MLC Election: ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಹೊರಟ್ಟಿ ಬಾದಶಾ!

By Kannadaprabha News  |  First Published Jun 15, 2022, 11:30 PM IST

*  8ನೇ ಬಾರಿಯೂ ಗೆಲವು ಸಾಧಿಸಿ ಗೆಲುವಿನ ಸರದಾರರಾದ ಬಸವರಾಜ ಹೊರಟ್ಟಿ
*  ಸಾಂಘಿಕ ಪ್ರಯತ್ನದ ಹಿನ್ನೆಲೆಯಲ್ಲಿ ಸರಳವಾಗಿ ಗೆದ್ದ ಹೊರಟ್ಟಿ
*  ಬಸವರಾಜ ಗುರಿಕಾರ ತೀವ್ರ ಪ್ರಯತ್ನಿಸಿದರೂ ಕೈಗೂಡದ ಗೆಲುವಿನ ಆಸೆ
 


ಬಸವರಾಜ ಹಿರೇಮಠ

ಧಾರವಾಡ(ಜೂ.15): ಬಿಜೆಪಿಯ ಸಾಂಘಿಕ ಪ್ರಯತ್ನ, ಕಾಂಗ್ರೆಸ್ಸಿನ ಒಲ್ಲದ ಮನಸ್ಸಿನ ಪ್ರಚಾರ, ಜೆಡಿಎಸ್‌ನ ನಿರಾಸಕ್ತಿಯ ಫಲವೇ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಅವರು 8ನೇ ಬಾರಿ ಐತಿಹಾಸಿಕ ಗೆಲುವು ದಾಖಲಿಸಿಸದರು!

Tap to resize

Latest Videos

1980 ರಿಂದ 2022ರ ವರೆಗಿನ 42 ವರ್ಷಗಳ ಕಾಲ ಬಸವರಾಜ ಹೊರಟ್ಟಿನಿರಂತರವಾಗಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಸೋಲಿಲ್ಲದ ಸರದಾರ ಎನಿಸಿದ್ದಾರೆ. ಇದೀಗ 8ನೇ ಬಾರಿಯೂ ಗೆಲುವು ಸಾಧಿದ್ದಾರೆ. ಜೆಡಿಎಸ್‌ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದಾಗ, ಹೊರಟ್ಟಿಈ ಬಾರಿ ಜೆಡಿಎಸ್‌ನಲ್ಲಿದ್ದರೆ ಸೋಲು ಅನುಭವಿಸುತ್ತಿದ್ದರು. ಅದಕ್ಕಾಗಿಯೇ ಬಿಜೆಪಿಗೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಅದಾವುದಕ್ಕೂ ಕಿವಿಗೊಡದೆ ಬಿಜೆಪಿ ಮುಖಂಡರೊಂದಿಗೆ ಸೌಹಾರ್ದತೆಯೊಂದಿಗೆ ಚುನಾವಣೆ ಎದುರಿಸಿ ಹೊರಟ್ಟಿಗೆಲುವಿನ ಹಾದಿ ಸರಳ ಮಾಡಿಕೊಂಡಿದ್ದು ಅವರ ರಾಜಕೀಯ ಚಾಣಾಕ್ಷತೆಗೆ ಸಾಕ್ಷಿ ಎನಿಸಿದೆ.

MLC Elections Result: ರಾಜಕೀಯ ಇತಿಹಾಸದಲ್ಲೇ ದಾಖಲೆ ಬರೆದ ಹೊರಟ್ಟಿ

ಒಂದಾದ ಎರಡು ಶಕ್ತಿಗಳು:

ಬಸವರಾಜ ಹೊರಟ್ಟಿಅವರ ಅಪಾರ ಅನುಭವ, ಶಿಕ್ಷಕರೊಂದಿಗೆ ಒಡನಾಟ ಬಳಸಿಕೊಂಡ ಬಿಜೆಪಿ ಮುಖಂಡರು ತಮ್ಮ ಶಕ್ತಿಯನ್ನು ಸಹ ಈ ಚುನಾವಣೆಯಲ್ಲಿ ಧಾರೆ ಎರೆದರು. ಈ ಹಿನ್ನೆಲೆಯಲ್ಲಿ ಹೊರಟ್ಟಿಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆದ್ದರು. ಇಷ್ಟುವರ್ಷಗಳ ಸಂಘಟನೆ, ಶಿಕ್ಷಕರಿಗಾಗಿ ತಾವು ಮಾಡಿದ ಕೆಲಸ-ಕಾರ್ಯಗಳನ್ನು ಈಗಿನ ಪೀಳಿಗೆಗೆ ತಿಳಿಸಲು ಯಶಸ್ವಿಯಾದ ಹೊರಟ್ಟಿಗೆ ಬಿಜೆಪಿ ಉತ್ತಮ ಸಾಥ್‌ ನೀಡಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡ್ಮೂರು ಬಾರಿ ಪ್ರಚಾರಕ್ಕೆ ಇಳಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಸತತ ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸದಾ ಹೊರಟ್ಟು ಬೆನ್ನಿಗೆ ನಿಂತರು. ಕ್ಷೇತ್ರದ ನಾಲ್ಕೂ ಜಿಲ್ಲೆಗಳಲ್ಲಿನ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಹೊರಟ್ಟಿಗೆಲುವಿಗೆ ಶತಾಯ-ಗತಾಯ ಪ್ರಯತ್ನ ನಡೆಸಿದರು. ಎರಡು ಶಕ್ತಿಗಳು ಒಂದುಗೂಡಿದ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿಅವರಿಗೆ ಜಯದ ಬಾಗಿಲು ಸರಳವಾಗಿ ತೆರೆದುಕೊಂಡಿತು. ಮತ್ತು ಭಾರೀ ಅಂತರದ ಗೆಲುವು ತಂದುಕೊಟ್ಟಿತು.

ಗುರಿಕಾರ ಉತ್ತಮ ಪೈಪೋಟಿ:

ಈ ಬಾರಿ ಚುನಾವಣೆಯಲ್ಲಿ ಬಸವರಾಜ ಗುರಿಕಾರ ಅವರಿಗೂ ಅವಕಾಶಗಳಿದ್ದವು. ಅವರು ಸಹ ನಾಲ್ಕು ದಶಕಗಳ ಕಾಲ ಶಿಕ್ಷಕರ ಕ್ಷೇತ್ರದಲ್ಲಿ ದುಡಿದವರು. ಗುರಿಕಾರ ಅವರು ಹೊರಟ್ಟಿಗೆ ತೀವ್ರ ಪೈಪೋಟಿ ನೀಡಿದ್ದರಿಂದ ಚುನಾವಣೆ ತೀವ್ರ ತುರುಸು ಪಡೆದುಕೊಂಡಿತ್ತು. ಹೀಗಾಗಿ ಹೊರಟ್ಟಿಮನಸ್ಸಿನಲ್ಲಿ ತುಸು ತಳಮಳವಿತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ.

ಹೊರಟ್ಟಿ ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದರೂ ಗುರಿಕಾರ ಕಡಿಮೆ ಮತಗಳನ್ನೇನು ಪಡೆದಿಲ್ಲ. ಏಳು ಬಾರಿ ಗೆದ್ದಿರುವ, ಬಿಜೆಪಿ ಶಕ್ತಿಯೊಂದಿಗೆ ಹೊರಟ್ಟಿಸ್ಪರ್ಧಿಸಿ 9266 ಮತ ಪಡೆದರೆ, ಗುರಿಕಾರ ಅವರು ಮೊದಲ ಬಾರಿಯ ಚುನಾವಣೆಯಲ್ಲಿಯೇ 4597 ಮತ ಪಡೆದರು. ಗುರಿಕಾರ ಅವರು ಮೂಲತಃ ಪ್ರಾಥಮಿಕ ಶಾಲಾ ಸಂಘಟನೆಯಿಂದ ಬಂದವರು. ಆದರೆ, ಪ್ರಾಥಮಿಕ ಶಾಲಾ ಶಿಕ್ಷಕರು ಮತದಾನಕ್ಕೆ ಅನರ್ಹರು. ಪ್ರೌಢಶಾಲೆ, ಕಾಲೇಜು ಹಾಗೂ ಉನ್ನತ ಶಿಕ್ಷಣದ ಶಿಕ್ಷಕರು ಮಾತ್ರ ಮತದಾರರು. ಇಷ್ಟಾಗಿಯೂ ಗುರಿಕಾರ ವೈಯಕ್ತಿಕವಾಗಿ ನಾಲ್ಕು ಜಿಲ್ಲೆಗಳ ಎಲ್ಲ ಶಿಕ್ಷಕ ಮತದಾರರನ್ನು ಭೇಟಿಯಾಗಿ ತಮ್ಮ ಅನುಭವ, ಸಂಘಟನೆ ಹಾಗೂ ಶಿಕ್ಷಕರಿಗಾಗಿ ತಾವು ಮಾಡಬೇಕಾದ ಕೆಲಸ-ಕಾರ‍್ಯಗಳ ಬಗ್ಗೆ ಮನವರಿಕೆ ಮಾಡಿದರು. ಆದರೆ, ಅವರಿಗೆ ಕಾಂಗ್ರೆಸ್‌ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ನೀಡಲಿಲ್ಲ ಎನ್ನಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಾರಿ ಬಂದು ಹೋಗಿರುವುದನ್ನು ಹೊರತುಪಡಿಸಿ ಹೇಳಿಕೊಳ್ಳುವ ರೀತಿಯಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಮುಖಂಡರು ಸಾಥ್‌ ನೀಡಲಿಲ್ಲ. ಶಿಕ್ಷಕರಿಂದ ಗುರಿಕಾರ ಅವರಿಗೆ ಮತ ಕೊಡಿಸುವಷ್ಟುಕಾಂಗ್ರೆಸ್ಸಿನಿಂದ ಸಾಧ್ಯವಾಗಿಲ್ಲ ಎಂದೇ ಕ್ಷೇತ್ರದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಶಿಷ್ಯನಿಗೆ ಮುಖಭಂಗ:

ಇನ್ನು, ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ ಹೊರಟ್ಟಿಅವರ ಶಿಷ್ಯರಲ್ಲಿ ಒಬ್ಬರಾದ ಶ್ರೀಶೈಲ ಗಡದಿನ್ನಿ ಇಡೀ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪರ್ಧೆಗೆ ಇಳಿಯಲಿಲ್ಲ. ಗುರು-ಶಿಷ್ಯರ ಮಧ್ಯೆ ಸ್ಪರ್ಧೆ ಎನ್ನುವ ರೀತಿಯಲ್ಲಾಗದೇ ಗಡದಿನ್ನಿ ಬರೀ 273 ಮತ ಪಡೆಯುವಲ್ಲಿ ಮಾತ್ರ ಸಮರ್ಥರಾದರು. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾರೂ ಮೂರಂಕಿ ಮತ ಪಡೆಯಲಿಲ್ಲ. ಒಂದರ್ಥದಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಹೊರಟ್ಟಿಬಾದಷಾ ಆಗಿಯೇ ಮುಂದುವರಿದರು.
ಏಳು ಅವಧಿ ಕಾಲ ಅದಷ್ಟೋ ಶಿಕ್ಷಕರ ಸಮಸ್ಯೆಗಳಿಗೆ ಬಸವರಾಜ ಹೊರಟ್ಟಿಪರಿಹಾರ ಒದಗಿಸಿದ್ದರೂ ಕಾಲ್ಪನಿಕ ವೇತನ, ಅತಿಥಿ ಉಪನ್ಯಾಸಕರ ಸಮಸ್ಯೆ, ಖಾಸಗಿ ಸಂಸ್ಥೆಗಳಿಗೆ ಅನುದಾನ ಸೇರಿದಂತೆ ಬೆಟ್ಟದಷ್ಟುಸಮಸ್ಯೆಗಳು ಶಿಕ್ಷಕರನ್ನು ಇನ್ನೂ ಕಾಡುತ್ತಿದ್ದವು. ಹೀಗಾಗಿ ಹೊರಟ್ಟಿಅವರ ಮೇಲೆ ತುಂಬ ನಿರೀಕ್ಷೆ ಇಟ್ಟು ಹಿಂದಿನ, ಈಗಿನ ಪೀಳಿಗೆ ಶಿಕ್ಷಕರು ಮತ್ತೊಮ್ಮೆ ಆಶೀರ್ವಾದ ಮಾಡಿದ್ದು ಆಡಳಿತ ಪಕ್ಷದಲ್ಲಿದ್ದುಕೊಂಡು ಹೊರಟ್ಟಿಶಿಕ್ಷಕರ ಋುಣ ಹೇಗೆ ತೀರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪರಿಷತ್ ಚುನಾವಣೆ ಫಲಿತಾಂಶ: ಬಿಜೆಪಿಯ ಬಸವರಾಜ ಹೊರಟ್ಟಿಗೆ ದಾಖಲೆ ಗೆಲುವು

ಮೂರು ತಲೆಮಾರಿನ ಶಿಕ್ಷಕರು ನನಗೆ ಮತ ನೀಡಿದ್ದಾರೆ. ದೇಶದಲ್ಲಿಯೇ ವಿಧಾನಪರಿಷತ್‌ ಇತಿಹಾಸದಲ್ಲಿ ಯಾರೂ 8 ಬಾರಿ ನಿರಂತರವಾಗಿ ಗೆಲುವು ಸಾಧಿಸಿಲ್ಲ. ಹೊಸ ಪೀಳಿಗೆಯ ಮತದಾರರು ಸಹ ನನ್ನನ್ನು ಸ್ವೀಕರಿಸಿದ್ದು ಸಾಧ್ಯವಾದಷ್ಟುಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಆದರೆ, ಪ್ರಜ್ಞಾವಂತ ಮತದಾರರು ಎನಿಸಿಕೊಂಡ ಶಿಕ್ಷಕರು 1200ಕ್ಕೂ ಹೆಚ್ಚು ಮತಗಳನ್ನು ಅಸಿಂಧುಗೊಳಿಸಿದ್ದು ಬೇಸರ ತಂದಿದೆ ಅಂತ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಶಿಕ್ಷಕರಿಗಾಗಿ ನಾಲ್ಕು ದಶಕಗಳ ಕಾಲ ಸಂಘಟನೆ, ಹೋರಾಟ ಮಾಡಿದ್ದೇನೆ. ಈ ಕಾರಣದಿಂದ ಅವರ ಸಮಸ್ಯೆಗಳನ್ನು ಅವರ ಪ್ರತಿನಿಧಿಯಾಗಿ ಪರಿಹರಿಸಲು ಸ್ಪರ್ಧೆ ಬಯಸಿದ್ದೇನು. ಆದರೆ, ಮತದಾರರ ನಿರ್ಣಯವೇ ಅಂತಿಮ. ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಸಹ ಶಿಕ್ಷಕರ ಸಮಸ್ಯೆಗಳಿಗೆ ಹೋರಾಟ ಮಾತ್ರ ನಿರಂತರ ಇರುತ್ತದೆ ಅಂತ ಬಸವರಾಜ ಗುರಿಕಾರ ತಿಳಿಸಿದ್ದಾರೆ.
 

click me!