Karnataka Politics: ಸಿಎಂ ಸಮ್ಮುಖದಲ್ಲಿ ಹೊರಟ್ಟಿ ಬಿಜೆಪಿ ಸೇರ್ಪಡೆ

By Girish GoudarFirst Published May 19, 2022, 4:49 AM IST
Highlights

*  ಜೆಡಿಎಸ್‌ ತೊರೆದು ಹೊರಟ್ಟಿ ಬಿಜೆಪಿ ಪಾಳಯಕ್ಕೆ
*  ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ: ಸಿಎಂ ಸಂತಸ
*  ಶೀಘ್ರ ಹುಬ್ಬಳ್ಳಿಯಲ್ಲಿ ಸ್ವಾಗತಕ್ಕೆ ದೊಡ್ಡ ಸಮಾರಂಭ
 

ಬೆಂಗಳೂರು(ಮೇ.19): ವಿಧಾನಪರಿಷತ್‌ ಸಭಾಪತಿ ಸ್ಥಾನ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಬಸವರಾಜ ಹೊರಟ್ಟಿ ಅವರು ಬುಧವಾರ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೊರಟ್ಟಿಅವರಿಗೆ ಬಿಜೆಪಿ ಪಕ್ಷದ ಬಾವುಟ ನೀಡಿ ಬರಮಾಡಿಕೊಳ್ಳಲಾಯಿತು. ಹೊರಟ್ಟಿಅವರು ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಸಭಾಪತಿ,ವಿಧಾನ ಪರಿಷತ್ ಸ್ಥಾನಕ್ಕೂ ಹೊರಟ್ಟಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಬಗ್ಗೆಯೂ ಸ್ಪಷ್ಟನೆ

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕಳೆದ 45 ವರ್ಷಗಳಿಂದ ವಿಧಾನಪರಿಷತ್‌ ಸದಸ್ಯರಾಗಿ, ಸಚಿವರಾಗಿ, ಸಭಾಪತಿಗಳಾಗಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕರಾದ ಹೊರಟ್ಟಿಅವರು ತಮ್ಮದೇ ಆದ ಶಕ್ತಿ ಹೊಂದಿದ್ದಾರೆ. ಅವರು ನಮ್ಮ ಪಕ್ಷ ಸೇರ್ಪಡೆಗಾಗಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ರಾಜೀನಾಮೆ ಪ್ರಕ್ರಿಯೆ ಎಲ್ಲ ಮುಗಿಸಿ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ದೊಡ್ಡ ಸಮಾರಂಭ ಆಯೋಜಿಸಿ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Family Politics: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಮುಡಿದರೇ ಹೊರಟ್ಟಿ?

ಹೊರಟ್ಟಿ ಅವರು ನಮ್ಮ ಪಕ್ಷಕ್ಕೆ ಬಂದಿರುವುದರಿಂದ ಆನೆ ಬಲ ಬಂದಂತಾಗಿದೆ. ಸುದೀರ್ಘ ಕಾಲ ವಿಧಾನಪರಿಷತ್‌ ಸದಸ್ಯರಾಗಿ ದಾಖಲೆ ನಿರ್ಮಿಸಿದ್ದಾರೆ. ಶಿಕ್ಷಕರ ಕಲ್ಯಾಣಕ್ಕಾಗಿ ಸಾಕಷ್ಟುಹೋರಾಟ ಮಾಡಿದ್ದಾರೆ. ಅಂಥ ಒಬ್ಬ ನಾಯಕನನ್ನು ನಮ್ಮ ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತದೆ. ಅವರಿಗೆ ಎಲ್ಲ ವರ್ಗಗಳ ಜನರ ಸಂಪರ್ಕ ಇದೆ. ಅವರ ಅನುಭವವನ್ನು ನಾವು ಬಳಸಿಕೊಳ್ಳುತ್ತೇವೆ. ಸಕಲ ಗೌರವ ಮತ್ತು ಅನುಭವಕ್ಕೆ ತಕ್ಕಂತೆ ಎಲ್ಲ ಅವಕಾಶ ನೀಡಲು ಪಕ್ಷದ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆ. ಬಿಜೆಪಿ ಬೆಳವಣಿಗೆಗೆ ಇದೊಂದು ಚರಿತ್ರಾರ್ಹ ದಿನ ಎಂದು ಬಣ್ಣಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್‌.ಅಶೋಕ್‌, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
 

click me!