ ಇಳಿಸಿದೆ.

ಕಾಂಗ್ರೆಸ್‌ ಕೂಡ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಗೆ ಈ ಬಾರಿ ಟಿಕೆಟ್‌ ನೀಡಿಲ್ಲ. ಬದಲು ಬಿಜೆಪಿ ಟಿಕೆಟ್‌ ಸಿಗುವುದಿಲ್ಲ ಎಂಬ ಖಾತರಿಯಲ್ಲಿ ಕಾಂಗ್ರೆಸ್‌ಗೆ ನೆಗೆದ ಉದ್ಯಮಿ ಅಶೋಕ್‌ ಕುಮಾರ್‌ ರೈಗೆ ಟಿಕೆಟ್‌ ನೀಡಿದೆ. ಇನ್ನೊಂದೆಡೆ, ಬಿಜೆಪಿ ಟಿಕೆಟ್‌ ಸಿಗದ ಕಾರಣಕ್ಕೆ ಹಿಂದೂ ಸಂಘಟನೆ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಅಶೋಕ್‌ ಕುಮಾರ್‌ ರೈ ಸ್ಪರ್ಧೆ ಬಿಜೆಪಿಗೆ ದೊಡ್ಡ ಸವಾಲು ಆಗಿದ್ದು, ಇಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ ನಡುವೆ ತ್ರಿಕೋನ ಸ್ಪರ್ಧೆ ಖಚಿತವಾಗಿದೆ.

ಮೇ.3ರಂದು ಮುಲ್ಕಿಗೆ ಪ್ರಧಾನಿ ಮೋದಿ, ಮೇ.6ರಂದು ದಕ್ಷಿಣ ಕನ್ನಡಕ್ಕೆ ಯೋಗಿ: ಬಿಜೆಪಿ ಮೆಗಾ ರ್‍ಯಾಲಿ

ಸುಳ್ಯ:
ಕಾಂಗ್ರೆಸ್‌ಗೆ ತಟಸ್ಥ ಧೋರಣೆ ಇಕ್ಕಟ್ಟು:

ಪರಿಶಿಷ್ಟಜಾತಿ(ಎಸ್‌ಸಿ) ಮೀಸಲು ಕ್ಷೇತ್ರ ಸುಳ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಹೊಸಮುಖಗಳು ಸೆಣಸಾಡಲಿವೆ. ಹಾಲಿ ಶಾಸಕ ಅಂಗಾರ ಅವರು ಎಂಟನೇ ಬಾರಿ ಸ್ಪರ್ಧಿಸುವ ಆಕಾಂಕ್ಷೆಯಲ್ಲಿದ್ದರು. ಆದರೆ ಜಿ.ಪಂ. ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯಗೆ ಬಿಜೆಪಿ ಟಿಕೆಟ್‌ ನೀಡಿದೆ. ಇದು ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಣೆವರೆಗೆ ಪರಿಣಾಮ ಬೀರಿತ್ತು. ಕೊನೆಗೆ ಪಕ್ಷ ನಾಯಕರು ಅಂಗಾರ ಅವರನ್ನು ಸಮಾಧಾನಪಡಿಸಿ ಮತ್ತೆ ಸಕ್ರಿಯರಾಗುವಂತೆ ಮಾಡಿದ್ದಾರೆ.

ಕಾಂಗ್ರೆಸ್‌ ಕೂಡ ಹೊಸ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ಅವರನ್ನು ಕಣಕ್ಕೆ ಇಳಿಸಿದೆ. ಕೃಷ್ಣಪ್ಪಗೆ ಟಿಕೆಟ್‌ ನೀಡಿದ್ದಕ್ಕೆ ಇನ್ನೋರ್ವ ಆಕಾಂಕ್ಷಿ ನಂದಕುಮಾರ್‌ ಅಸಮಾಧಾನಗೊಂಡಿದ್ದು, ತಟಸ್ಥ ಧೋರಣೆ ತಳೆದಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆಯಲಿದೆ.

click me!