Asianet Suvarna News Asianet Suvarna News

ಯಾದಗಿರಿ: ಮಾಲಕರೆಡ್ಡಿಗೆ ಕೈ ಕೊಟ್ಟ ಕಾಂಗ್ರೆಸ್‌..!

ಪಕ್ಷನಿಷ್ಠೆಯ ತುನ್ನೂರು ಚೆನ್ನಾರೆಡ್ಡಿಗೆ ಯಾದಗಿರಿ ಟಿಕೆಟ್‌, ಮತ್ತೇ ‘ಕೈ’ ಹಿಡಿದ ಚಿಂಚನಸೂರಗೆ ಗುರುಮಠಕಲ್‌ ಟಿಕೆಟ್‌, ನಾಲ್ಕೂ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ. 

Congress Not Given Yadgir Ticket to Dr Malakareddy grg
Author
First Published Apr 7, 2023, 10:49 PM IST

ಆನಂದ್‌ ಎಂ. ಸೌದಿ

ಯಾದಗಿರಿ(ಏ.07):  ಗುರುವಾರ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಯಾದಗಿರಿ ಮತಕ್ಷೇತ್ರಕ್ಕೆ ವಿಧಾನ ಪರಿಷತ್ತಿನ ಮಾಜಿ ಸಚಿವ ತುನ್ನೂರು ಚೆನ್ನಾರೆಡ್ಡಿ ಪಾಟೀಲ್‌ ಹಾಗೂ ಗುರುಮಠಕಲ್‌ ಮತಕ್ಷೇತ್ರಕ್ಕೆ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಸ್ಥಾನ ಪಡೆದಿರುವುದು ವಿಶೇಷ.

ಈ ಮೂಲಕ, ಜಿಲ್ಲೆಯ ಒಟ್ಟು ನಾಲ್ಕೂ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನೆಲ್ಲ ಅಭ್ಯರ್ಥಿಗಳ ಹೆಸರುಗಳನ್ನು ಅಖೈರುಗೊಳಿಸಿದಂತಾಗಿದೆ. ಯಾದಗಿರಿ ಮತಕ್ಷೇತ್ರಕ್ಕೆ ಪಕ್ಷನಿಷ್ಠೆಯ ತುನ್ನೂರು ಚೆನ್ನಾರೆಡ್ಡಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ಟ ಮಾತು ಉಳಿಸಿಕೊಂಡಂತಾಗಿದ್ದರೆ, ಪುತ್ರಿ ಡಾ. ಅನುರಾಘಾ ಅವರಿಗೆ ಟಿಕೆಟ್‌ ಸಿಕ್ಕರೆ ಕಾಂಗ್ರೆಸ್‌ಗೆ ವಾಪಸ್ಸಾಗುವತ್ತ ತುದಿಗಾಲ ಮೇಲೆ ನಿಂತಂತಿದ್ದ ಮಾಜಿ ಸಚಿವ ಡಾ. ಮಾಲಕರೆಡ್ಡಿಗೆ ಭಾರಿ ನಿರಾಸೆಯಾದಂತಾಗಿದೆ.

ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ, 18 ಮಂದಿ ಅರೆಸ್ಟ್, ಸುರಪುರ ಮತಕ್ಷೇತ್ರ ಬೂದಿ ಮುಚ್ಚಿದ ಕೆಂಡ

ಅಚ್ಚರಿ ಎಂದರೆ, ಖರ್ಗೆ ಅವರನ್ನೇ ಸೋಲಿಸುವುದಾಗಿ ಸೆಡ್ಡು ಹೊಡೆದಿದ್ದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಕೆಲದಿನಗಳ ಹಿಂದೆ ಮರಳಿ ಕಾಂಗ್ರೆಸ್ಸಿಗೆ ವಾಪಸ್ಸಾದ ನಂತರ, ಅವರಿಗೆ ಗುರುಮಠಕಲ್‌ ಮತಕ್ಷೇತ್ರದ ಟಿಕೆಟ್‌ ಘೋಷಿಸಿರುವುದು. ಕಾಂಗ್ರೆಸ್‌ಗೆ ಚಿಂಚನಸೂರು ಅವರ ಅನಿವಾರ‍್ಯತೆ ಅದೆಷ್ಟರ ಮಟ್ಟಿಗೆ ಇದೆ ಅನ್ನೋದನ್ನು ಇದು ಸೂಚಿಸುತ್ತಿರುವಂತಿದೆ.

ತುನ್ನೂರು ಪಕ್ಷನಿಷ್ಠೆಗೆ ಒಲಿದ ಟಿಕೆಟ್‌:

1998-2004ರ ಅವಧಿಗಾಗಿ, ಸ್ಥಳೀಯ ಸಂಸ್ಥೆಗಳ ಪರಿಷತ್ತಿನಿಂದ ಆಯ್ಕೆಯಾಗಿದ್ದ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಕಟ್ಟಾಕಾಂಗ್ರೆಸ್ಸಿಗರು ಜೊತೆಗೆ ಖರ್ಗೆ ಕುಟುಂಬದ ನಿಷ್ಠಾವಂತರು. 26 ಏಪ್ರೀಲ್‌ 1948 ರಂದು ಜನಿಸಿದ ತುನ್ನೂರು, ಎಪಿಎಂಸಿ ಮಾಜಿ ನಿರ್ದೆಶಕರಾಗಿ, 1986ರಲ್ಲಿ ಗುಲ್ಬರ್ಗ ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ಹಾಗೂ ಜಿಲ್ಲಾ ಪಂಚಾಯತ್‌ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು.

ಖರ್ಗೆ ಕುಟುಂಬಕ್ಕೆ ನಿಷ್ಠರಾಗಿದ್ದರೂ, ಟಿಕೆಟ್‌ ಆಕಾಂಕ್ಷಿಯಾಗಿದ್ದ ಇವರಿಗೆ ಕೊನೆ ಕ್ಷಣದಲ್ಲಿ ಕೈ ತಪ್ಪುತ್ತಿತ್ತು. ಆಗ ಕಾಂಗ್ರೆಸ್‌ನಲ್ಲಿದ್ದ ಡಾ. ಮಾಲಕರೆಡ್ಡಿ ಅವರ ಹೆಸರನ್ನು ಅಖೈರುಗೊಳಿಸಲಾಗುತ್ತಿತ್ತು. 2018 ರ ಚುನಾವಣೆಯ ನಂತರ, ಕಾಂಗ್ರೆಸ್‌ ತೊರೆದ ಡಾ. ಮಾಲಕರೆಡ್ಡಿ ಬಿಜೆಪಿ ಸೇರಿದ ನಂತರ, ಟಿಕೆಟ್‌ ಸ್ಥಾನದ ಹೆಸರು ಗಟ್ಟಿಯಾದಂತಾದರೂ, ಡಾ. ಮಾಲಕರೆಡ್ಡಿ ಅವರ ಕಾಂಗ್ರೆಸ್‌ಗೆ ಮತ್ತೇ ಮರಳುವ ಬೆಳವಣಿಗೆಗಳು ಆತಂಕ ಮೂಡಿಸಿದ್ದು ನಿಜ.

ಡಾ. ಮಾಲಕರೆಡ್ಡಿ ಅವರ ಪುತ್ರಿ ಡಾ. ಅನುರಾಘಾರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗುವುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗುತ್ತಿದ್ದವು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರೇ ಡಾ. ರೆಡ್ಡಿ ಅವರನ್ನು ಖುದ್ದು ಕರೆಸಿಕೊಂಡು ಅರ್ಜಿ ಹಾಕಿಸಿದ್ದ ಮೇಲೆ ಎಲ್ಲವೂ ನಿರ್ಧರಿತವಾದಂತೆಯೇ ಇತ್ತು. ಹಳೆಯದನ್ನೆಲ್ಲ ಮರೆತು ಮತ್ತೇ ‘ಕೈ’ ಪಾಳೆಯಕ್ಕೆ ಸೇರುವ ತವಕದಲ್ಲಿದ್ದ ಡಾ. ರೆಡ್ಡಿ ಅವರೂ ಸಹ ಇದಕ್ಕೆ ದನಿಗೂಡಿಸಿದ್ದರು. ಈ ಜೊತೆಗೆ, ಕಾಂಗ್ರೆಸ್ಸಿನಲ್ಲೇ 17 ಜನರು ಆಕಾಂಕ್ಷಿಗಳಾಗಿದ್ದುದು ಮತ್ತೆಲ್ಲಿ ತುನ್ನೂರು ಅವರ ಟಿಕೆಟ್‌ಗೆ ಅಡ್ಡಿ ಆಗಬಹುದು ಎಂಬ ಲೆಕ್ಕಾಚಾರಗಳು ನಡೆದಿದ್ದವು.

ಆದರೆ, ತುನ್ನೂರು ಅವರ ಪಕ್ಷನಿಷ್ಠೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಮಣೆ ಹಾಕುವ ಮೂಲಕ ಎಲ್ಲ ಲೆಕ್ಕಾಚಾರಗಳ ತಲೆಕೆಳಗಾಗಿಸಿದ್ದಾರೆ. ಹತ್ತು ಹಲವು ಸರ್ವೆ-ಅನಿಸಿಕೆಗಳ ನಡುವೆಯೂ ಚೆನ್ನಾರೆಡ್ಡಿಗೆ ಟಿಕೆಟ್‌ ಘೋಷಿಸಲಾಗಿದೆ. ಯಾದಗಿರಿ ಮತಕ್ಷೇತ್ರದಾದ್ಯಂತ ನಿರಂತರ ಸಂಪರ್ಕ ಇಟ್ಟುಕೊಂಡು ಬುನಾದಿ ಬಿಗಿಯಾಗಿಸುವತ್ತ ನಡೆದಿದ್ದ ತುನ್ನೂರು ನಿಸ್ವಾರ್ಥಕ್ಕೆ ಕಾಂಗ್ರೆಸ್‌ ಮಣೆ ಹಾಕಿದೆ. ಕಾಂಗ್ರೆಸ್‌ನ ಉಳಿದ ಆಕಾಂಕ್ಷಿಗಳಲ್ಲಿ ಇದು ಸಹಜವಾದ ಬೇಸರ ಮೂಡಿಸಿದೆಯಾದರೂ, ಪಕ್ಷದ ಅಭ್ಯರ್ಥಿಯ ಗೆಲ್ಲಿಸುವ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಸೂಚನೆ ಇದನ್ನು ಅಸಮಾಧಾನಗಳನ್ನು ತಣ್ಣಗಾಗಿಸಿದಂತಿದೆ.

ಯಾದಗಿರಿ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾದಂತಾಗಿದೆ. ಯಾದಗಿರಿಗೆ ತುನ್ನೂರು ಚೆನ್ನಾರೆಡ್ಡಿ, ಗುರುಮಠಕಲ್‌ಗೆ ಬಾಬುರಾವ್‌ ಚಿಂಚನಸೂರು, ಸುರಪುರಕ್ಕೆ ರಾಜಾ ವೆಂಕಟಪ್ಪ ನಾಯಕ್‌ ಹಾಗೂ ಶಹಾಪುರಕ್ಕೆ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಹೆಸರುಗಳನ್ನು ಘೋಷಿಸಲಾಗಿದೆ. ಗುರುಮಠಕಲ್‌ ಹೊರತುಪಡಿಸಿ, ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಘೋಷಿಸಿದ ನಂತರ, ಜೆಡಿಎಸ್‌ ಅತೃಪ್ತರಿಗೆ ಗಾಳ ಹಾಕತ್ತಿರುವಂತಿದೆ. ಡಾ. ಮಾಲಕರೆಡ್ಡಿ ಅವರತ್ತ ಜೆಡಿಎಸ್‌ ದಾಳ ಬೀಸುತ್ತಿರುವಂತಿದೆ.

ಕಾಂಗ್ರೆಸ್‌ನ್ನೇ ಸೋಲಿಸೋದಾಗಿ ಸೆಡ್ಡು ಹೊಡೆದಿದ್ದ ಚಿಂಚನಸೂರುಗೆ ಕಾಂಗ್ರೆಸ್‌ ಟಿಕೆಟ್‌!

ಯಾದಗಿರಿ: ತಂದೆ (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ)ಯನ್ನು ಸೋಲಿಸಿದಂತೆ, ಪುತ್ರ (ಪ್ರಿಯಾಂಕ ಖರ್ಗೆ) ಅವರನ್ನೂ ಸೋಲಿಸಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲದಂತೆ ಮಾಡುತ್ತೇನೆ ಎಂದು ತಿಂಗಳ ಹಿಂದಷ್ಟೇ ತೊಡೆ ತಟ್ಟಿಅಬ್ಬರಿಸಿದ್ದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಅವರಿಗೆ ಗುರುಮಠಕಲ್‌ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಿರುವುದು ವಿಶೇಷ. ಗುರುವಾರ ಪ್ರಕಟಗೊಂಡ ಕಾಂಗ್ರೆಸ್‌ 2ನೇ ಪಟ್ಟಿಯಲ್ಲಿ ಚಿಂಚನಸೂರು ಹೆಸರು ಕೈ ಪಕ್ಷಕ್ಕೆ ಅನಿವಾರ‍್ಯತೆಯ ಪ್ರತೀಕದಂತಿದೆ.

ಈಗ 2023 ರ ಚುನಾವಣೆಯ ವೇಳೆ ಮತ್ತೇ ತವರು ಪಕ್ಷಕ್ಕೆ ಚಿಂಚನಸೂರು ವಾಪಸ್ಸಾಗಿದ್ದಾರೆ. ಖರ್ಗೆ ಕುಟುಂಬದ ಮೇಲೆ ನಿಷ್ಠೆ ಮೆರೆದಿದ್ದಾರೆ. ಕೋಲಿ ಸಮಾಜದ ಪ್ರಬಲ ಮುಖಂಡರಾಗಿರುವ ಬಾಬುರಾವ್‌ ಅವರ ಹಿಂದಿನ ಮತಬ್ಯಾಂಕುಗಳ ಲೆಕ್ಕ ಹಾಕಿರುವ ಕಾಂಗ್ರೆಸ್‌ ಹೈಕಮಾಂಡ್‌ ಸಹ ಹಿಂದಿನ ಘಟನೆಗಳ ಮರೆತಂತಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋದಕ್ಕೆ ಇದು ಉದಾಹರಣೆಯೂ ಹೌದು ಎನ್ನುವಂತಿದೆ.

ಕೇವಲ ಗುರುಮಠಕಲ್‌ ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದ ಮತಗಳಿಕೆಯಲ್ಲಿ ಚಿಂಚನಸೂರು ಪ್ರಭಾವ ಅರಿತ ಕಾಂಗ್ರೆಸ್‌, ಕೊನೆಗೆ ಇಂತಹ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಚಿಂಚನಸೂರು ಅವರ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿಸುವಲ್ಲಿ ವಿಳಂಬ ಮಾಡಿತಾದರೂ, ನಂತರ ಕಾಂಗ್ರೆಸ್‌ಗೆ ಚಿಂಚನಸೂರು ಬೆಂ’ಬಲ’ದ ವಾಸ್ತವ ಅರಿತಂತಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಗುರುಮಠಕಲ್‌ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಬುರಾವ್‌, ಜೆಡಿಎಸ್‌ ಅಭ್ಯರ್ಥಿ ನಾಗನಗೌಡ ಕಂದಕೂರ ವಿರುದ್ಧ ಸೋಲುಂಡಿದ್ದರು. ತಮ್ಮ ಈ ಸೋಲಿಗೆ ಖರ್ಗೆ ಕುಟುಂಬವೇ ಕಾರಣ ಎಂದು ಆಗ ಕಿಡಿ ಕಾರಿದ್ದ ಚಿಂಚನಸೂರು, 2019 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌ ಗೆಲುವಿನಲ್ಲಿ ಬೆನ್ನೆಲುಬಾಗಿದ್ದ ಚಿಂಚನಸೂರು, ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕ ವಿರುದ್ಧ ಚುನಾವಣೆಯ ರಣಕಹಳೆ ಊದಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶಗಳು ಮತ್ತೇ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡಿದೆ.

ಸಿದ್ದರಾಮಯ್ಯ ಸಿಎಂ ಆಗಲೆಂದು ಶಬರಿಮಲೆಗೆ ಕಾಲ್ನಡಿಗೆ ಹೊರಟ ಅಭಿಮಾನಿಗಳು..!

ಹಾಗೆ ನೋಡಿದರೆ, ಡಾ. ಮಾಲಕರೆಡ್ಡಿಗಿಂತಲೂ ಒಂದು ಹೆಜ್ಜೆ ಮುಂದುವರೆದು ಖರ್ಗೆ ಕುಟುಂಬವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಚಿಂಚನಸೂರು ಅವರನ್ನೇ ಕಾಂಗ್ರೆಸ್‌ ಆಯ್ಕೆ ಮಾಡಿರುವುದು ಅವರ ಸಾಮರ್ಥ್ಯ ತೋರಿಸಿದಂತಿದೆ. ಡಾ. ರೆಡ್ಡಿ ಅವರಿಗೆ ‘ಆಡಿಯೋ’ ಕಂಟಕವಾದಂತಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios