
ಬೆಂಗಳೂರು (ಜೂ.18): ಆರ್‌ಸಿಬಿ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತ ಘಟನೆ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಅಂದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡದಿದ್ದಲ್ಲಿ ಸರಿಯಾಗಿ ತನಿಖೆ ನಡೆಸಬೇಕಿತ್ತು.
ಈಗ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದರೆ, ಕೋರ್ಟ್ ಸಹ ಸರ್ಕಾರವನ್ನು ನಂಬುತ್ತಿಲ್ಲ ಎಂದರ್ಥ ಎಂದರು. ಕಾಲ್ತುಳಿತದಲ್ಲಿ ಮೃತಪಟ್ಟಿರುವ 11 ಮಂದಿಯ ಕುಟುಂಬದವರನ್ನೇ ಕೇಳಿ ತನಿಖೆಗೆ ನೀಡಬಹುದಿತ್ತು. ಮೊದಲು ಜಿಲ್ಲಾಧಿಕಾರಿ, ನಂತರ ನಿವೃತ್ತ ನ್ಯಾಯಾಧೀಶರು, ಬಳಿಕ ಎಸ್‌ಐಟಿ ತನಿಖೆ ಎಂದು ಹೇಳಿದ್ದಾರೆ. ಇಲ್ಲಿ ಯಾವುದರಲ್ಲೂ ಖಚಿತತೆ ಇಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದವರು ಕ್ರಿಕೆಟಿಗರೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರಿಂದಲೇ 11 ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಬಿಜೆಪಿ ಎಲ್ಲಾ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಿದೆ. ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಆಹ್ವಾನ ನೀಡದಿದ್ದರೆ, ಈ ದುರಂತ ನಡೆಯುತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದಾಗ ನೂರಾರು ಸಂಖ್ಯೆಯಲ್ಲಿ ಪೊಲೀಸರು ಬಂಧಿಸಿದ್ದರು. ಅದೇ ರೀತಿ ಎರಡು ಲಕ್ಷ ಜನರ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದರು.
ಈ ಘಟನೆ ಸಂಬಂಧ ಚರ್ಚಿಸಲು ಮೂರು ದಿನದ ಅಧಿವೇಶನ ಕರೆಯಲು ಆಗ್ರಹಿಸಿದ್ದೇನೆ. ಸರ್ಕಾರದ ತಪ್ಪಿಲ್ಲ ಎಂದಾದರೆ, ಯಾರದು ತಪ್ಪು ಎಂದು ಸರಿಯಾಗಿ ತಿಳಿಸಲಿ. ಮುಂದಿನ ಅಕ್ಟೋಬರ್ ತಿಂಗಳಲ್ಲೇ ಈ ಸರ್ಕಾರದ ಕಥೆ ಮುಗಿಯಲಿದೆ. ಎಲ್ಲಾ ಶಾಸಕರು ನಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು 2028ಕ್ಕೆ ಇವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಡಿ.ಕೆ.ಶಿವಕುಮಾರ್ ಬಹಳ ಚಿಂತೆಯಲ್ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.