ಬಿಜೆಪಿ ಪ್ರಭಾವಿ ನಾಯಕರು ಆಪರೇಷನ್‌ ಹಸ್ತಕ್ಕೆ?: ಕೇಸರಿ ಪಡೆಯಲ್ಲಿ ತೀವ್ರ ಸಂಚಲನ..!

By Kannadaprabha News  |  First Published Sep 7, 2023, 8:56 PM IST

ಕಾಂಗ್ರೆಸ್‌ ನಾಯಕರು ಜಿಲ್ಲೆಯ ಬಿಜೆಪಿಯಲ್ಲಿನ ಅತೃಪ್ತ ಲಿಂಗಾಯತ ಮತ್ತು ಮರಾಠ ಸಮುದಾಯದ ನಾಯಕರನ್ನು ಸೆಳೆಯಲು ಮುಂದಾಗಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರೇ ಸ್ವತಃ ಆಪರೇಷನ್‌ ಹಸ್ತಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಫೀಲ್ಡಿಗಿಳಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ವಂಚಿತ ನಾಯಕರನ್ನು ಸಂರ್ಪಕಿಸಲಾಗಿದೆ ಎಂದು ಹೇಳಲಾಗುತ್ತಿದೆ.


ಶ್ರೀಶೈಲ ಮಠದ

ಬೆಳಗಾವಿ(ಸೆ.07): ಪ್ರಭಾವಿ ಲಿಂಗಾಯತ ನಾಯಕರ ಅಕಾಲಿಕ ಅಗಲಿಕೆಯಿಂದ ಆಘಾತಗೊಂಡು ನಾಯಕತ್ವ ಕೊರತೆ ನಡುವೆಯೇ ಬೆಳಗಾವಿ ಜಿಲ್ಲಾ ಬಿಜೆಪಿಗೆ ಆಪರೇಷನ್‌ ಹಸ್ತ ಮತ್ತೆ ದೊಡ್ಡ ಆಘಾತ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಬಿಜೆಪಿ ಪ್ರಭಾವಿ ಲಿಂಗಾಯತ ನಾಯಕರು ಹಾಗೂ ಮರಾಠ ನಾಯಕರು ಕಾಂಗ್ರೆಸ್‌ನತ್ತ ವಾಲುತ್ತಿರುವ ಬೆಳವಣಿಗೆ ಕೇಸರಿ ಪಡೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

Latest Videos

undefined

ಕಾಂಗ್ರೆಸ್‌ ನಾಯಕರು ಜಿಲ್ಲೆಯ ಬಿಜೆಪಿಯಲ್ಲಿನ ಅತೃಪ್ತ ಲಿಂಗಾಯತ ಮತ್ತು ಮರಾಠ ಸಮುದಾಯದ ನಾಯಕರನ್ನು ಸೆಳೆಯಲು ಮುಂದಾಗಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರೇ ಸ್ವತಃ ಆಪರೇಷನ್‌ ಹಸ್ತಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಫೀಲ್ಡಿಗಿಳಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ವಂಚಿತ ನಾಯಕರನ್ನು ಸಂರ್ಪಕಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ 20 ಶಾಸಕರು ಬರ್ತಾರೆ, ಅವರ ಜೊತೆ ಸೇರಿಯೇ ಲೋಕಸಭೆ ಎಲೆಕ್ಷನ್‌ ಎದುರಿಸ್ತೇವೆ: ರಾಜು ಕಾಗೆ

ಈಗಾಗಲೇ ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಮಾತುಕತೆಯನ್ನೂ ನಡೆಸಲಾಗಿದೆ. ರಾಮದುರ್ಗ ಶಾಸಕ ಅಶೋಕ ಪಟ್ಟಣ ಸಮ್ಮುಖದಲ್ಲಿ ಯಾದವಾಡ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಲಾಗಿದೆ. ಜಗದೀಶ ಶೆಟ್ಟರ್‌ ಬಿಜೆಪಿಯಲ್ಲಿದ್ದಾಗ ಮಹಾದೇವಪ್ಪ ಯಾದವಾಡ ಅವರು 2 ದಶಕಗಳಿಂದ ಅವರ ಆಪ್ತರಾಗಿದ್ದರು. ಅಲ್ಲದೇ, ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸೋತಿರುವ ಅಭ್ಯರ್ಥಿಗಳ ಸಂಪರ್ಕದಲ್ಲಿಯೂ ಇದ್ದಾರೆ.

ಸಂಚಲನ ಮೂಡಿಸುತ್ತಿರುವ ಮುಖಂಡರ ನಡೆ!:

ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ, ರಾಜ್ಯ ಸಚಿವರಾಗಿದ್ದ ಉಮೇಶ ಕತ್ತಿ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರ ಅಕಾಲಿಕ ಅಗಲಿಕೆಯಿಂದ ಬಿಜೆಪಿಗೆ ಮೊದಲೇ ದೊಡ್ಡ ಹೊಡೆತ ಬಿದ್ದಿದೆ. ಇದೀಗ ಮತ್ತೆ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಜಿಲ್ಲಾ ಬಿಜೆಪಿಗೆ ಮರ್ಮಾಘಾತ ಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಯಲ್ಲಿನ ಪ್ರಭಾವಿ ಲಿಂಗಾಯತ ನಾಯಕರು ಕಾಂಗ್ರೆಸ್‌ ಪಕ್ಷದ ಸೇರ್ಪಡೆಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಕಟ್ಟಾ ಬೆಂಬಲಿಗ, ಕಿತ್ತೂರಿನ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ ಹೀಗೆ ಪ್ರಮುಖ ಲಿಂಗಾಯತ ಪ್ರಭಾವಿ ನಾಯಕರು ಸೇರಿದಂತೆ ಕಾಂಗ್ರೆಸ್‌ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ರಿಪಬ್ಲಿಕ್‌ ಆಫ್‌ ಭಾರತ್‌, ಬಿಜೆಪಿಯರಿಗೆ ಲಾಭ ಆಗುತ್ತದೆ ಅಂದ್ರೆ ಏನು ಬೇಕಾದರೂ ಮಾಡ್ತಾರೆ, ಜಾರಕಿಹೊಳಿ

ಸಂಸದೆ ಮಂಗಲ ಅಂಗಡಿ ನಡೆ ನಿಗೂಢ:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಮ್ಮ ಬೀಗರಾದ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಗೆಲುವು ನಿಶ್ಚಿತವಾಗಿದೆ ಎಂಬ ಹೇಳಿಕೆ ನೀಡಿದ್ದ ಹಾಲಿ ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರಿಗೂ ಈ ಬಾರಿ ಬಿಜೆಪಿ ಟಿಕೆಟ್‌ ನೀಡುವ ಸಾಧ್ಯತೆಗಳು ಕ್ಷೀಣಿಸಿವೆ. ಸೂಕ್ತ ಅಭ್ಯರ್ಥಿ ಆಯ್ಕೆಗೆ ಬಿಜೆಪಿಗೆ ಸವಾಲಾಗಿದೆ. ಸಂಸದೆ ಮಂಗಲ ಅಂಗಡಿ ಅವರ ಮುಂದಿನ ರಾಜಕೀಯ ನಡೆ ಕೂಡ ನಿಗೂಢವಾಗಿದೆ.

ಮರಾಠ ಮುಖಂಡರಿಗೂ ಗಾಳ:

ಕಳೆದ ಚುನಾವಣೆಯಲ್ಲಿ ಎಂಇಎಸ್‌ ಬೆಂಬಲಿತ ಅಭ್ಯರ್ಥಿ 1.30 ಲಕ್ಷ ಮತ ಪಡೆದಿದ್ದು, ಇದು ಅತ್ಯಂತ ಹೆಚ್ಚಿನ ಮತವಾಗಿರುವುದರಿಂದ ಈ ಕುರಿತು ಮರಾಠ ಸಮುದಾಯದ ಮುಖಂಡರು ಹಾಗೂ ಮಾಜಿ ಶಾಸಕರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ವಂಚಿತ, ಮರಾಠ ಸಮುದಾಯದ ನಾಯಕ, ಬೆಳಗಾವಿ ಉತ್ತರ ಮಾಜಿ ಶಾಸಕ ಅನಿಲ ಬೆನಕೆ ಅವರನ್ನು ಕಾಂಗ್ರೆಸ್‌ಗೆ ತರಲು ಗಾಳ ಹಾಕಲಾಗಿದೆ ಎನ್ನಲಾಗುತ್ತಿದೆ. ಶೀಘ್ರವೇ ಬೆನಕೆ ಅವರನ್ನು ಭೇಟಿಯಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಆದರೇ, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿರುವ ಬೆನಕೆ ಅವರು ಪಕ್ಷದ ನಾಯಕರು ಅವಕಾಶ ನೀಡಿದರೇ ಸ್ಪರ್ಧೆ ಮಾಡುವೆ. ಪಕ್ಷ ಬೇರೆಯವರಿಗೂ ಟಿಕೆಟ್ ನೀಡಿದರೂ ಬೆಂಬಲ ಕೊಟ್ಟು ಗೆಲ್ಲಿಸಲು ಶ್ರಮಿಸಲಾಗುವುದು ಎಂದು ಸ್ಪಷ್ಟಣೆ ನೀಡಿದ್ದಾದರೂ ಟಿಕೆಟ್‌ ಕೈ ತಪ್ಪಿದರೇ ಮುಂದಿನ ನಡೆ ಏನು ಎನ್ನುವುದು ಮಾತ್ರ ಚುನಾವಣೆ ಹತ್ತಿವಿದ್ದಾಗಲೇ ಗೊತ್ತಾಗಬೇಕು. ಅಂಥೂ ಆಪರೇಷನ್‌ ಹಸ್ತ ಬೆಳಗಾವಿ ಜಿಲ್ಲೆಯಲ್ಲಿಯೂ ಸಂಚಲನ ಮೂಡಿಸಿದ್ದು, ಬಿಜೆಪಿ ಅತೃಪ್ತ ಲಿಂಗಾಯತ ನಾಯಕರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದಂತು ಸತ್ಯ.

click me!