
ಬೆಂಗಳೂರು (ಮಾ.09): ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಸದನದಲ್ಲಿ ಶರ್ಟ್ ಕಳಚಿದ್ದಕ್ಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ಸದಸ್ಯರು ಸಂಗಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಮಾಜಿ ಸಚಿವ ಜಮೀರ್ ಅಹಮದ್‌ಖಾನ್ ಸಲಹೆಯಂತೆ ಶರ್ಟ್ ಬಿಚ್ಚಿರುವುದಾಗಿ ಸಂಗಮೇಶ್ ದೂರಿದ್ದಾರೆ.
ಸೋಮವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶರ್ಟ್ ಕಳಚಿದ ಸಂಗಮೇಶ್ ಬಗ್ಗೆ ಹಿರಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದನಕ್ಕೆ ಅದರದ್ದೇ ಆದ ಗೌರವ ಇದೆ. ಸದನದಲ್ಲಿ ಶರ್ಟ್ ಬಿಚ್ಚುವ ಅಗತ್ಯವೇನಿತ್ತು. ಭದ್ರಾವತಿಯಲ್ಲಿ ಸಮಸ್ಯೆಯಾಗಿದ್ದರೆ ಸ್ಪೀಕರ್ ಅವರಿಗೆ ನೋಟಿಸ್ ನೀಡಿ ಮಾತನಾಡಲು ಅವಕಾಶ ಕೇಳಬೇಕು. ಈ ರೀತಿ ಮಾಡಿದರೆ ಪಕ್ಷದ ಮಾನ ಹರಾಜು ಹಾಕಿದಂತಾಗಲ್ಲವೇ ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಮೊದಲ ಸಾಲಿನಲ್ಲೇ ಕುಳಿತಿದ್ದ ಸಂಗಮೇಶ್, ಪ್ರಬಲವಾಗಿ ವಿಷಯ ಮಂಡಿಸಲು ಅನುವಾಗುವಂತೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸುವಂತೆ ಜಮೀರ್ ಸಲಹೆ ನೀಡಿದರು. ಅವರ ಸಲಹೆಯಂತೆ ಶರ್ಟ್ ಕಳಚಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
ನನ್ನ ನಡೆಗೆ ವಿಷಾದ ವ್ಯಕ್ತಪಡಿಸಲ್ಲ, ಸದನದಲ್ಲಿ ಶರ್ಟ್ ಬಿಚ್ಚಿರುವುದನ್ನು ಸಮರ್ಥಿಸಿಕೊಂಡ ಸಂಗಮೇಶ್ ..
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಜಮೀರ್ ಪ್ಯಾಂಟ್ ಬಿಚ್ಚಿ ಎಂದು ಹೇಳುತ್ತಾರೆ ನೀವು ಬಿಚ್ಚುತ್ತೀರಾ? ಸದನದ ಸದಸ್ಯರಾಗಿ ನಿಮಗೆ ಸದನ ನೀತಿ ನಿಯಮಗಳು ಗೊತ್ತಿಲ್ಲವೇ? ಎಂದು ತೀವ್ರ ತರಾಟೆಗೆ ತೆಗೆದುಕೊಂಡು ಎಂದು ತಿಳಿದುಬಂದಿದೆ.
ಮಾ.13 ರಂದು ಶಿವಮೊಗ್ಗ ಚಲೋ: ಸಂಗಮೇಶ್ ವಿರುದ್ಧ ಪೊಲೀಸ್ ದೌರ್ಜನ್ಯ ಖಂಡಿಸಿ ಮಾ.13 ರಂದು ಶಿವಮೊಗ್ಗ ಚಲೋ ನಡೆಸಲು ಹಾಗೂ ಈ ವೇಳೆ ಎಲ್ಲಾ ಶಾಸಕರು ಭಾಗವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ಶಿವಮೊಗ್ಗದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಶಿವಮೊಗ್ಗ ಚಲೋ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.