ಮೋದಿ ವಿರುದ್ಧ ರಣಕಹಳೆ ಊದಿದ TRSಗೆ ಹಿನ್ನಡೆ, ಪ್ರಮುಖ ನಾಯಕ ರಾಜೀನಾಮೆ!

By Suvarna News  |  First Published Oct 15, 2022, 7:39 PM IST

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಣಕಹಳೆ ಊದಿರುವ ಸಿಎಂ ಕೆ ಚಂದ್ರಶೇಖರ್ ರಾವ್‌ಗೆ ತೀವ್ರ ಹಿನ್ನಡೆಯಾಗಿದೆ. ಟಿಆರ್‌ಎಸ್ ಪಕ್ಷದ ಪ್ರಮುಖ ನಾಯಕ, ಮಾಜಿ ಸಂಸದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಸೇರಿಕೊಳ್ಳಲಿದ್ದಾರೆ.


ಹೈದರಾಬಾದ್(ಅ.15): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸೋಲಿಸಲು ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಮುಖ್ಯಸ್ಥ, ಸಿಎಂ ಕೆ ಚಂದ್ರಶೇಖರ್ ರಾವ್ ಈಗಾಗಲೇ ಹಲವು ಪ್ರಯತ್ನ ಹಾಗೂ ಘೋಷಣೆ ಮಾಡಿದ್ದಾರೆ. ಬಿಹಾರ್ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಕೆಲ ನಾಯಕರನ್ನೊಳಗೊಂಡ ಒಕ್ಕೂಟ ರಚಸಿ ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ. ಇದರ ಬೆನ್ನಲ್ಲೇ ಕೆಸಿ ರಾವ್‌ಗೆ ತೀವ್ರ ಹಿನ್ನಡೆಯಾಗಿದೆ. ಪಕ್ಷದ ಪ್ರಮುಖ ನಾಯಕ, ಮಾಜಿ ಸಂಸದ ಬೊರಾ ನರಸಯ್ಯ ಗೌಡ್ ಟಿಆರ್‌ಎಸ್ ಪಕ್ಷ ತೊರೆದಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಕೆ ಚಂದ್ರಶೇಖರ್ ರಾವ್‌ಗೆ ರವಾನಿಸಿದ್ದಾರೆ. ಬೊರಾ ನರಸಯ್ಯ ಗೌಡ್ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಬೊರಾ ನರಸಯ್ಯ ಗೌಡ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮೋದಿ ವಿರುದ್ಧ ಪಕ್ಷ ಸಂಘಟಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮುಂದಾಗಿದ್ದ ಚಂದ್ರಶೇಕರ್ ರಾವ್‌ಗೆ ಇದೀಗ ತಮ್ಮ ಪಕ್ಷದಿಂದಲೇ ಒಂದೊಂದೆ ವಿಕೆಟ್ ಪತನಗೊಳ್ಳುವ ಭೀತಿ ಆರಂಭಗೊಂಡಿದೆ.

ಬಿಜೆಪಿ ಸೋಲಿಸಲು ಭಾರತ್ ರಾಷ್ಟ್ರೀಯ ಸಮಿತಿ ಎಂಬ ರಾಷ್ಟ್ರೀಯ ಪಕ್ಷ ಘೋಷಿಸಿರುವ ಕೆಸಿಆರ್‌ಗೆ ಇದೀಗ ತಮ್ಮ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳುವುದೇ ತಲೆನೋವಾಗಿದೆ. ಟಿಆರ್‌ಎಸ್‌ಗೆ ರಾಜೀನಾಮೆ ಸಲ್ಲಿಸಿರುವ ಬೊರಾ ನರಸಯ್ಯ ಗೌಡ್, ಪಕ್ಷ ನನಗೆ ಸೇರಿ ಹಲವರಿಗೆ ಅವಮಾನ ಮಾಡಿದೆ. ಪಕ್ಷದ ನೀತಿಗಳು ಸಿದ್ಧಾಂತಗಳು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಪಕ್ಷದಲ್ಲಿ ನನ್ನ ಕಾರ್ಯಗಳನ್ನು, ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವಕಾಶವೂ ನೀಡುತ್ತಿಲ್ಲ. ಭಾರತ್ ರಾಷ್ಟ್ರೀಯ ಸಮಿತಿ ಪಕ್ಷ ಘೋಷಿಸುವ ಮೊದಲು ಹಾಗೂ ಬಳಿಕ ನಮ್ಮ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ಕೆಎಸ್ಆರ್ ಬಿಆರ್‌ಎಸ್ ಅನ್ನೋ ರಾಷ್ಟ್ರೀಯ ಪಕ್ಷ ಘೋಷಿಸಿದ್ದಾರೆ ಅನ್ನೋದು ಸುದ್ದಿವಾಹಿನಿಯಿಂದ ನೋಡಿ ತಿಳಿಯಿತು ಎಂದು ಬೊರಾ ನರಸಯ್ಯ ಹೇಳಿದ್ದಾರೆ.

Tap to resize

Latest Videos

ವಿಭಜನೆಯಾಗಲಿದೆಯೇ ಕೆಸಿಆರ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ?

ಪಕ್ಷವನ್ನು ಕಟ್ಟಿಬೆಳೆಸಲು ಅವಿರತ ಶ್ರಮ ವಹಿಸಿದ್ದೇನೆ. ಇದೀಗ ಪಕ್ಷ ತೊರೆಯುವಾಗಿ ಅತೀವ ನೋವು , ಸಂಕಟವಾಗುತ್ತಿದೆ. ವೈಯುಕ್ತಿ ಸಂಬಂಧ, ಉತ್ತಮ ಬಾಂಧವ್ಯದಿಂದ ಟಿಆರ್‌ಎಸ್ ಪಕ್ಷದಲ್ಲಿ ಮುಂದುವರಿದಿದ್ದೆ. ಇನ್ನು ಸಾಧ್ಯವಿಲ್ಲ ಎಂದು ಬೊರಾ ನರಸಯ್ಯ ಗೌಡ್ ಹೇಳಿದ್ದಾರೆ. 

ದೇಶ ಆಳಲು ಹೊರಟ ಕೆಸಿಆರ್‌ ಕುಟುಂಬದಲ್ಲೇ ದೊಡ್ಡ ಒಡಕು?
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ, ವಿಧಾನ ಪರಿಷತ್‌ ಸದಸ್ಯೆ ಹಾಗೂ ಪಕ್ಷದ ಹಿರಿಯ ನಾಯಕಿ ಕೆ.ಕವಿತಾ ಅವರು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಘೋಷಿಸುವ ಕಾರ್ಯಕ್ರಮಕ್ಕೆ ಗೈರಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಚಂದ್ರಶೇಖರ ರಾವ್‌ ಅವರ ಕುಟುಂಬದಲ್ಲಿ ಒಡಕು ಮೂಡಿರಬಹುದು ಎಂದೂ ಹೇಳಲಾಗಿದೆ. ಬುಧವಾರ ಟಿಆರ್‌ಎಸ್‌ ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಬದಲಿಸಲು ಹೈದರಾಬಾದ್‌ನಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು. ಅದರಲ್ಲಿ ಕವಿತಾ ಭಾಗವಹಿಸಿರಲಿಲ್ಲ. ಅಲ್ಲದೆ, ಮುಂಬರುವ ಉಪ ಚುನಾವಣೆಗೆ ಬಿಆರ್‌ಎಸ್‌ ಪಕ್ಷ ಪ್ರಕಟಿಸಿರುವ ಉಸ್ತುವಾರಿಗಳ ಪಟ್ಟಿಯಲ್ಲೂ ಕವಿತಾ ಹೆಸರಿಲ್ಲ. ಹೀಗಾಗಿ ಅವರ ಕುಟುಂಬದಲ್ಲಿ ಒಡಕು ಮೂಡಿರಬಹುದು ಎಂದು ಹೇಳಲಾಗಿದೆ.

ಕೆಸಿಆರ್‌ ಹೊಸ ಪಕ್ಷದ ಪೋಸ್ಟರ್‌ನಲ್ಲಿ ಅರ್ಧ ಕಾಶ್ಮೀರವೇ ನಾಪತ್ತೆ, ಬಿಜೆಪಿ ಟೀಕೆ!
 

click me!