ಬಸವರಾಜ ಹೊರಟ್ಟಿ ಸಭಾಪತಿ ಅಂತಿಮ?

By Kannadaprabha NewsFirst Published Dec 18, 2022, 6:27 AM IST
Highlights

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದ ವೇಳೆ ಈ ತಿಂಗಳ 21ರಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಇನ್ನೆರಡು ದಿನಗಳಲ್ಲಿ ಹೊರಟ್ಟಿಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.

ಬೆಂಗಳೂರು/ಧಾರವಾಡ(ಡಿ.18):  ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರೇ ಅಧಿಕೃತ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದ ವೇಳೆ ಈ ತಿಂಗಳ 21ರಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಇನ್ನೆರಡು ದಿನಗಳಲ್ಲಿ ಹೊರಟ್ಟಿಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.

ಜೆಡಿಎಸ್‌ನಿಂದ ಪರಿಷತ್‌ ಸದಸ್ಯರಾಗಿದ್ದ ವೇಳೆ ಬಿಜೆಪಿ ಬೆಂಬಲದೊಂದಿಗೆ ಹೊರಟ್ಟಿಅವರು ಸಭಾಪತಿ ಸ್ಥಾನ ಅಲಂಕರಿಸಿದ್ದರು. ನಂತರ ಚುನಾವಣೆ ಎದುರಾದಾಗ ಬಿಜೆಪಿ ನಾಯಕರ ಆಹ್ವಾನದ ಮೇರೆ ಜೆಡಿಎಸ್‌ ತೊರೆದು ಬಂದರು. ಹಾಗೆ ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಮುಂದೆ ಸಭಾಪತಿ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ಭರವಸೆಯನ್ನೂ ನೀಡಿದ್ದರು. ನಂತರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಭಾರಿ ಬಹುಮತದಿಂದ ಗೆಲುವು ಸಾಧಿಸಿ ಹಲವು ತಿಂಗಳಾದರೂ ಅವರಿಗೆ ಸಭಾಪತಿ ಸ್ಥಾನ ನೀಡಿರಲಿಲ್ಲ. ಇದೀಗ ಅಂತಿಮವಾಗಿ ಚುನಾವಣೆ ನಿಗದಿಯಾಗಿದ್ದು, ಹೊರಟ್ಟಿಅವರಿಗೆ ಅವಕಾಶ ಕೂಡಿ ಬಂದಿದೆ ಎನ್ನಲಾಗಿದೆ.

ನನ್ನನ್ನು ಸಭಾಪತಿ ಮಾಡಲು ನಾಲ್ವರ ವಿರೋಧ: ಬಸವರಾಜ ಹೊರಟ್ಟಿ

ರವಿಕುಮಾರ್‌ ಖಚಿತಪಡಿಸಿದ್ದಾರೆ- ಹೊರಟ್ಟಿ:

ಈ ಸಂಬಂಧ ಶನಿವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಶನಿವಾರ ಬೆಳಿಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪರಿಷತ್‌ ಸದಸ್ಯ ಎನ್‌.ರವಿಕುಮಾರ ಅವರು ದೂರವಾಣಿ ಮೂಲಕ ಮಾತನಾಡಿ ನೀವು ಅಭ್ಯರ್ಥಿಗಳಾಗಿದ್ದೀರಿ ಎಂದು ಮಾಹಿತಿ ನೀಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

‘ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ನಾನು ಪ್ರತಿಬಾರಿಯೂ ಹೇಳುತ್ತ ಬಂದಿದ್ದೇನೆ. ಅಧಿವೇಶನದಲ್ಲಿ ಧರಣಿ ಮಾಡುವುದು ಬೇಡ. ಈ ಹಿಂದೆ ನಾನು ಸಭಾಪತಿಯಾಗಿದ್ದ ವೇಳೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದೇ ಎರಡು ದಿನ ಮೀಸಲಿಟ್ಟಿದ್ದೆ. ಈ ಭಾಗದ ಸಮಸ್ಯೆಗಳಿಗೆ ಪ್ರತಿಫಲ ಸಿಗಬೇಕು. ನಮ್ಮದು ಸಮಗ್ರ ಕರ್ನಾಟಕ ಬೇರೆ ಮಾತೇ ಇಲ್ಲ. ಆದರೆ, ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಸರ್ಕಾರ, ಸದಸ್ಯರು ಮುಂದಾಗಬೇಕು. ಡಿ. 19 ರಿಂದ 30ರವರೆಗೆ ನಡೆಯುವ ಸದನದಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.
 

click me!