
ಬಾಗಲಕೋಟೆ(ಜೂ.08): ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಚುನಾವಣೆಯ ಫಲಿತಾಂಶ ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆ ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿರುವ ಲಡ್ಡುಮುತ್ಯಾ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಅತ್ಯಂತ ಮಹತ್ವದ್ದಾಗಿರುವ ಈ ಚುನಾವಣೆಗೆ ಪದವೀಧರರು ರಾಜ್ಯದ ರಾಜಕಾರಣವನ್ನು ಅರಿತುಕೊಂಡವರಾಗಿದ್ದಾರೆ. 2013ರಿಂದ 18ರವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರದಲಿದ್ದಾಗ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಹಾಕಿರುವ ನಾಂದಿಯನ್ನು ಗಮನಿಸಿದ್ದಾರೆ. ಆದರೆ, ಸದ್ಯ ಬಿಜೆಪಿ ಸರ್ಕಾರ ಚುನಾಯಿತ ಸರ್ಕಾರವಾಗಿರದೇ ಆಪರೇಶನ್ ಕಮಲದ ಮೂಲಕ ವಾಮಮಾರ್ಗದ ಸರ್ಕಾರ ಎಂಬುದು ಪದವೀಧರರಿಗೂ ತಿಳಿದಿದೆ ಎಂದರು.
ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಸದ್ಯ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾಯಿತ ಮುಖ್ಯಮಂತ್ರಿಯಲ್ಲ. ಬದಲಾಗಿ ನೇಮಕಗೊಂಡ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 123 ಜನ ಎಂಎಲ್‌ಎಗಳ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ ಎಂದು ಹೇಳಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಅವರು ಚುನಾಯಿತ ಮುಖ್ಯಮಂತ್ರಿ ಆಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸದ್ಯದ ಸರ್ಕಾರವಂತೂ ಅನೈತಿಕ ಶಿಶುವಾಗಿದ್ದು, ಇಂತಹ ಸರ್ಕಾರದಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಎಂದು ನಡೆಯದ ಭ್ರಷ್ಟಾಚಾರದ ಆರೋಪ ಈ ಸರ್ಕಾರದ ಮೇಲಿದ್ದು, ಪ್ರಧಾನಿಯವರೆಗೆ ಶೇ.40ರಷ್ಟು ಕಮಿಷನ್ ಆಧಾರದ ಮೇಲೆ ಈ ಸರ್ಕಾರ ನಡೆಯುತ್ತಿದೆ ಎಂದು ಗುತ್ತಿಗೆದಾರರು ಪತ್ರ ಬರೆಯುತ್ತಾರೆ ಎಂದರೆ ಸರ್ಕಾರದ ಮಾನ ಎಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯುತ್ತಿದೆ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಶಿಕ್ಷಕರ ಕ್ಷೇತ್ರಕ್ಕೆ ಅರುಣ ಶಹಾಪೂರ ಅವರ ಕೊಡುಗೆ ಏನು ಎಂದು ಕೇಳಿದ ಅವರು ಪ್ರಕಾಶ ಹುಕ್ಕೇರಿ ಅವರು ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ಮಾದರಿ ಆಡಳಿತವನ್ನು ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿನ ಭಿನ್ನಮತ ನಾನೇ ಶಮನಗೊಳಿಸುವೆ: ಲಕ್ಷ್ಮಣ ಸವದಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಸದ್ಯದ ಸರ್ಕಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಸರ್ಕಾರವಾಗಿದ್ದು, ಜನತೆ ನಿಶ್ಚಿತವಾಗಿಯು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದರು.
ಸಭೆಯಲ್ಲಿ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಸುನೀಲ ಸಂಕ ಮಾತನಾಡಿದರು, ವೇದಿಕೆ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಶಾಸಕ ಆನಂದ ನ್ಯಾಮಗೌಡ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಉಮಾಶ್ರೀ, ಅಜಯಕುಮಾರ ಸರನಾಯಕ, ಎಚ್.ವೈ.ಮೇಟಿ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ, ಮುಖಂಡರಾದ ಎಂ.ಬಿ.ಸೌದಾಗರ, ನಾಗರಾಜ ಹದ್ಲಿ, ಸತೀಶ ಬಂಡಿವಡ್ಡರ, ನಿಂಗನಗೌಡ ಪಾಟೀಲ, ಹಾಜಿಸಾಬ್ ದಂಡಿನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಸೇರಿದಂತೆ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.