ಬಿಹಾರ ವಿಧಾನಸಭಾ ಚುನಾವಣೆ: ಲಾಲುಗೆ ಇದು ಕಡೇ ಅವಕಾಶ, ನಿತೀಶ್‌ ಕುಮಾರ್‌ಗೆ ಅಪಾಯ!

By Kannadaprabha NewsFirst Published Oct 9, 2020, 12:12 PM IST
Highlights

ರಾಂಚಿಯ ಆಸ್ಪತ್ರೆಯಲ್ಲಿ ಕುಳಿತುಕೊಂಡು ಜೈಲುವಾಸ ಅನುಭವಿಸುತ್ತಿರುವ 72 ವರ್ಷದ ಲಾಲು ಪ್ರಸಾದ್‌ ಯಾದವ್‌ಗೆ ತನ್ನ ಮಕ್ಕಳನ್ನು ಕುರ್ಚಿಯಲ್ಲಿ ಕೂರಿಸಲು ಇದು ಕೊನೆಯ ಅವಕಾಶ. ಹೀಗಾಗಿ ಅಲ್ಲಿಂದಲೇ ಸರ್ಕಸ್ ಮಾಡುತ್ತಿದ್ದಾರೆ. 

ಪಾಟ್ನಾ (ಅ. 09): 2005 ರ ನಂತರ 15 ವರ್ಷ ಬಿಹಾರವನ್ನು ಆಳಿರುವ ಸುಶಾಸನ ಬಾಬು ನಿತೀಶ್‌ ಕುಮಾರ್‌ ಕಾನೂನು ವ್ಯವಸ್ಥೆ, ರಸ್ತೆ, ವಿದ್ಯುತ್‌ ಕ್ಷೇತ್ರದಲ್ಲಿ ಮೆಚ್ಚುವಂತೆ ಕೆಲಸ ಮಾಡಿ ತೋರಿಸಿದ್ದಾರೆ. ಹೊಸ ಕೈಗಾರಿಕೆಗಳನ್ನು ತರಲು ಸಾಧ್ಯ ಆಗಿಲ್ಲವಾದರೂ ಇರುವ ವ್ಯಾಪಾರಿಗಳಿಗೆ ಮೊದಲಿನ ಹಾಗೆ ಗೂಂಡಾಗಿರಿ, ಹಫ್ತಾ ವಸೂಲಿಯ ಕಾಟ ಇಲ್ಲ. ಆದರೆ ನಿತೀಶ್‌ರ ವೈಫಲ್ಯ ಎದ್ದು ಕಾಣುವುದು ನೇಪಾಳದಿಂದ ಆಗುವ ಪ್ರವಾಹಕ್ಕೆ ಪರಿಹಾರ ಮತ್ತು ಅಯಶಸ್ವಿ ಪಾನ ನಿಷೇಧದಲ್ಲಿ.

ಸುಮಾರು 15 ಜಿಲ್ಲೆಗಳಲ್ಲಿ ಪ್ರತಿ ವರ್ಷ ಪ್ರವಾಹ ಬಂದು ಜೀವನ ಉಧ್ವಸ್ತ ಆಗುತ್ತದೆ. ಇನ್ನು, ರಾಜ್ಯದಲ್ಲಿ ಪಾನ ನಿಷೇಧ ಜಾರಿಯಿದೆ. ಆದರೆ ಮದ್ಯ ಹೋಂ ಡೆಲಿವರಿ ಚಾಲೂ ಆಗಿ ಪೊಲೀಸ್‌ ಅಧಿಕಾರಿಗಳಿಗೆ ಸುಗ್ಗಿ ಆಗುತ್ತಿದೆ. ಇನ್ನು ನಿತೀಶ್‌ರ ಜಾತಿಯ ಕುರ್ಮಿಗಳು ರಾಜಕೀಯವಾಗಿ ಸರ್ಕಾರಿ ಟೆಂಡರ್‌ಗಳಲ್ಲಿ, ಪೊಲೀಸ್‌ ಠಾಣೆಗಳಲ್ಲಿ ಪ್ರಬಲರಾಗುತ್ತಿರುವುದರಿಂದ ಹಣದಿಂದ ಪ್ರಭಾವಿಗಳಾಗಿರುವ ಭೂಮಿಹಾರರು, ಯಾದವರು, ರಜಪೂತರಲ್ಲಿ ನಿತೀಶ್‌ ಬಗ್ಗೆ ಕೋಪವಿದೆ.

2000 ರ ಆಸುಪಾಸು ಹುಟ್ಟಿದ ಹೊಸ ಮತದಾರರಿಗೆ ಲಾಲು ಆಡಳಿತದ ಕೆಟ್ಟ ಅನುಭವ ಇಲ್ಲ. ಹೀಗಾಗಿ ಅವರಿಗೆ ಲಾಲುಗಿಂತ ಹೆಚ್ಚು ನಿತೀಶ್‌ ಬಗ್ಗೆ ಅಸಮಾಧಾನವಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ 15 ವರ್ಷದ ಆಡಳಿತ ವಿರೋಧಿ ಅಲೆ ಇದೆ. ಆದರೆ ನಿತೀಶ್‌ಗೆ ಸಮಾಧಾನದ ಸಂಗತಿ ಎಂದರೆ ಲಾಲು ಜೈಲಿನಲ್ಲಿದ್ದಾರೆ, ಅವರ ಮಕ್ಕಳು ಕಚ್ಚಾಡುತ್ತಿದ್ದಾರೆ.

ಸುರೇಶ್ ಅಂಗಡಿ ಕೊನೆ 5 ದಿನ, ಏಮ್ಸ್‌ ಸಿಬ್ಬಂದಿಗೆ ಕೇಂದ್ರ ಮಂತ್ರಿ ಎಂದೂ ತಿಳಿದಿರ್ಲಿಲ್ಲ!

ಲಾಲುಗೆ ಇದು ಕಡೇ ಅವಕಾಶ

ರಾಂಚಿಯ ಆಸ್ಪತ್ರೆಯಲ್ಲಿ ಕುಳಿತುಕೊಂಡು ಜೈಲುವಾಸ ಅನುಭವಿಸುತ್ತಿರುವ 72 ವರ್ಷದ ಲಾಲು ಪ್ರಸಾದ್‌ ಯಾದವ್‌ಗೆ ತನ್ನ ಮಕ್ಕಳನ್ನು ಕುರ್ಚಿಯಲ್ಲಿ ಕೂರಿಸಲು ಇದು ಕೊನೆಯ ಅವಕಾಶ. ಹೀಗಾಗಿ ಜೈಲಿನಿಂದಲೇ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಜೊತೆ ಮೈತ್ರಿ ಮಾತುಕತೆ ಮುಗಿಸಿರುವ ಲಾಲು ಯಾದವ್‌ ಮುಸ್ಲಿಂ ಬಿಟ್ಟು ಉಳಿದ ಜಾತಿಗಳನ್ನು ಸೆಳೆಯಲು ನೋಡುತ್ತಿದ್ದಾರೆ.

ಮುಸ್ಲಿಮರು ಮತ್ತು ಯಾದವರಂತೂ ಲಾಲು ಬಳಿಯೇ ಗಟ್ಟಿಯಾಗಿದ್ದಾರೆ. ಆದರೆ ಕೋರಿ, ಕುಶ್ವಾಹ, ಬ್ರಾಹ್ಮಣರು, ರಾಜಪೂತರನ್ನು ಸ್ವಲ್ಪ ತನ್ನೊಟ್ಟಿಗೆ ತರಲು ಲಾಲು ಮೇಲ್ಜಾತಿಗಳ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುತ್ತಿದ್ದಾರೆ. ಒಂದು ವೇಳೆ ಈ ಬಾರಿಯೂ ಅಧಿಕಾರದಿಂದ ವಂಚಿತವಾದರೆ ಲಾಲು ಕುಟುಂಬಕ್ಕೆ ರಾಜಕೀಯ ಪ್ರಸ್ತುತತೆ ಉಳಿಸಿಕೊಳ್ಳೋದು ಕಷ್ಟಆಗಬಹುದು. ಮುಸ್ಲಿಮರು ಮತ್ತು ಯಾದವರು 90 ಪ್ರತಿಶತದವರೆಗೆ ಲಾಲು ಜೊತೆಗಿರುವುದು ಸಾಮರ್ಥ್ಯ, ಆದರೆ ಬರೀ ಅವರೇ ಇರುವುದು ದೌರ್ಬಲ್ಯ.

ನಿತೀಶ್‌ ಕುಮಾರ್‌ಗಿರುವ ಅಪಾಯ

2015ರಲ್ಲಿ ಮೋದಿ ವಿರುದ್ಧ ಬಿಹಾರದಲ್ಲಿ ಗೆದ್ದಾಗ ಪರ್ಯಾಯ ಪ್ರಧಾನಿ ಅಭ್ಯರ್ಥಿ ಎಂದೇ ರಾಷ್ಟ್ರೀಯ ಮಾಧ್ಯಮಗಳು ನಿತೀಶ್‌ರನ್ನು ಬಿಂಬಿಸುತ್ತಿದ್ದವು. ಆದರೆ ಲಾಲು ಕುಟುಂಬದ ಜೊತೆ ಏಗೋದು ಅಸಾಧ್ಯ ಅನ್ನಿಸಿದಾಗ ನಿತೀಶ್‌ ಪುನರಪಿ ಬಿಜೆಪಿ ಜೊತೆ ಬಂದರು. ಈಗ ಮತ್ತೆ ನಿತೀಶ್‌ ಮತ್ತು ಬಿಜೆಪಿ ನಡುವೆ ಅಷ್ಟೇನೂ ಸಂಬಂಧ ಚೆನ್ನಾಗಿಲ್ಲ. ಬಿಜೆಪಿಯ ದಿಲ್ಲಿ ನಾಯಕರು ಭೂಪೇಂದ್ರ ಯಾದವ್‌ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಿ ಎಂದು ಹೇಳಿದಾಗ ನಿತೀಶ್‌, ಅಮಿತ್‌ ಶಾ ಇಲ್ಲವೇ ನಡ್ಡಾ ಜೊತೆ ಮಾತನಾಡುತ್ತೇನೆ ಎಂದರಂತೆ.

ಕೊನೆಗೆ ನಡ್ಡಾ ಭೇಟಿಗೆ ಬಂದಾಗ ಭೂಪೇಂದ್ರ ಯಾದವ್‌ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಹೊರಗೆ ಕೂರಿಸಿ ನಡ್ಡಾ ಒಬ್ಬರ ಜೊತೆಗೇ ಒಳಗೆ ಹೋದರಂತೆ. ಭೂಪೇಂದ್ರ ಯಾದವ್‌ ಜೊತೆ ಮಾತುಕತೆ ಕಷ್ಟಎಂದು ನಿತೀಶ್‌ ತಿಳಿಸಿದ ನಂತರ ಬಿಜೆಪಿ ಒಬ್ಬ ಮಾಜಿ ಮುಖ್ಯಮಂತ್ರಿ ಇರಲಿ ಎಂದು ಚುನಾವಣಾ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸರನ್ನು ಬಿಹಾರಕ್ಕೆ ತಂದಿದೆ. ಅಂದಹಾಗೆ ಲಾಲು ಪುತ್ರ ತೇಜಸ್ವಿ, ಮೋದಿ ಮತ್ತು ಬಿಜೆಪಿಯನ್ನು ಟೀಕಿಸುತ್ತಿಲ್ಲ. ಬದಲಾಗಿ ಟೀಕಿಸುತ್ತಿರುವುದು ಕೇವಲ ನಿತೀಶ್‌ ಕುಮಾರರನ್ನು ಮಾತ್ರ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!