ಸಬ್‌ ಅರ್ಬನ್‌ ರೈಲ್ವೆ ಯೋಜನೆ 2026ರಲ್ಲಿ ಪೂರ್ಣಗೊಳ್ಳುವುದು ಅನುಮಾನ: ವಿ.ಸೋಮಣ್ಣ

Published : Aug 30, 2025, 07:37 PM IST
Minister V Somanna

ಸಾರಾಂಶ

ರಾಜ್ಯ ಸರ್ಕಾರದ ಶೇ.51 ರಷ್ಟು ಹಾಗೂ ಕೇಂದ್ರ ಸರ್ಕಾರದ ಶೇ.49 ರಷ್ಟು ಬಂಡವಾಳದಲ್ಲಿ ಯೋಜನೆ ಪೂರ್ಣಗೊಳಿಸುವುದಕ್ಕೆ ನಿರ್ಧರಿಸಲಾಗಿತ್ತು. 2026ರ ಡಿಸೆಂಬರ್‌ ಅಂತ್ಯದ ವೇಳೆಗೆ 4 ಕಾರಿಡಾರ್‌ ಪೈಕಿ 2 ಕಾರಿಡಾರ್‌ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು.

ಬೆಂಗಳೂರು (ಆ.30): ರಾಜಧಾನಿ ಬೆಂಗಳೂರಿನ ಸಬ್‌ ಅರ್ಬನ್‌ ರೈಲ್ವೆ ಯೋಜನೆ 2026ರಲ್ಲಿ ಪೂರ್ಣಗೊಳ್ಳುವುದು ಕಷ್ಟವಿದ್ದು, ಇಡೀ ಯೋಜನೆಯನ್ನು ರೈಲ್ವೆ ಇಲಾಖೆಯ ಸುಪರ್ದಿಗೆ ಪಡೆದು ಪೂರ್ಣಗೊಳಿಸುವ ಚಿಂತನೆ ಮಾಡಲಾಗಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ, ಬೆಸ್ಕಾಂ, ಜಲಮಂಡಳಿ, ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಬೆಂಗಳೂರಿನ ಸಬ್‌ ಅರ್ಬನ್‌ ರೈಲ್ವೆ ಯೋಜನೆಗೆ ಚಾಲನೆ ನೀಡಿದ್ದರು.

ರಾಜ್ಯ ಸರ್ಕಾರದ ಶೇ.51 ರಷ್ಟು ಹಾಗೂ ಕೇಂದ್ರ ಸರ್ಕಾರದ ಶೇ.49 ರಷ್ಟು ಬಂಡವಾಳದಲ್ಲಿ ಯೋಜನೆ ಪೂರ್ಣಗೊಳಿಸುವುದಕ್ಕೆ ನಿರ್ಧರಿಸಲಾಗಿತ್ತು. 2026ರ ಡಿಸೆಂಬರ್‌ ಅಂತ್ಯದ ವೇಳೆಗೆ 4 ಕಾರಿಡಾರ್‌ ಪೈಕಿ 2 ಕಾರಿಡಾರ್‌ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಆ ವೇಳೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ. ಸಾಕಷ್ಟು ಅಡೆತಡೆಗಳಿದ್ದು, ನಿಗದಿತ ವೇಳೆಗೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಹೀಗಾಗಿ, ಇಡೀ ಯೋಜನೆಯನ್ನು ರೈಲ್ವೆ ಇಲಾಖೆಯ ಸುಪರ್ದಿಗೆ ಪಡೆಯುವುದಕ್ಕೆ ಚಿಂತನೆ ನಡೆಸಲಾಗಿದೆ. ಈ ಕುರಿತು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಸದ್ಯದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು. ಜತೆಗೆ, ಕೇಂದ್ರ ರೈಲ್ವೆ ಇಲಾಖೆ ಸಚಿವರೊಂದಿಗೆ ಚರ್ಚೆ ಮಾಡಿ ಕೆಲವೇ ದಿನದಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ವಿವರಿಸಿದರು.

3 ವರ್ಷದಲ್ಲಿ 175 ಎಲ್‌ಸಿ ಮುಕ್ತ ಹಳಿ: ಬೆಂಗಳೂರಿನ 100 ಕಿ.ಮೀ ವ್ಯಾಪ್ತಿಯಲ್ಲಿರುವ 175 ರೈಲ್ವೆ ಲೆವಲ್‌ ಕ್ರಾಸಿಂಗ್‌ಗಳನ್ನು ಮುಂದಿನ ಮೂರು ವರ್ಷದಲ್ಲಿ ರೈಲ್ವೆ ಕೆಳ ಸೇತುವೆ ಅಥವಾ ರೈಲ್ವೆ ಮೇಲ್ಸೇತುವೆಗಳನ್ನಾಗಿ ಪರಿವರ್ತನೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಹೊಸದಾಗಿ ಕೈಗೊಳ್ಳುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಹಣ ನೀಡಲಿದೆ. ರೈಲ್ವೆ ಇಲಾಖೆಯ ಕಾಮಗಾರಿಗಳ ಬಗ್ಗೆ ಸಮನ್ವಯ ಸಾಧಿಸುವುದಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ದೇವನಹಳ್ಳಿ ಬಳಿ ಮೆಗಾ ರೈಲ್ವೆ ಕೋಚಿಂಗ್‌ ಟರ್ಮಿನಲ್‌: ಬೆಂಗಳೂರಿನ ರೈಲ್ವೆ ದಟ್ಟಣೆ ನಿರ್ವಾರಣೆ ಮತ್ತು ಹೊಸ ರೈಲು ಆರಂಭಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ದೇವನಹಳ್ಳಿಯ ಬಳಿ 500 ಕೋಟಿ ರು. ವೆಚ್ಚದಲ್ಲಿ ಮೆಗಾ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ಸ್ಥಾಪಿಸಲಾಗುತ್ತಿದೆ. ಯಲಹಂಕದ ರೈಲ್ವೆ ಚಾಸಿ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯವನ್ನು 90 ಸಾವಿರ ದಿಂದ 1.12 ಲಕ್ಷಕ್ಕೆ ಹೆಚ್ಚಿಸುವುದಕ್ಕೆ ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.

ಕುತಂತ್ರ ಬಿಡಿ: ಕೇಂದ್ರ ಸರ್ಕಾರದ ವಿರುದ್ಧ ಕುತಂತ್ರ ಮಾಡುವುದನ್ನು ಬಿಡಿ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, 1991ರ ಲೋಕಸಭೆಯಲ್ಲಿ ತಮ್ಮನ್ನು ಮೋಸದಿಂದ ಸೋಲಿಸಲಾಯಿತು ಎಂಬ ಹೇಳಿಕೆ ಕುರಿತು ಪ್ರಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಎಡವಟ್ಟು ಮೇಲೆ ಎಡವಟ್ಟು ಮಾಡ್ತಾ ಇದ್ದಾರೆ. ಯಾವುದಾದರೂ ಒಂದು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಿದಾರಾ?. ಧರ್ಮಸ್ಥಳದ್ದು ಏನಾಯಿತು? ಪ್ರಧಾನಿ ಮೋದಿ ಅವರ ಜನಪರ ಕೆಲಸ ಸಹಿಸದೇ ಈ ರೀತಿ ಮಾಡುತ್ತಿದ್ದಾರೆ ಎಂದು ವಿ.ಸೋಮಣ್ಣ ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಆಗಲ್ಲ: ಡಿಕೆ ಬ್ರದರ್ಸ್‌ ನಿಗೂಢ ಪೋಸ್ಟರ್‌ ಸಂಚಲನ
ಮುಂದಿನ ಚುನಾವಣೆಗೆ ನಾನು ನಿಲ್ಲದಿದ್ದರೂ ಸರಿ, ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿಯೇ ಸಿದ್ಧ!