MLC Election Result: 'ನನ್ನ ಸೋಲು ನನಗಿಂತ ಯಡಿಯೂರಪ್ಪಗೆ ನೋವಾಗಿದೆ'

By Suvarna News  |  First Published Dec 17, 2021, 3:46 PM IST

* ಮೈಸೂರು ಚಾಮರಾಜನಗರ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲು
* ಅಸಮಾಧಾನ ಹೊರಹಾಕಿದ ಪರಿಷತ್ ಪರಾಜಿತ ಅಭ್ಯರ್ಥಿ
* ಸೋಲಿನಿಂದ ನನಗಿಂತ, ಯಡಿಯೂರಪ್ಪ ಅವರಿಗೆ ನೋವಾಗಿದೆ ಎಂದು ರಘು


ಮೈಸೂರು, (ಡಿ.17): ಮೈಸೂರು ಚಾಮರಾಜನಗರ ವಿಧಾನಪರಿಷತ್ (Mysuru MLC Election) ದ್ವಿಸದಸ್ಯ ಕ್ಷೇತ್ರದಲ್ಲಿ ಕಮಲ ಪಾಳಯ ಮೂರನೇ ಸ್ಥಾನಕ್ಕೆ ಕುಸಿದಿದೆ.  ಕಳೆದ ಬಾರಿ ಸೋತು ಈ ಬಾರಿ ಗೆಲ್ಲೋ ತವಕದಲ್ಲಿದ್ದ ಕೌಟಿಲ್ಯ ರಘುಗೆ (Kautilya Raghu) ಮತದಾರ ಶಾಕ್ ಕೊಟ್ಟಿದ್ದಾನೆ. 

ಇನ್ನು ಈ ಸೋಲಿನ ಬಗ್ಗೆ ಮೈಸೂರಿನಲ್ಲಿ (Mysuru) ಇಂದು(ಶುಕ್ರವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಿಷತ್ ಪರಾಜಿತ ಅಭ್ಯರ್ಥಿ ರಘು ಕೌಟಿಲ್ಯ, ನನ್ನ ಸೋಲಿನಿಂದ ನನಗಿಂತ,  ಯಡಿಯೂರಪ್ಪ(BS Yediyurappa) ಅವರಿಗೆ ನೋವಾಗಿದೆ ಎಂದರು.

Tap to resize

Latest Videos

undefined

ಬಿಜೆಪಿಯಲ್ಲಿ(BJP) ಯಾವುದೇ ಒಳ ಏಟು ಇಲ್ಲ. ಇಲ್ಲಿ ಎಲ್ಲರೂ ಕೂಡ ಸಂಘಟಿತವಾಗಿ ಕೆಲಸ ಮಾಡಿದರು. ಆದರೂ ಸೋಲಾಗಿದೆ, ಇದಕ್ಕೆ‌ ಒಳ ಏಟು ಏನಿಲ್ಲ. ವಿಶ್ವನಾಥ್ ಹೇಳಿವುದಕ್ಕೆಲ್ಲ ನಾನು ಉತ್ತರ ಕೊಡಲ್ಲ. ಅದರ ಬಗ್ಗೆ ಅವರನ್ನೇ ಕೇಳಬೇಕು. ಬಿಜೆಪಿ ಶಿಸ್ತಿನ ಪಕ್ಷ, ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Council Election Result : ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಶಕ್ತಿ ಇನ್ನೂ ಗಟ್ಟಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಎರಡೂ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು, ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಸಂಸದರಾದ ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರು ಸಂಘಟಿತ ಹೋರಾಟ ಮಾಡಿದರು. ಆದರೆ ಎರಡನೇ ಬಾರಿಯೂ ಮತದಾರರು ನನ್ನನ್ನು ವಿಜಯದ ದಡ ಸೇರಿರಲಿಲ್ಲ ಈ ಬಾರಿ ವಿಜಯದ ದಡ ಸೇರಿಸುತ್ತಾರೆಂಬ ವಿಶ್ವಾಸವಿತ್ತು. ಆದರೆ ಅಂತಿಮ ಘಟ್ಟದಲ್ಲಿ ತೆಪ್ಪದಲ್ಲಿ ಕುಳಿತು ಹೋರಾಡುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

 ಚುನಾವಣೆ ಸೋಲಿನಿಂದ ವಿಚಲಿತನಾಗಿಲ್ಲ. ಪಕ್ಷದ ಸೇವೆಯಲ್ಲಿ ನಿರಂತರವಾಗಿ ಮುಂದುವರೆಯುತ್ತೇನೆ. ಮತದಾರರು ನಮ್ಮನ್ನು ಪರಿಪೂರ್ಣವಾಗಿ ಸ್ವೀಕಾರ ಮಾಡದ ನೋವಿದೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ನಾನು ಗೆಲ್ಲುವ ವಿಶ್ವಾವಿತ್ತು. ಸೈದ್ದಾಂತಿಕ ಹೋರಾಟದ ಮೂಲಕ ಬಂದ ನನಗೆ ವಿಧಾನ ಪರಿಷತ್ ಪ್ರವೇಶಿಸಲು ಸಾಧ್ಯವಾಗದ್ದು ನೋವುಂಟು ಮಾಡಿದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಯಾರ ಒಳ ಏಟಿನಿಂದ ನನಗೆ ಸೋಲಾಗಿಲ್ಲ. ನನ್ನ ಚುನಾವಣೆ ಸೋಲಿಗೆ ಯಾರನ್ನೂ ದೂರುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ನವರು ಮೇಲ್ನೋಟಕ್ಕೆ ಆಗದವರಂತೆ ಇದ್ದರೂ ಒಳಗೊಳಗೆ ಚೆನ್ನಾಗಿರುತ್ತಾರೆ. ಕಾಂಗ್ರೆಸ್-ಜೆಡಿಎಸ್ ನ ಅನೈತಿಕ ಒಳ ಒಪ್ಪಂದವೂ ನನ್ನ ಸೋಲಿಗೆ ಕಾರಣವಿರಬಹುದು ಎಂದರು.

ಬಿಎಸ್‌ವೈ ಹೇಳಿದ್ದೇನು?
ಬೆಳಗಾವಿ, ಮೈಸೂರು ಮತ್ತು ತುಮಕೂರು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ಬಗ್ಗೆ ಪಕ್ಷದ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಿ ಕಾರಣಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿ ಮತ್ತು ಮೈಸೂರು ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದೆವು. ಎರಡು ಕಡೆ ದೊಡ್ಡ ಪ್ರಮಾಣದಲ್ಲಿ ಶಾಸಕರು, ಸಂಸದರು ಇದ್ದರೂ ಸೋಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಿದ್ದಾರೆ.ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೋಲಾಗಿರುವ ಬಗ್ಗೆ ಮುಂದಿನ ದಿನಗಳಲ್ಲಿ ತನಿಖೆ ನಡೆಸಿ ಚುನಾವಣೆಯಲ್ಲಿ ಸಹಕಾರ ನೀಡದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

ಈ ಎಲೆಕ್ಷನ್ ಸೋಲು ನಿಜಕ್ಕೂ ಬಿಜೆಪಿಗೆ ಅಘಾತಕಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಭದ್ರ ಬುನಾದಿ ಹಾಕಿಕೊಳ್ಳೋ ಕಮಲಪಾಳಯಕ್ಕೆ ತಂತ್ರಕ್ಕೆ ತಣ್ಣೀರು ಬಿದ್ದಿದೆ. 2023 ರ ವಿಧಾನಸಭಾ ಎಲೆಕ್ಷನ್ ದೃಷ್ಟಿಯಿಂದಲೂ ಈ ಫಲಿತಾಂಶ ಎಚ್ಚರಿಯ ಗಂಟೆಯಾಗಿದೆ. ಕಾಂಗ್ರೆಸ್ ಪುಟಿದೆದ್ದು, ಜೆಡಿಎಸ್ ಸ್ಥಾನ ಉಳಿಸಿಕೊಂಡಿದ್ರೆ, ಕೇಸರಿಪಡೆ ಅಸ್ತಿತ್ವವೇ ಕಂಡುಕೊಳ್ಳದಿರುವುದು ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

click me!