
ನಾಗಮಂಗಲ (ನ.13) : ಮುಂಬರುವ ಚುನಾವಣೆಯಲ್ಲಿ ಜಾತಿ, ಕಣ್ಣೀರು, ಆಸೆ ಆಮಿಷಗಳನ್ನು ಒಡ್ಡಿ ನನ್ನನ್ನು ಸೋಲಿಸಲು ಕೆಲವರು ಪಣತೊಟ್ಟಿದ್ದಾರೆ. ನನ್ನ ಸೋಲು ಗೆಲುವು ತಾಲೂಕಿನ ಜನರ ಕೈಯಲ್ಲಿದೆ ಹೊರತು ಬೇರೆಯವರಿಂದ ಸಾಧ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಸರಿಯಾದ ವಾತಾವರಣ ಸೃಷ್ಟಿಸಲಿಲ್ಲವೆಂಬ ಕಾರಣಕ್ಕೆ ಹಲವು ಮಂದಿ ಮುಖಂಡರು ಪಕ್ಷತೊರೆಯುವ ಪರಿಸ್ಥಿತಿ ಎದುರಾಯಿತು. ಈ ಪಕ್ಷ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತಿಗೊಳಿಸಿದರು. ನನ್ನನ್ನೂ ಸಹ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅದಕ್ಕಾಗಿಯೇ ನಾನೂ ಸಹ ಪಕ್ಷ ಬಿಡುವ ಅನಿವಾರ್ಯತೆ ಬಂದೊದಗಿತು ಎಂದರು.
ಬಿಜೆಪಿ ಸರ್ಕಾರದಿಂದ ರೈತರ ಕಡೆಗಣನೆ: ಚಲುವರಾಯಸ್ವಾಮಿ
ನಾನು ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ ನಂತರ ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿ ಕಳೆದ ಚುನಾವಣೆಯಲ್ಲಿ 47 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಅಷ್ಟುಮತಗಳ ಅಂತರದಿಂದ ನನ್ನನ್ನು ಸೋಲಿಸಿರುವ ಅವರು ಕಾಂಗ್ರೆಸ್ ಸಹಾಯದೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ದಿನವಾದರೂ ತಾಲೂಕಿಗೆ ಭೇಟಿಕೊಟ್ಟು ಜನರ ಹಾಗೂ ಕ್ಷೇತ್ರದ ಸಮಸ್ಯೆ ಬಗ್ಗೆ ಚಿಂತನೆ ನಡೆಸಿದ್ದಾರೆಯೇ. ಇಲ್ಲವೆಂದಾದರೆ ಯಾವ ಸಾಧನೆಗಾಗಿ ನನ್ನನ್ನು ಸೋಲಿಸಿದಿರಿ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತವಾಗಿವೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಎರಡು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ತಾಲೂಕಿನ ಯುವಸಮುದಾಯಕ್ಕೆ ಉದ್ಯೋಗ ನೀಡುವ ಮೂಲಕ ತಾಲೂಕಿನ ಜನರು ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶ ತಮ್ಮದಾಗಿತ್ತು. ಅದಕ್ಕಾಗಿ ಈ ಹಿಂದೆ ದೇವಿಹಳ್ಳಿ ಬಳಿ ಭೂಮಿಪೂಜೆಯನ್ನೂ ಸಹ ಮಾಡಲಾಗಿತ್ತು. ನನ್ನ ಸೋಲು ಇವೆಲ್ಲ ಸ್ಥಗಿತಕ್ಕೆ ಕಾರಣವಾಯಿತು ಎಂದರು.
ತಾಲೂಕಿನ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂಬ ನನ್ನ ಕನಸನ್ನು ಸಾಕಾರಗೊಳಿಸಬೇಕೆಂದರೆ ಮುಂದಿನ ಚುನಾವಣೆಯಲ್ಲಿ ನನಗೆ ಬೆಂಬಲಿಸಿ ಗೆಲ್ಲಿಸುವ ಮೂಲಕ ಬದಲಾವಣೆ ತರಬೇಕು. ಈ ಬಾರಿ ಕ್ಷೇತ್ರದ ಜನರು ನನ್ನನ್ನು ಕಡೆಗಣಿಸುವುದಿಲ್ಲವೆಂಬ ನಂಬಿಕೆ ವಿಶ್ವಾಸವಿದೆ. ಕಾಂಗ್ರೆಸ್ ನನ್ನ ಮೇಲೆ ಅಪಾರ ವಿಶ್ವಾಸಹೊಂದಿದೆ ಎಂದರು.
ನಾನು ಗೆದ್ದ ಒಂದು ವರ್ಷದೊಳಗೆ ಕಳೆದ ಐದು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮಾರ್ಕೋನಹಳ್ಳಿ ಜಲಾಶಯದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವ ಜೊತೆಗೆ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತೇನೆ. ಯುವಕರಲ್ಲಿ ಇಂದು ಇರುವ ಉತ್ಸಾಹ ಸದಾಕಾಲ ನನ್ನ ಮೇಲಿರಲಿ ಎಂದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ವಡ್ಡರಹಳ್ಳಿ, ಕೋಟೆರಾಮನಕೊಪ್ಪಲು ಮತ್ತು ಲಕ್ಷ್ಮೀಪುರ ಗ್ರಾಮದ ನೂರಾರು ಮಂದಿಗೆ ಶಾಲು ಹಾಕಿ ಬರಮಾಡಿಕೊಂಡರು. ಮೂರು ಗ್ರಾಮಗಳ 30ಕ್ಕೂ ಹೆಚ್ಚುಮಂದಿ ಹಿರಿಯ ನಾಗರಿಕರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಬೈಕ್ ರಾರಯಲಿ:
ಕಾರ್ಯಕ್ರಮಕ್ಕೂ ಮುನ್ನ ಬೆಳ್ಳೂರು ಪಟ್ಟಣದಿಂದ ಲಕ್ಷ್ಮೀಪುರ ಗ್ರಾಮದವರೆಗೆ ನೂರಾರುಮಂದಿ ಯುವಕರು ಬೈಕ್ ರಾರಯಲಿ ನಡೆಸಿದರು. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬೆಳ್ಳೂರು ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪಟಾಕಿ ಸಿಡಿಸಿ ಕೈ ಪಕ್ಷದ ನಾಯಕರ ಪರ ಜಯಘೋಷ ಮೊಳಗಿಸಿದರು.
ಬೆಳ್ಳೂರಿನಿಂದ ಲಕ್ಷ್ಮೀಪುರದವರೆಗೆ ಸ್ವತಃ ಬುಲೆಟ್ ಚಾಲನೆ ಮಾಡಿಕೊಂಡು ತೆರಳಿದ ಚಲುವರಾಯಸ್ವಾಮಿ ಬೈಕ್ ರಾರಯಲಿ ನಡೆಸಿದ ಯುವಕರನ್ನು ಹುರಿದುಂಬಿಸಿದರು. ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಚಲುವರಾಯಸ್ವಾಮಿ ಅವರನ್ನು ರಂಗನಾಥಸ್ವಾಮಿ ದೇಗುಲಕ್ಕೆ ಕರೆದೊಯ್ದು ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
Mandya: ಜೆಡಿಎಸ್ ನಿರ್ದೇಶನದಂತೆ ಜಿಲ್ಲೆಯಲ್ಲಿ ಆಡಳಿತ: ಚಲುವರಾಯಸ್ವಾಮಿ
ಸಮಾರಂಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಮೂಡ್ಲೀಗೌಡ, ಜಿಪಂ ಮಾಜಿ ಸದಸ್ಯ ಕಂಚನಹಳ್ಳಿ ಬಾಲಕೃಷ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಮುಖಂಡರಾದ ರಂಗೇಗೌಡ, ಪುಟ್ಟಸ್ವಾಮಿಗೌಡ, ಮಂಜು, ಪದ್ಮನಾಭ ಸೇರಿದಂತೆ ಹಲವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.