
ಬೆಂಗಳೂರು (ಜ.02): ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುತ್ತಿದೆ. ಬಿಜೆಪಿ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮಭಕ್ತರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿತ್ತು. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ಐತಿಹಾಸಿಕ ಕ್ಷಣಕ್ಕೆ ಜನರು ಕಾಯುತ್ತಿದ್ದು, ಕಾಂಗ್ರೆಸ್ ಮಾತ್ರ ಇದನ್ನು ಭಯವೆಂಬಂತೆ ಬಿಂಬಿಸುತ್ತಿದೆ. ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಹುಬ್ಬಳ್ಳಿಯ ಇಬ್ಬರನ್ನು 30 ವರ್ಷಗಳ ಹಿಂದಿನ ಪ್ರಕರಣ ಸಂಬಂಧ ಜೈಲಿಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟನೆಯ ಆಚರಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿರುವ ಸಂದರ್ಭದಲ್ಲಿ ಇಂತಹ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಕಾರ್ಯಕರ್ತರ ಮೇಲೆ ಹಾಕಿದ ಕೇಸು ವಾಪಸ್ ಪಡೆಯಬೇಕು. ಹಳೆಯ ಪ್ರಕರಣ ಹೊರತೆಗೆದು ಬಂಧಿಸಲು ಪೊಲೀಸ್ ಇಲಾಖೆಯಲ್ಲಿ ಚರ್ಚೆಯಾಗಿದೆ ಎಂಬುದಾಗಿ ತಿಳಿದುಬಂದಿದೆ ಎಂದು ಕಿಡಿಕಾರಿದರು.
ಜನರಿಗೆ ಕೈ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ಬೇಕಿದೆ: ಬಿ.ವೈ.ವಿಜಯೇಂದ್ರ
ಡಿವಿಎಸ್ ಮನವೊಲಿಕೆಗೆ ಬಿಜೆಪಿಗರ ಕಸರತ್ತು: ಪಕ್ಷದ ವರಿಷ್ಠ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರನ್ನು ಸಮಾಧಾನ ಮಾಡುವ ಪ್ರಯತ್ನ ನಡೆದಿದೆ. ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಸದಾನಂದಗೌಡರ ನಿವಾಸಕ್ಕೆ ಸಂಜೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು.
ನನ್ನನ್ನು ರಾಜಕೀಯವಾಗಿ ಮುಗಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್: ಪ್ರತಾಪ್ ಸಿಂಹ
ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸುವ ಆಸೆ ಇದೆಯೇ ಎಂಬುದನ್ನು ಕೇಳಿರುವ ಈ ನಾಯಕರು, ಒಂದು ವೇಳೆ ನೀವು ಸ್ಪರ್ಧಿಸದಿದ್ದರೆ ಪರ್ಯಾಯವಾಗಿ ಸಮರ್ಥರಾದವರನ್ನು ಸೂಚಿಸಿ ಎಂದೂ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಹಾಲಿ ಹಾಗೂ ಮಾಜಿ ಶಾಸಕರ ವಿಶ್ವಾಸ ಗಳಿಸಿರುವ ಸದಾನಂದಗೌಡರನ್ನು ದೂರವಿಟ್ಟು ಚುನಾವಣೆ ಎದುರಿಸಿದರೆ ಸೋಲುವ ಸಾಧ್ಯತೆ ಹೆಚ್ಚು ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ. ಹೀಗಾಗಿ, ಸದಾನಂದಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಲೆಕ್ಕಾಚಾರ ಬಿಜೆಪಿ ನಾಯಕರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.