ಬಿಜೆಪಿಯವರು ರಾಜ್ಯದ 224 ಕ್ಷೇತ್ರಗಳಲ್ಲಿ .3,500 ಕೋಟಿಗೂ ಅಧಿಕ ಹಣ ಖರ್ಚು ಮಾಡಿದರೂ ಇದಕ್ಕೆ ಮತದಾರರು ಬೆಲೆ ನೀಡದೇ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು.
ಹುಬ್ಬಳ್ಳಿ (ಮೇ.30) : ಬಿಜೆಪಿಯವರು ರಾಜ್ಯದ 224 ಕ್ಷೇತ್ರಗಳಲ್ಲಿ .3,500 ಕೋಟಿಗೂ ಅಧಿಕ ಹಣ ಖರ್ಚು ಮಾಡಿದರೂ ಇದಕ್ಕೆ ಮತದಾರರು ಬೆಲೆ ನೀಡದೇ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಬಗ್ಗೆ ಇನ್ನು ಎರಡು-ಮೂರು ದಿನಗಳಲ್ಲಿ ಜನತೆಗೆ ಸಿಹಿ ಸುದ್ದಿ ಸಿಗಲಿದೆ ಎಂದು ಇದೇ ವೇಳೆ ಹೇಳಿದರು.
ಅವರು ನೂತನ ಸಚಿವರಾಗಿ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಸ್ಥಳೀಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
Karnataka cabinet: ಕಲಘಟಗಿ ಕ್ಷೇತ್ರಕ್ಕೆ ಸಂತೋಷ್ ತಂದ ಲಾಡ್ ಸಚಿವ ಸ್ಥಾನ!
ಬಿಜೆಪಿಯ ಭ್ರಷ್ಟಾಚಾರ, ಹಗರಣಗಳನ್ನು ಅರಿತ ಪ್ರಜ್ಞಾವಂತ ಮತದಾರರು ಈ ಬಾರಿ ಕಾಂಗ್ರೆಸ್ಸಿಗೆ 135 ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡಿದ್ದಾರೆ. ನಾವು ಚುನಾವಣೆಯ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ. ಬುಧವಾರದಂದು ಮುಖ್ಯಮಂತ್ರಿ ಸಭೆ ಕರೆದಿದ್ದು, ಗುರುವಾರ ಕ್ಯಾಬಿನೆಟ್ ಸಭೆ ನಡೆಸಲಿದೆ. ಅಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ರೂಪುರೇಷೆಗಳ ಕುರಿತು ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.
2-3 ದಿನದಲ್ಲಿ ಸಿಹಿಸುದ್ದಿ:
ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ನಾಯಕರು ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಇಂತಹ ಟೀಕೆಗಳಿಗೆ ಕಿವಿಗೊಡಬೇಡಿ. ನಾವು ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಬದ್ಧರಿದ್ದು, ಇನ್ನು 2-3 ದಿನಗಳಲ್ಲಿ ಬಡವರ, ಶೋಷಿತರ ವರ್ಗದ ಏಳ್ಗೆಯ ಕುರಿತು ಸಿಹಿಸುದ್ದಿ ನೀಡಲಿದ್ದೇವೆ ಎಂದರು.
ಮನೆ ಮನೆಗೆ ಮುಟ್ಟಿಸಿ:
ಚುನಾವಣೆಯ ಪೂರ್ವದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹೇಗೆ ಮನೆಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ಹಂಚಿ ವಾಗ್ದಾನ ಮಾಡಿದ್ದೀರೋ ಅದೇ ರೀತಿ ಇನ್ನು ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಲಿದ್ದು, ಈ ಕುರಿತು ಕಾರ್ಯಕರ್ತರು ಮತ್ತೆ ಮನೆಮನೆಗೆ ತೆರಳಿ ಎಲ್ಲರಿಗೂ ಯೋಜನೆಯ ಲಾಭ ದೊರೆಯುವಂತೆ ಮಾಡುವ ಕಾರ್ಯ ನಿಮ್ಮದು ಎಂದರು.
ಮುಂದಿನ ಚುನಾವಣೆಗೆ ಸಿದ್ಧರಾಗಿ:
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಸುಮ್ಮನೆ ಮಲಗಲ್ಲ. ಏನಾದರೂ ಕಾರ್ಯತಂತ್ರ ರೂಪಿಸುತ್ತಲೇ ಇರುತ್ತದೆ. ಇನ್ನು ಒಂದೇ ವರ್ಷದಲ್ಲಿ ಲೋಕಸಭಾ ಚುನಾವಣೆಯಿದ್ದು, ಇದರ ಬಗ್ಗೆ ಹೆಚ್ಚಿನ ಸಿದ್ಧತೆ ನಡೆಸಿಕೊಳ್ಳಬೇಕಿದೆ. ಈಗಾಗಲೇ ನಾವು ಐದು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವಲ್ಲಿ ವಿಫಲರಾಗಿದ್ದೇವೆ. ಈ ಬಾರಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕಿದೆ. ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕಿದೆ. ಹಾಗಾಗಿ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಇದಕ್ಕೆ ಬೇಕಾದ ಪ್ರತ್ಯೇಕ ವೇಳೆ ನಿಗದಿ ಮಾಡಿದರೆ ಯಾವುದೇ ಕಾರಣಕ್ಕೂ ನಿಮ್ಮೊಂದಿಗೆ ಪಾಲ್ಗೊಂಡು ಕಾರ್ಯತಂತ್ರ ರೂಪಿಸಲು, ಪಕ್ಷ ಸಂಘಟಿಸಲು ನಾನು ಬದ್ಧನಿರುವುದಾಗಿ ತಿಳಿಸಿದರು.
ಪಕ್ಷದ ಯಾವುದೇ ಕಾರ್ಯಕರ್ತನಿಗೂ ತೊಂದರೆಯಾಗದಂತೆ ನಾನು ಕಾರ್ಯ ನಿರ್ವಹಿಸುವೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ಬನ್ನಿ. ಅವುಗಳನ್ನು ಪರಿಹರಿಸಲು ನಾನು ಬದ್ಧ. ಪ್ರತಿ ಮೂರು ವಾರಕ್ಕೊಮ್ಮೆ ಇಲ್ಲಿಯೇ ಸಭೆ ಸೇರಿ ಪಕ್ಷದ ಸಂಘಟನೆಯ ಕುರಿತು ಚರ್ಚಿಸೋಣ. ಯಾವುದೇ ಕಾರಣಕ್ಕೂ ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗದಂತೆ ಒಗ್ಗೂಡಿ ಕಾರ್ಯ ನಿರ್ವಹಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಚಾಡಿ ಸಂಸ್ಕೃತಿ ಕೈಬಿಡಿ:
ಜಿಲ್ಲೆಯಲ್ಲಿ ಚಾಡಿ ಹೇಳುವ ಕುರಿತು ಆರೋಪವಿದ್ದು, ಇದಕ್ಕೆ ಪಕ್ಷದ ಕಾರ್ಯಕರ್ತರು ಕಿವಿಗೊಡಬೇಡಿ. ಯಾವುದೇ ಸಮಸ್ಯೆಗಳಿದ್ದಲ್ಲಿ ನಾವೆಲ್ಲರೂ ಕೂಡಿ ನಮ್ಮಲ್ಲಿಯೇ ಪರಿಹರಿಸಿಕೊಳ್ಳೋಣ. ನನಗೆ ಯಾರ ಮೇಲೆಯೂ ದ್ವೇಷವಿಲ್ಲ. ವೈಯಕ್ತಿಕ ಅಜೆಂಡಾನೂ ಇಲ್ಲ. ಈಗಿನಿಂದಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸನ್ನದ್ಧರಾಗಬೇಕಿದೆ. ಹಾಗಾಗಿ ಯಾವುದೇ ಸಣ್ಣಪುಟ್ಟಭಿನ್ನಾಭಿಪ್ರಾಯಗಳಿದ್ದಲ್ಲಿ ಅವುಗಳನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಹೆಚ್ಚಿನ ಆಸಕ್ತಿ ನೀಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹು-ಧಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಮಾತನಾಡಿ, ಜಿಲ್ಲೆಯಲ್ಲಿರುವ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಹಲವು ಕಾರ್ಯಕರ್ತರಿಗೆ ಕಿರುಕುಳ ನೀಡಿದ್ದಾರೆ. ಹಾಗೆಯೇ ಬಿಜೆಪಿ ದುರಾಡಳಿತಕ್ಕೆ ಜನತೆ ಬೇಸತ್ತು ಈ ಬಾರಿ ಕಾಂಗ್ರೆಸ್ಸಿಗೆ ಬೆಂಬಲಿಸಿದ್ದಾರೆ. ಪಕ್ಷದಲ್ಲಿಯೇ ಕೆಲವರು ಫೇಸ್‌ಬುಕ್, ವಾಟ್ಸ್‌ಆ್ಯಪ್ ಶೂರರಿದ್ದು, ಇಂತಹವರ ಬಗ್ಗೆ ಸಚಿವರು ಕಿವಿಗೊಡದೇ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಕಲಘಟಗಿಗೆ ಸಕ್ಕರೆ ಕಾರ್ಖಾನೆ ತರುವರೇ ಸಂತೋಷ ಲಾಡ್!
ಇದೇ ವೇಳೆ ಸಚಿವ ಲಾಡ್ ಅವರಿಗೆ ಹಲವರು ಸನ್ಮಾನಿಸಿದರು. ಮಾಜಿ ಸಂಸದ ಐ.ಜಿ. ಸನದಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶಗೌಡ ಪಾಟೀಲ, ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ನಾಗರಾಜ ಗೌರಿ, ಅನ್ವರ ಮುಧೋಳ ಸೇರಿದಂತೆ ಹಲವರಿದ್ದರು.