ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಯಲ್ಲಿ ಮನೆ ಸುಟ್ಟು ಹೋಗಿರುವುದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಮಾಧ್ಯಮಗಳ ಜತೆ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, (ಆ.14) ಮಂಗಳವಾರ ರಾತ್ರಿ ನಡೆದ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಯಲ್ಲಿ ಪುಲೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಇಂದು (ಶುಕ್ರವಾರ) ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು, ಮನೆ, ಮನೆಯಲ್ಲಿದ್ದ ವಸ್ತು, ದಾಖಲಾತಿ ಎಲ್ಲವೂ ಹಾಳಾಗಿದೆ. ಒಟ್ಟು ಸುಮಾರು 3 ಕೋಟಿಯಷ್ಟು ನಷ್ಟವಾಗಿದೆ. ಪೊಲೀಸರು ಈ ಕುರಿತು ತನಿಖೆ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್; 2 ದಿನದಿಂದ ನಡೆದಿತ್ತು ಸ್ಕೆಚ್..!
ಮನೆಯಲ್ಲಿ ನನ್ನ ಮಕ್ಕಳು, ಕುಟುಂಬಸ್ಥರು ಇದ್ದಿದ್ರೆ, ಅವರಿಗೆ ಏನಾದರೂ ಆಗಿದ್ರೆ ಏನು ಗತಿ? ಕಷ್ಟಪಟ್ಟು ದುಡಿದು ಕಟ್ಟಿರುವ ಮನೆ ಇದು. ಅದರಲ್ಲಿ ನಮ್ಮ ನೆನಪಿನ ಸರಮಾಲೆಗಳೇ ಇವೆ. ಅಪ್ಪ-ಾಮ್ಮ ಮನೆಯ ಹಿರಿಯರು ಓಡಾಡಿಕೊಂಡು ಇದ್ದ ಮನೆ. ಇದೀಗ ಆ ಮನೆಗೆ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇನೆ. ಮುಸ್ಲಿಮರು, ಹಿಂದೂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿ ಇದ್ದೇವೆ. ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಗೊತ್ತಿಲ್ಲ. ಪೊಲೀಸ್ ಇಲಾಖೆ ತನಿಖೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನ ಕಂಡು ಹಿಡಿಯಬೇಕು ಎಂದರು.