ಪ್ರಿಯಾಂಕ್‌ ಖರ್ಗೆ ‘ಲಂಚ ಮಂಚ’ ಹೇಳಿಕೆಗೆ ಬಿಜೆಪಿ ಕೆಂಡ

By Govindaraj SFirst Published Aug 14, 2022, 5:00 AM IST
Highlights

ಇದು ಲಂಚ - ಮಂಚದ ಸರ್ಕಾರ ಎಂಬ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಆ.14): ಇದು ಲಂಚ - ಮಂಚದ ಸರ್ಕಾರ ಎಂಬ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಮಂಡ್ಯದ ಪಾಂಡವಪುರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರಿಯಾಂಕ ಖರ್ಗೆ ಹೇಳಿಕೆ ಶೋಭೆ ತರುವುದಿಲ್ಲ. ಮೊದಲು ಕ್ಷಮೆ ಕೇಳಿ ಆ ಮಾತನ್ನು ವಾಪಸ್‌ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಪ್ರಿಯಾಂಕ್‌ ಖರ್ಗೆ ಇಡೀ ಮಹಿಳಾ ಕುಲಕ್ಕೆ ಅವರು ಅಪಮಾನ ಮಾಡಿದ್ದಾರೆ. ತಕ್ಷಣ ಮಹಿಳೆಯರ ಕ್ಷಮೆ ಕೇಳಬೇಕು. 

ಮೊದಲು ಲಂಚ ಎನ್ನುವ ಮೊಟ್ಟೆಇಟ್ಟು, ಅದಕ್ಕೆ ಕಾವು ಕೊಟ್ಟಿದ್ದು ಕಾಂಗ್ರೆಸ್‌ ಎಂಬುದನ್ನು ಅವರು ಮರೆತಿದ್ದಾರೆ ಎಂದು ಟೀಕಿಸಿದರು. ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಿಯಾಂಕ್‌ ಖರ್ಗೆ ಪ್ರಚಾರದ ಹಿಂದೆ ಬಿದ್ದಿದ್ದು, ಪ್ರಚಾರಪ್ರಿಯ ಖರ್ಗೆಯಾಗಿದ್ದಾರೆ ಎಂದು ಲೇವಡಿ ಮಾಡಿದರು. ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಪ್ರಿಯಾಂಕ್‌ ತಂದೆಯಂತೆ ಸಂಸ್ಕಾರವಂತ ಎಂದುಕೊಂಡಿದ್ದೆ, ಆದರೆ ಅವರ ಹೇಳಿಕೆ ಅವರಲ್ಲಿನ ಸಣ್ಣತನ ತೋರಿಸಿದೆ ಎಂದು ಟೀಕಿಸಿದರು. ಶಾಸಕ ಜಿ. ಸೋಮಶೇಖರ ರೆಡ್ಡಿ, ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಗನಿಗೆ ಸಂಸ್ಕೃತಿ-ಸಂಸ್ಕಾರ ಕಲಿಸಿಲ್ಲ’ ಎಂದರು.

ನಮಗೆ ಬುದ್ಧಿ ಹೇಳಲು ಬರಬೇಡಿ: ಪ್ರಿಯಾಂಕ್‌ ಖರ್ಗೆ ತಿರುಗೇಟು

ಬಿಜೆಪಿ ಮಹಿಳಾ ಮೋರ್ಚಾ ಕಿಡಿ: ಶನಿವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆ ಕೀಲು ಅಭಿರುಚಿ ಹೊಂದಿದೆ. ಇದು ಸಮಸ್ತ ಮಹಿಳಾ ಸರ್ಕಾರಿ ನೌಕರರಿಗೆ ಅವಮಾನ, ಅವರು ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಮನೆಯ ಹೆಂಚು ತೂತು ಎಂಬುದೇ ಗೊತ್ತಿಲ್ಲ: ಇನ್ನು ಈ ಬಗ್ಗೆ ಟ್ವಿಟ್ಟರ್‌ನಲ್ಲೂ ರಾಜ್ಯ ಬಿಜೆಪಿ ತಿರುಗೇಟು ನೀಡಿದ್ದು, ಜಯಮಾಲಾ ಲಂಚದ ಪ್ರಕರಣ, ಮಾಜಿ ಸಚಿವ ಎಚ್‌.ವೈ.ಮೇಟಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿ, ಪ್ರಿಯಾಂಕ್‌ ಖರ್ಗೆ ಅವರಿಗೆ ತಮ್ಮ ಮನೆಯ ಹೆಂಚು ತೂತು ಎಂಬುದೇ ಗೊತ್ತಿಲ್ಲ ಎಂದು ಟೀಕಿಸಿದೆ.

ಏನಿದು ವಿವಾದ: ಹಲವು ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲೇ ಹಗರಣಗಳು ನಡೆಯುತ್ತಿವೆ, ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು, ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದೆ. ಇದೊಂದು ಲಂಚದ ಮಂಚದ ಸರ್ಕಾರ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಗೃಹ ಸಚಿವರ ಮನೆ ಮೇಲಿನ ದಾಳಿ ಕಾನೂನು ಕುಸಿತಕ್ಕೆ ಸಾಕ್ಷಿ: ಪ್ರಿಯಾಂಕ್‌ ಖರ್ಗೆ

ಬಿಜೆಪಿ ವಿರುದ್ಧ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದರು. ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಇದೊಂದು ಅಸಮರ್ಥ ಸರ್ಕಾರ, ಲಂಚ- ಮಂಚದ ಸರ್ಕಾರದಲ್ಲಿ ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ ಎಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.

click me!