ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಬಿಡುವಾಗ ಸಮಾಜವನ್ನು ಕೇಳಿ ಹೋಗಿದ್ದಾರೆಯೇ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದರು.
ಹುಬ್ಬಳ್ಳಿ (ಸೆ.07): ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಬಿಡುವಾಗ ಸಮಾಜವನ್ನು ಕೇಳಿ ಹೋಗಿದ್ದಾರೆಯೇ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ತಮಗೆ ಅನ್ಯಾಯವಾದರೆ ಅದು ಸಮಾಜಕ್ಕೆ ಆದ ಅನ್ಯಾಯ ಎಂದು ಭಾವಿಸಿದ್ದು, ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ.
ಲಿಂಗಾಯತರಿಗೆ ಕಾಂಗ್ರೆಸ್ ಏನು ಮಾಡಿದೆ? ಎಂದು ಪ್ರಶ್ನಿಸಿದರು. ಪಕ್ಷದ ಬೆಳವಣಿಗೆ ಕುರಿತು ಮಾತನಾಡಿರುವ ಪಕ್ಷದ ಎಂಎಲ್‌ಸಿ ಪ್ರದೀಪ್ ಶೆಟ್ಟರ್‌ಗೆ ಏನಾದರೂ ಸಮಸ್ಯೆ ಇದ್ದರೆ ಅವರ ಜತೆ ಮಾತನಾಡಿ ಚರ್ಚಿಸಿ ಬಗೆಹರಿಸುತ್ತೇವೆ ಎಂದರು. ಬಕೆಟ್ ಹಿಡಿಯುವವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿ, ಯಾರ ಹತ್ತಿರವೂ ನಾನು ಬಕೆಟ್ ಹಿಡಿದಿಲ್ಲ. ಅಂತಹ ಅನಿವಾರ್ಯತೆ ನನಗಿಲ್ಲ. ನಾನು ಬಕೆಟ್ ಹಿಡಿದಿರೋದು ಬಿಜೆಪಿ ಪಕ್ಷಕ್ಕೆ ಮಾತ್ರ, ಯಾವುದೋ ವ್ಯಕ್ತಿಗಲ್ಲ ಎಂದರು.
ಈಗ ಶೆಟ್ಟರ್ ಪುತ್ರನಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಟಾಂಗ್ ನೀಡಿದ್ದು, ಅದೀಗ ವೈರಲ್ ಆಗಿದೆ. ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಟಿಕೆಟ್ ಕೊಡ್ತಾರೆ ಎಂದು ಪ್ರದೀಪ ಶೆಟ್ಟರ್ ಹೇಳಿಕೆ ನೀಡಿದ್ದರು. ಈ ಮಾತಿಗೆ ದನಿಗೂಡಿಸಿರುವ ಸಂಕಲ್ಪ ಶೆಟ್ಟರ್, ಯಾರು ಬಕೆಟ್ ಹಿಡಿದು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ತೆಗೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಬರೆದು BLavaragombe ಎಂದು ವ್ಯಂಗ್ಯವಾಡಿದ್ದಾರೆ.
ಭಾರತ, ಇಂಡಿಯಾ ವಿಚಾರದಲ್ಲಿ ಬಿಜೆಪಿಗೆ ಜನರಿಂದಲೇ ಪಾಠ: ಸಚಿವ ಮಧು ಬಂಗಾರಪ್ಪ
ಆ ಮೂಲಕ ಪರೋಕ್ಷವಾಗಿ ಶಾಸಕ ಮಹೇಶ್ ಟೆಂಗಿನಕಾಯಿಗೆ ಟಾಂಗ್ ಕೊಟ್ಟಿದ್ದಾರೆ. ಸಂಕಲ್ಪ ಶೆಟ್ಟರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಈ ರೀತಿಯ ಟಾಂಗ್ ಕೊಟ್ಟಿರುವುದು ಇದೇ ಮೊದಲು. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದಾಗಲೂ ಏನೂ ಮಾತನಾಡದ ಸಂಕಲ್ಪ ಶೆಟ್ಟರ್, ಇದೀಗ ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೆ ಫೇಸ್ಬುಕ್‌ನಲ್ಲಿ ಆ್ಯಕ್ಟೀವ್ ಆಗಿದ್ದಾರೆ.