ಸಚಿವ ಮಧು ಚೆಕ್‌ ಬೌನ್ಸ್‌ ಪ್ರಕರಣ ಮರೆಸಲು ತಮ್ಮನ ಅರೆಸ್ಟ್‌: ಸಂಸದ ಪ್ರತಾಪ್‌ ಸಿಂಹ

By Kannadaprabha News  |  First Published Jan 2, 2024, 4:00 AM IST

ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಪ್ರಕರಣ ಮುಚ್ಚಿ ಹಾಕಲು, ಮಾಧ್ಯಮಗಳ ಗಮನ ಬೇರೆಡೆ ಸೆಳೆದು ವಿಷಯಾಂತರ ಮಾಡಲು ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಲಾಯಿತು ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿ ಕಾರಿದ್ದಾರೆ. 


ಮಡಿಕೇರಿ (ಜ.02): ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಪ್ರಕರಣ ಮುಚ್ಚಿ ಹಾಕಲು, ಮಾಧ್ಯಮಗಳ ಗಮನ ಬೇರೆಡೆ ಸೆಳೆದು ವಿಷಯಾಂತರ ಮಾಡಲು ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಲಾಯಿತು ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿ ಕಾರಿದ್ದಾರೆ. ‘ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದೀರ. ಕೋರ್ಟಿನಲ್ಲಿ ಜಡ್ಜ್ ನಿಮಗೆ ಮಂಗಳಾರತಿ ಮಾಡಿದ್ದಾರೆ’ ಎಂದು ಪ್ರತಾಪ್‌, ಗೃಹ ಸಚಿವ ಪರಮೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ. 

ವಿಕ್ರಂ ಸಿಂಹ ಬಂಧನ ವಿಷಯದಲ್ಲಿ ಪ್ರತಾಪ್ ರಾಜಕಾರಣ ಮಾಡುತ್ತಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ, ‘ನನಗೆ ಪರಮೇಶ್ವರ್ ಸಾಹೇಬರ ಬಗ್ಗೆ ಅಪಾರವಾದ ಗೌರವವಿದೆ. ಆ ಎಫ್ಐಆರ್‌ನಲ್ಲಿ ನನ್ನ ತಮ್ಮನ ಹೆಸರಿಲ್ಲದಿದ್ದರೂ ಸುಖಾಸುಮ್ಮನೆ ಈ ವಿಚಾರದಲ್ಲಿ ರಾಜಕಾರಣ ಮಾಡಿದ್ದು ಕಾಂಗ್ರೆಸ್’ ಎಂದಿದ್ದಾರೆ. ಇನ್ನು, ಸಿಎಂ ಸಿದ್ದರಾಮಯ್ಯಗೆ ಲೋಕಸಭೆ ಚುನಾವಣೆಯಲ್ಲಿ ಕೊಡಗು-ಮೈಸೂರಲ್ಲಿ ನನ್ನ ವಿರುದ್ಧ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಅಂತ ಗೊತ್ತಿದೆ. ಹಾಗಾಗಿ ನನ್ನನ್ನು, ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದೂ ಕಿಡಿ ಕಾರಿದ್ದಾರೆ.

Tap to resize

Latest Videos

undefined

ನನ್ನನ್ನು ರಾಜಕೀಯವಾಗಿ ಮುಗಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್: ಪ್ರತಾಪ್ ಸಿಂಹ

ಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ 6 ತಿಂಗಳಲ್ಲಿ ಪೂರ್ಣ: ಸಂಪಾಜೆ-ಕಾಟಕೇರಿ 21.6 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಸಂಸದ ಪ್ರತಾಪ್ ಸಿಂಹ ಅವರು ಸೋಮವಾರ ಚಾಲನೆ ನೀಡಿದರು. ಸಂಪಾಜೆಯ ಗೇಟ್ ಬಳಿ ಚಾಲನೆ ನೀಡಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಸುಮಾರು 14.16 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. 

ಸಂಪಾಜೆಯಿಂದ ಸುಂಟಿಕೊಪ್ಪದವರೆಗೆ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯಬೇಕಿದೆ ಎಂದು ಮಾಹಿತಿ ನೀಡಿದರು. ಕುಶಾಲನಗರದಿಂದ ಸಂಪಾಜೆ ವರೆಗೆ ಅಪಘಾತ ವಲಯವನ್ನು ಗುರುತಿಸಲಾಗಿದ್ದು, ಪ್ರಮುಖವಾಗಿ ಬೋಯಿಕೇರಿ ಮತ್ತು ಆನೆಕಾಡು ಬಳಿ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದಕ್ಕಾಗಿ 500 ಲಕ್ಷ ರು. ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ರಸ್ತೆ ಎತ್ತರೀಕರಣ: ಕೊಡಗು ಜಿಲ್ಲೆಯ ಕುಶಾಲನಗರದಿಂದ ಸಂಪಾಜೆವರೆಗೆ ಹೆದ್ದಾರಿ ಭಾಗದಲ್ಲಿ ಸುಮಾರು 1.3 ಕಿ.ಮೀ. ಮಳೆ ನೀರು ನಿಲ್ಲುವ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪ್ರದೇಶವನ್ನು ವಿಸ್ತರಿಸಿ ರಸ್ತೆ ಎತ್ತರೀಕರಣಗೊಳಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅಂದಾಜು ಪಟ್ಟಿ ಸಲ್ಲಿಸಬೇಕಿದೆ ಎಂದು ಪ್ರತಾಪ್ ಸಿಂಹ ಹೇಳಿದರು. ಹೆದ್ದಾರಿಯಲ್ಲಿ ಎರಡು ಕಡೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ 8 ಕಡೆ ಸಣ್ಣಪುಟ್ಟ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಜೋಡುಪಾಲ ಬಳಿ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು ಎಂದು ವಿವರಿಸಿದರು.

ಜನರಿಗೆ ಕೈ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ಬೇಕಿದೆ: ಬಿ.ವೈ.ವಿಜಯೇಂದ್ರ

2018 ರಲ್ಲಿ ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ 19 ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು, 2019 ರಲ್ಲಿಯೂ ಸಹ ಅತಿವೃಷ್ಟಿಯಾದ ಕಾರಣ 21 ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ ಎಂದು ಪ್ರತಾಪ್ ಸಿಂಹ ಅವರು ಹೇಳಿದರು. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

click me!