
ಬೆಂಗಳೂರು(ಆ.07): ಸುಮಾರು ಮೂರು ತಿಂಗಳಿಂದ ನೆನೆಗುದಿಗೆ ಬಿದ್ದಿರುವ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ಮತ್ತೆ ಚಟುವಟಿಕೆ ಗರಿಗೆದರಿದ್ದು, ಆ ಹುದ್ದೆಯ ಆಕಾಂಕ್ಷಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ.
ಭಾನುವಾರ ಸಂಜೆ ದೆಹಲಿಗೆ ತೆರಳಿದ ಬೊಮ್ಮಾಯಿ ಅವರು ಸೋಮವಾರ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತಿತರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆರಿಗೆ ಹೆಚ್ಚಳವಾದಲ್ಲಿ ಮಧ್ಯಮ ವರ್ಗಕ್ಕಿಂತ, ದೊಡ್ಡವರಿಂದಲೇ ತೆರಿಗೆ ವಸೂಲಿ ಕಷ್ಟ; ಮಾಜಿ ಸಿಎಂ ಬೊಮ್ಮಾಯಿ
ಸದ್ಯ ಬಿಜೆಪಿಯಲ್ಲಿ ಮಹತ್ವದ ಹುದ್ದೆಗಳಾಗಿರುವ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಗಳ ಪೈಕಿ ಒಂದಕ್ಕೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಚರ್ಚೆ ನಡೆದಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಅಥವಾ ಹಿಂದುಳಿದ ಸಮುದಾಯವನ್ನು ಪರಿಗಣಿಸುವ ಸಾಧ್ಯತೆ ಕಂಡು ಬರುತ್ತಿದೆ. ಹೀಗಾಗಿ, ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಹಾಗಾದರೆ ಬೊಮ್ಮಾಯಿ ಅವರನ್ನೇ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅಂತಿಮಗೊಳಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಬಿಜೆಪಿ ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಆಗಿರುವವರು ಬೊಮ್ಮಾಯಿ ಒಬ್ಬರೇ. ಹೀಗಾಗಿ, ಅವರನ್ನು ನೇಮಕ ಮಾಡುವುದರ ಬಗ್ಗೆ ಚರ್ಚಿಸುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಬೇರೊಬ್ಬರನ್ನು ನೇಮಕ ಮಾಡುವುದಾದರೂ ಅದರ ಬಗ್ಗೆ ಬೊಮ್ಮಾಯಿ ಅವರ ಅಭಿಪ್ರಾಯ ಪಡೆಯಬಹುದು ಎಂದು ತಿಳಿದು ಬಂದಿದೆ.
ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ: ಬೊಮ್ಮಾಯಿ ಲೇವಡಿ
ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ಮುಂದಿನ ವಾರಕ್ಕೆ ಮೂರು ತಿಂಗಳು ತುಂಬಲಿದೆ. ಇದುವರೆಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ನೇಮಕವಾಗಿಲ್ಲ. ಈ ವೇಳೆ ಬಜೆಟ್ ಅಧಿವೇಶನವೂ ನಡೆಯಿತು. ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಶಾಸಕರು ನಾಯಕನಿಲ್ಲದೆ ಕಲಾಪ ಎದುರಿಸಿದರು.
ವೀರಶೈವರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ?
- ರಾಜ್ಯಾಧ್ಯಕ್ಷ ಸ್ಥಾನ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ನೇಮಕಾತಿ ಬಾಕಿ
- ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ/ಹಿಂದುಳಿದ ವರ್ಗಕ್ಕೆ ನೀಡಿ, ವಿಪಕ್ಷ ಸ್ಥಾನ ಲಿಂಗಾಯತರಿಗೆ ನೀಡುವ ಸಾಧ್ಯತೆ
- ಬಿಜೆಪಿ ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಆಗಿರುವವರು ಸದ್ಯ ಬೊಮ್ಮಾಯಿ ಒಬ್ಬರೇ
- ಹೀಗಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಅವರನ್ನೇ ನೇಮಿಸುವ ಬಗ್ಗೆ ಚರ್ಚಿಸುವ ಸಾಧ್ಯತೆ
- ಅಥವಾ ವಿಪಕ್ಷ ನಾಯಕನ ಆಯ್ಕೆಗೆ ಅವರ ಅಭಿಪ್ರಾಯ ಪಡೆಯಲು ವರಿಷ್ಠರ ಒಲವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.