* ಚಡ್ಡಿ, ಆರ್‌ಎಸ್‌ಎಸ್, ಹೆಗಡೆವಾರ್ ಬಗ್ಗೆ ಸಿದ್ದರಾಮಯ್ಯ ಓದಿ ತಿಳಿದುಕೊಳ್ಳಲಿ
* ಆರ್‌ಎಸ್‌ಎಸ್ ಅನ್ನು ನಮ್ಮ ತಂದೆ ತಾಯಿ ಸ್ಥಾನದಲ್ಲಿ ನೋಡುತ್ತೇವೆ
* ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ
ಬೆಳಗಾವಿ(ಜೂ.08): ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಚಡ್ಡಿ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದಿರುವ ಸಚಿವ ಮುರುಗೇಶ ನಿರಾಣಿ ಅವರು, ಹೆಗಡೆವಾರ್ ಇತಿಹಾಸ ಒಂದು ಸಾರಿ ಓದಿದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಬರುತ್ತಾರೆ. ಚಡ್ಡಿ ಬಗ್ಗೆ, ಆರ್‌ಎಸ್‌ಎಸ್ ಬಗ್ಗೆ ಹೆಗಡೆವಾರ್ ಬಗ್ಗೆ ಓದಿ ತಿಳಿದುಕೊಳ್ಳಲಿ. ನಂತರ ಮಾತನಾಡಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಗೆ ಸಚಿವ ಮುರಗೇಶ ನಿರಾಣಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಡ್ಡಿಗಳು ಚಡ್ಡಿ ಕೆಲಸ ಮಾಡದೇ ಮತ್ತೆ ಏನ್ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಅಪಾರವಾದ ಅನುಭವ ಇದೆ. ನಮ್ಮ ರಾಜ್ಯದ ಅಭಿವೃದ್ಧಿಯಲ್ಲಿ ಅವರದ್ದೂ ಅಳಿಲು ಸೇವೆ ಇದೆ. ನಾವು ಅವರ ಬಗ್ಗೆ ನಿರಾಕರಣೆ ಮಾಡುವುದಿಲ್ಲ. ಅವರಿಗೆ ಮಾಡಲು ಸಾಕಷ್ಟುಕೆಲಸ ಇದೆ. ಅದರ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.
ನೆಹರು, ಇಂದಿರಾ ಗಾಂಧಿ ಆರ್‌ಎಸ್‌ಎಸ್ ನಾಶಪಡಿಸಲು ಪ್ರಯತ್ನಿಸಿದ್ರೂ ಏನು ಆಗಿಲ್ಲ: ಕಟೀಲ್
ಆರ್‌ಎಸ್‌ಎಸ್ ಬಗ್ಗೆ ನೆಗೆಟಿವ್ ಮಾತನಾಡುತ್ತಿದ್ದಾರೆ. ಅದರ ಬಗ್ಗೆ ಆಳವಾದ ಅಭ್ಯಾಸ ಮಾಡಿದರೆ ಅವರ ಮನ ಪರಿವರ್ತನೆ ಆಗುತ್ತದೆ. ಸಿದ್ದರಾಮಯ್ಯ ಹೆಗಡೆವಾರ್ ಇತಿಹಾಸ ಒಂದ್ಸಾರಿ ಓದಿದರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುತ್ತಾರೆ. ಆದರೆ ಹೆಗಡೆವಾರ್ ಬಗ್ಗೆ ಅವರು ಓದಿಲ್ಲ ಎಂದರು.
ಅವರಿಗೆ ಸಮಾಜ, ನಮ್ಮ ರಾಜ್ಯ ಅಭಿವೃದ್ಧಿಪಡಿಸಿದ ಬಗ್ಗೆ ಜ್ಞಾನವಿದೆ. ಅವರ ವಯಸ್ಸಿಗೆ, ಅವರ ಅನುಭವಕ್ಕೆ ನಾನು ಪ್ರಶ್ನೆ ಮಾಡಲ್ಲ. ಅವರು ಓದಿಲ್ಲ. ಅವರು ಓದಲೆಂದು ವಿನಂತಿಸುವೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ. ಆರ್‌ಎಸ್‌ಎಸ್ ನಿಸ್ವಾರ್ಥದಿಂದ ಸೇವೆ ಮಾಡುವಂತವರು ಎಂದರು.
ಬಿಜೆಪಿಯವರೆಲ್ಲಾ ಆರ್‌ಎಸ್‌ಎಸ್‌ನ ಕೈಗೊಂಬೆಗಳು ಎಂಬ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ನಾವು ನಮ್ಮ ತಂದೆ ತಾಯಿ ಮಾತು ಕೇಳುತ್ತಿದ್ದೇವೆ. ನಮ್ಮ ತಂದೆ ತಾಯಿ ಮಾತು ಕೇಳೋದು ಕೈಗೊಂಬೆ ಅಂತಾ ಅರ್ಥ ಅಲ್ಲ. ಆರ್‌ಎಸ್‌ಎಸ್ ಅನ್ನು ನಮ್ಮ ತಂದೆ ತಾಯಿ ಸ್ಥಾನದಲ್ಲಿ ನೋಡುತ್ತಿರುತ್ತೇವೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಆದರೆ, ಕೈಗೊಂಬೆ ಅಂತಾ ಅಲ್ಲ, ಅದು ನಮ್ಮ ಕರ್ತವ್ಯ ಎಂದರು.