ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಬದ್ಧ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

Published : Nov 30, 2025, 05:41 AM IST
HD Kumaraswamy

ಸಾರಾಂಶ

ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಬಂಡವಾಳ ತೊಡಗಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಭದ್ರಾವತಿ (ನ.30): ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಬಂಡವಾಳ ತೊಡಗಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ಕಾರ್ಖಾನೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯಲ್ಲಿ ಕಾರ್ಖಾನೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲಾಗುತ್ತಿದೆ.

ಪ್ರಸ್ತುತ ಕಾರ್ಖಾನೆಗೆ ಬಂಡವಾಳ ತೊಡಗಿಸಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಕಾರ್ಖಾನೆ ಉಕ್ಕು ಪ್ರಾಧಿಕಾರದ ಅಧೀನಕ್ಕೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಬೇಕಾಗಿದೆ ಎಂದರು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಪುನಶ್ಚೇತನಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಗುತ್ತಿಗೆ ಕಾರ್ಮಿಕರಿಗೆ ಮನವಿ: ಪ್ರಸ್ತುತ ಕಾರ್ಖಾನೆ ಪರಿಸ್ಥಿತಿಯಲ್ಲಿ ಗುತ್ತಿಗೆ ಕಾರ್ಮಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

ಅಲ್ಪ ದಿನಗಳ ಕೆಲಸದಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳು ಅರಿವಿದೆ. ಇದಕ್ಕೆ ಪೂರಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು. ಮೊದಲು ಕಾರ್ಖಾನೆ ಪುನಶ್ಚೇತನಗೊಳ್ಳಬೇಕು. ನಂತರ ನಿವೃತ್ತ ಕಾರ್ಮಿಕರ ಸಮಸ್ಯೆಗಳು ಹಾಗೂ ವಸತಿ ಗೃಹಗಳಿಗೆ ಸಂಬಂಧಿಸಿದಂತೆ ಮತ್ತು ಕಾರ್ಖಾನೆ ಜಾಗ ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಕೇಂದ್ರ ಸಚಿವರಾದ ನಂತರ ಕಾರ್ಖಾನೆಗೆ 2ನೇ ಬಾರಿಗೆ ಕುಮಾರಸ್ವಾಮಿ ಭೇಟಿ ನೀಡಿರುವುದಕ್ಕೆ ಸಂಸದನಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ಸಭೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಬೆಳವಣಿಗೆಗಳನ್ನು ನಿರೀಕ್ಷಿಸಲಾಗುತ್ತಿದೆ. ಸಂಸದನಾಗಿ ಕಾರ್ಖಾನೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಲು ಸಿದ್ದ ಎಂದರು. ಸಭೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಅಧಿಕಾರಿಗಳಾದ ಚಿತ್ತರಂಜನ್ ಮೊಹಂತಿ(ಡಿಐಸಿ, ಬಿಎಸ್‌ಪಿ), ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್, ಬಿ. ವಿಶ್ವನಾಥ್, ರವಿಚಂದ್ರನ್, ಕೆ.ಎಸ್ ಸುರೇಶ್, ಎಲ್. ಪ್ರವೀಣ್ ಕುಮಾರ್, ಶೋಭ ಶಿವಶಂಕರನ್, ತೇಜಸ್ವಿ ಎಸ್. ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಖಾನೆ ಯಂತ್ರೋಪಕರಣಗಳ ವೀಕ್ಷಣೆ

ಸಭೆ ನಂತರ ಕೇಂದ್ರ ಸಚಿವ ಕುಮಾರಸ್ವಾಮಿ ಕಾರ್ಖಾನೆಗೆ ಪ್ರವೇಶಿಸಿದರು. ಆಡಳಿತ ಕಚೇರಿ ಆವರಣದಲ್ಲಿರುವ ಕಾರ್ಖಾನೆ ಸಂಸ್ಥಾಪಕರು ಹಾಗೂ ಮೊದಲ ಅಧ್ಯಕ್ಷರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಯಂತ್ರಗಳ ವೀಕ್ಷಣೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ