* ಪಕ್ಷದ ಹಿರಿಯ ನಾಯಕರ ಮುಂದೆ ತಮ್ಮ ಇಂಗಿತ ವ್ಯಕ್ತಪಡಿಸಿದ ಸಚಿವ
* ಕೌಲ್‌ಬಜಾರ್ ಪ್ರದೇಶದ ಅಲ್ಪಸಂಖ್ಯಾತರ ಮತ ಹಿಡಿದಿಟ್ಟುಕೊಳ್ಳಲು ತಂತ್ರ
* ಶ್ರೀರಾಮುಲು-ಶಾಸಕ ಬಿ. ನಾಗೇಂದ್ರ ಮಧ್ಯೆ ತೀವ್ರ ಪೈಪೋಟಿ ಸಾಧ್ಯತೆ
ಮಂಜುನಾಥ ಕೆ.ಎಂ
ಬಳ್ಳಾರಿ(ಮೇ.18): ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಭಾರೀ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್‌ನ ಹಾಲಿ ಶಾಸಕ ಬಿ.ನಾಗೇಂದ್ರ ಹಾಗೂ ಶ್ರೀರಾಮುಲು ನಡುವಿನ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ನಿಚ್ಛಳವಾಗಿದೆ.
undefined
ಚುನಾವಣೆ ಗುರಿಯಾಗಿಸಿಕೊಂಡು ಅವರು ತೆರೆಮರೆಯ ಸಿದ್ಧತೆಯನ್ನು ಆರಂಭಿಸಿದ್ದಾರೆ. ಗ್ರಾಮೀಣ ಕ್ಷೇತ್ರಕ್ಕೆ ಬರುವ ನಗರದ ಕೌಲ್‌ಬಜಾರ್ ಪ್ರದೇಶದ ಅಲ್ಪಸಂಖ್ಯಾತ ಮತಗಳನ್ನು ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಕೌಲ್‌ಬಜಾರ್ ಪ್ರದೇಶದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ; ಸಮುದಾಯದ ಸ್ಥಳೀಯ ನಿರ್ದಿಷ್ಟಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಇದಕ್ಕಾಗಿ ಕೋಟ್ಯಂತರ ಹಣ ವ್ಯಯಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಉಳಿದ ಸಮುದಾಯಗಳ ಮತದಾರರನ್ನು ಸೆಳೆಯಲು ಬೇಕಾದ ಚುನಾವಣೆ ಪೂರ್ವ ಕ್ರಮಗಳತ್ತ ಮುಂದಡಿ ಇಟ್ಟಿದ್ದಾರೆ.
ಬಳ್ಳಾರಿ ಮೇಯರ್ ಸ್ಥಾನಕ್ಕಾಗಿ ಕೋಟಿ ಕೋಟಿ ಡೀಲ್: ಆರೋಪಿ, ದೂರುದಾರ ಇಬ್ಬರೂ ನಾಪತ್ತೆ..!
ಸ್ಪರ್ಧಿಸಿದರೆ ತೀವ್ರ ಪೈಪೋಟಿ
ಹಾಲಿ ಶಾಸಕ ಬಿ.ನಾಗೇಂದ್ರ ಸಹ ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾಗಿದ್ದು ಕ್ಷೇತ್ರದಲ್ಲಿ ಹಿಡಿತವಿದೆ. ಎಲ್ಲ ಸಮುದಾಯಗಳ ಜೊತೆ ನಿರಂತರ ಸಂಪರ್ಕದ ಜೊತೆ ಕ್ಷೇತ್ರದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್ ಕಡೆ ಹೆಚ್ಚು ವಾಲುವ ಸಾಧ್ಯತೆ ಇರುವುದರಿಂದ ಬಿಜೆಪಿ ಹೆಚ್ಚು ಸಂಪ್ರದಾಯ ಮತಗಳ ಮೇಲೆ ಅವಲಂಬಿತವಾಗಲಿದೆ. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ್ಯೂ ಕ್ಷೇತ್ರದಲ್ಲಿ ಸುಮಾರು .300 ಕೋಟಿಗಳಷ್ಟುಅಭಿವೃದ್ಧಿ ಕಾರ್ಯಗಳಾಗಿವೆ. ಗ್ರಾಮೀಣ ಕ್ಷೇತ್ರದಲ್ಲಿ ಈವರೆಗೆ ಯಾವುದೇ ಗಲಾಟೆ ಪ್ರಕರಣಗಳಿಲ್ಲ. ಕ್ಷೇತ್ರದಲ್ಲಿ ಶಾಂತಿ ನೆಲೆಸಲು ಶಾಸಕರು ಸಾಕಷ್ಟುಶ್ರಮಿಸಿದ್ದಾರೆ. ಇನ್ನು ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಕನಿಷ್ಠ ಹತ್ತುಬಾರಿ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಆಲಿಸಿ, ಪರಿಹರಿಸಿದ್ದಾರೆ. ಶಾಸಕ ನಾಗೇಂದ್ರ ಸದಾ ಜನರ ಜೊತೆಗಿದ್ದು ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದಿದ್ದಾರೆ. ಈ ಎಲ್ಲವೂ ಶಾಸಕ ನಾಗೇಂದ್ರರ ಗೆಲುವಿನ ಹಾದಿಯನ್ನು ಸುಗಮಗೊಳಿಸಲಿದೆ ಎಂಬುದು ಶಾಸಕ ಬೆಂಬಲಗರ ಅಂಬೋಣ.
ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರಂತೆ ಸಚಿವ ಶ್ರೀರಾಮುಲು: ಕದ್ದುಮುಚ್ಚಿ ಮಸೀದಿ ಅಭಿವೃದ್ಧಿಗೆ ಹಣ ಕೊಡ್ತಿದ್ದಾರಂತೆ!
ಇನ್ನು ಸಚಿವ ಶ್ರೀರಾಮುಲು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಗೆಲುವು ಸುಲಭದ ತುತ್ತಾಗಲಿದೆ ಎಂಬುದು ಬಿಜೆಪಿಗರ ಲೆಕ್ಕಾಚಾರ. ಶ್ರೀರಾಮುಲು ವಾಲ್ಮೀಕಿ ಸಮುದಾಯ ಹಾಗೂ ಬಿಜೆಪಿಯ ಪ್ರಭಾವಿ ನಾಯಕ. ವಾಲ್ಮೀಕಿ ಸಮುದಾಯ ಶ್ರೀರಾಮುಲುಗೆ ಸದಾ ಜತೆಗಿದೆ. ಕಮಲ ಪಕ್ಷದ ನಿಷ್ಠೆಯ ಮತಗಳು ಕೈ ತಪ್ಪುವುದಿಲ್ಲ. ಜಿಲ್ಲಾ ಸಚಿವರಾದ ಬಳಿಕ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನು ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಈಗಾಗಲೇ ನಾನಾ ತಂತ್ರಗಳನ್ನು ರೂಪಿಸಿಕೊಂಡಿದ್ದಾರೆ. ಈ ಎಲ್ಲವೂ ಚುನಾವಣೆ ಗೆಲುವಿಗೆ ಪೂರಕವಾಗಲಿದೆ ಎನ್ನುತ್ತಾರೆ ಕಮಲ ನಾಯಕರು.
ನಮ್ಮ ಶಾಸಕರು ಸದಾ ಕ್ಷೇತ್ರದ ಜನರ ಜೊತೆಗಿರುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟುಕೆಲಸ ಮಾಡಿದ್ದಾರೆ. ಮುಖ್ಯವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಗದ್ದಲ, ಗಲಾಟೆಗಳಿಲ್ಲದೆ ಜನರು ಶಾಂತಿಯಿಂದ ನೆಲೆಸುವಂತಾಗಿದೆ. ಕ್ಷೇತ್ರದ ಜನರು ಬಯಸುವುದೇ ಇದನ್ನೇ. ಹೀಗಾಗಿ ಶಾಸಕ ನಾಗೇಂದ್ರ ಅವರ ಗೆಲುವು ಸುಲಭವಿದೆ ಅಂತ ಬಳ್ಳಾರಿ ಕಾಂಗ್ರೆಸ್ ಯುವ ಮುಖಂಡ ಪಿ.ಜಗನ್ನಾಥ ತಿಳಿಸಿದ್ದಾರೆ.
ಗ್ರಾಮೀಣ ಕ್ಷೇತ್ರದಿಂದ ಸಚಿವ ಶ್ರೀರಾಮುಲು ಸ್ಪರ್ಧಿಗೆ ಅವಕಾಶ ನೀಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂದು ಪಕ್ಷದ ಹಿರಿಯ ನಾಯಕರು ತೀರ್ಮಾನಿಸುತ್ತಾರೆ. ನಮ್ಮ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟುಶ್ರಮಿಸುತ್ತಿದ್ದಾರೆ. ಸದಾ ಜನರ ಒಡನಾಡಿಯಾಗಿದ್ದಾರೆ. ಒಂದು ವೇಳೆ ಸ್ಪರ್ಧಿಸಿದರೂ ಗೆಲುವು ಸುಲಭವಾಗಲಿದೆ ಅಂತ ಬಳ್ಳಾರಿ ಜಿಲ್ಲೆ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ಹೇಳಿದ್ದಾರೆ.